ಸ್ಟಾರ್ಟಪ್ ವಲಯದಲ್ಲಿ ಕರ್ನಾಟಕದ ಮುಂಚೂಣಿಯನ್ನು ಕಾಯ್ದುಕೊಳ್ಳಲು ಮೂರು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಶುಕ್ರವಾರ ವಿಧಾಸನಭೆಯಲ್ಲಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಬೆಂಗಳೂರು ನಗರದಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಒಟ್ಟು 233 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ನಗರಿಯನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಂದ ಪ್ರಾರಂಭವಾದ ನವೀನ ಪ್ರಯತ್ನಗಳು, ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ರಾಜೀವ್ ಗಾಂಧಿ ವಾಣಿಜ್ಯೋದ್ಯಮ ಕಾರ್ಯಕ್ರಮಗಳಡಿ ಜ್ಞಾನಾಧಾರಿತ ಮತ್ತು ತಂತ್ರಜ್ಞಾನ ಚಾಲಿತ ಪರಿಕಲ್ಪನೆಗಳು ಮತ್ತು ನಾವೀನ್ಯತೆಗಳನ್ನು ಪೋಷಿಸಲಾಗುವುದು ಎಂದಿದ್ದಾರೆ. ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಮಹಿಳಾ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆಯಲ್ಲಿ ಬೆಂಬಲ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಇನ್ನೋವೇಶನ್ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಲು ಸಿ-ಕ್ಯಾಂಪ್ನ ಅಗ್ರಿ ಇನ್ನೋವೇಶನ್ ಪಾರ್ಕ್ಗೆ 5 ಎಕರೆ ಭೂಮಿಯನ್ನು ಮೀಸಲಿಡಲು ಉದ್ದೇಶ ಹೊಂದಲಾಗಿದೆ ಎಂದು ಸಿಎಂ ಭಾಷದ ವೇಳೆ ಹೇಳಿದ್ದಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಬಲಪಡಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಫಿನ್ಟೆಕ್, ಸ್ಪೇಸ್ಟೆಕ್ ಮತ್ತು ಆಟೋಮೋಟಿವ್ ಟೆಕ್‌ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಉದ್ಯಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು ಎಂದಿದ್ದಾರೆ.

ರಾಜ್ಯದ ನಾಲ್ಕು ಕಡೆ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ
ಬೆಂಗಳೂರಿನಾಚೆಗೂ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಯುವಕರ ಕೌಶಲ್ಯಾಭಿವೃದ್ಧಿಗಾಗಿ ಕಲಬುರಗಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ತುಮಕೂರಿನಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಮತ್ತು ಕಿಯೋನಿಕ್ಸ್ ಸಹಯೋಗದೊಂದಿಗೆ ಒಟ್ಟಾರೆ 12 ಕೋಟಿ ರೂ. ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಿನೋಮಿಕ್ಸ್ನಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಸುಧಾರಿತ ಜಿನೋಮ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಸಂಸ್ಥೆಯು ಆರೋಗ್ಯ, ಕೃಷಿ ಮತ್ತು ಜೀವ ವಿಜ್ಞಾನದ ಇತರ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಗೆ ಉತ್ತೇಜನ ನೀಡಲಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಚಟುವಟಿಕೆ ಆಧಾರಿತ ಪರಿಸರವನ್ನು ಒದಗಿಸಲು 3 ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆಯ್ದ ಜಿಲ್ಲೆಗಳಲ್ಲಿ ವಿಜ್ಞಾನ ತಾರಾಲಯ
ಈಗಾಗಲೇ ಅನುಮೋದನೆಗೊಂಡಿರುವ ಚಾಮರಾಜನಗರ, ಹಾಸನ, ಮಡಿಕೇರಿ, ಶಿರಸಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಧಾರವಾಡದಲ್ಲಿ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಕಾರ್ಯಾರಂಭಗೊಳಿಸಲಾಗುವುದು.
ಉಡುಪಿ, ಹಾವೇರಿ, ಚಿತ್ತಾಪುರ, ಆದಿಚುಂಚನಗಿರಿ, ತುಮಕೂರಿನಲ್ಲಿ ವಿಜ್ಞಾನ ಕೇಂದ್ರಗಳ ಕಾಮಗಾರಿಯು ಪ್ರಗತಿಯಲ್ಲಿದ್ದು, ಇದನ್ನು ಪೂರ್ಣಗೊಳಿಸಲಾಗುವುದು. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು.
ವಿದ್ಯಾರ್ಥಿಗಳಿಗೆ ರಾತ್ರಿ ಆಕಾಶ ವೀಕ್ಷಣೆ ಮತ್ತು ಆಕಾಶ ಕಾಯಗಳ ಕುರಿತು ಆಸಕ್ತಿ ಮೂಡಿಸಲು ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಬರುವ ಒಟ್ಟು 833 ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ತಲಾ ಒಂದು ದೂರದರ್ಶಕವನ್ನು ಒಟ್ಟಾರೆ 3 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ಧಾರೆ.


Click it and Unblock the Notifications