ನವದೆಹಲಿ, ಆಗಸ್ಟ್ 18: ಹಿಂಡೆನ್ ಬರ್ಗ್ ಸಂಸ್ಥೆ ಅದಾನಿ ವಿರುದ್ಧ ಮಾಡಿದ್ದ ಆರೋಪಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ವಿರುದ್ಧವೂ ಕೆಲವೊಂದು ಆರೋಪ ಮಾಡಿತ್ತು. ಆರೋಪಗಳಿಗೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ಆದರೆ ಈಗ ಅವರ ವಿರುದ್ಧವೇ ಇನ್ನೊಂದು ಆರೋಪ ಕೇಳಿಬಂದಿದೆ.
ರಾಯಿಟರ್ಸ್ ಸುದ್ದಿಸಂಸ್ಥೆಯ ವರದಿಯೊಂದರಲ್ಲಿ ಮಾಧಬಿ ಪುರಿ ಬುಚ್ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಕಳೆದ ಏಳು ವರ್ಷಗಳಿಂದ ಅಂದರೆ ಸೆಬಿಗೆ ಸೇರ್ಪಡೆಯಾದಾಗನಿಂದ ಅವರು ಕನ್ಸಲ್ಟೆನ್ಸಿ ಸಂಸ್ಥೆಯೊಂದರಿಂದ ಆದಾಯ ಪಡೆಯುತ್ತಿದ್ದಾರೆ ಎನ್ನುವ ಆರೋಪ ಬಂದಿದೆ. ಸಾರ್ವಜನಿಕವಾಗಿ ಲಭ್ಯ ಇರುವ ದಾಖಲೆಗಳನ್ನು ಈ ವರದಿ ಉಲ್ಲೇಖಿಸಿದೆ. ಒಂದು ವೇಳೆ ಈ ವರದಿ ನಿಜವೇ ಆದಲ್ಲಿ ಸೆಬಿ ನಿಯಮಗಳನ್ನು ಮಾಧಬಿ ಬುಚ್ ಅವರು ಉಲ್ಲಂಘಿಸಿದಂತಾಗುತ್ತದೆ.

ಈಗ ರಾಯ್ಟರ್ಸ್ ಸುದ್ದಿ ಸಂಸ್ಥೆ ಹೊಸ ವಿವರಗಳನ್ನು ಇಟ್ಟಿದೆ. ಮಾಧವಿ ಬುಚ್ ಮತ್ತವರ ಪತಿ ಧವಳ್ ಬುಚ್ ಅವರು ಸಿಂಗಾಪುರ ಮೂಲದ ಅಗೋರಾ ಪಾರ್ಟ್ನರ್ಸ್ ಮತ್ತು ಭಾರತದ ಅಗೋರಾ ಅಡ್ವೈಸರಿ ಎಂಬ ಎರಡು ಕನ್ಸಲ್ಟೆನ್ಸಿ ಕಂಪನಿ ಹೊಂದಿದ್ದಾರೆ ಎನ್ನುವುದು ಈ ವರದಿಯಲ್ಲಿನ ಪ್ರಮುಖ ಅಂಶ.
ಮಾಧಬಿ ಅವರು 2017ರಲ್ಲಿ ಸೆಬಿಗೆ ಸದಸ್ಯೆಯಾಗಿ ಸೇರ್ಪಡೆಯಾದರು. 2022ರಿಂದ ಅವರು ಸೆಬಿ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗೋರಾ ಅಡ್ವೈಸರಿ ಸಂಸ್ಥೆಯಲ್ಲಿ ಮಾಧಬಿ ಅವರು ಶೇ. 99ರಷ್ಟು ಷೇರುಪಾಲು ಹೊಂದಿದ್ದಾರೆ. ಈ ಕನ್ಸಲ್ಟೆನ್ಸಿ ಕಂಪನಿ ಏಳು ವರ್ಷದಲ್ಲಿ 3.71 ಕೋಟಿ ರೂ ಆದಾಯ ಗಳಿಸಿದೆ ಎಂದು ರಾಯ್ಟರ್ಸ್ ವರದಿ ಹೇಳಿದೆ. ಕಂಪನಿ ರಿಜಿಸ್ಟ್ರಾರ್ನಲ್ಲಿರುವ ಸಾರ್ವಜನಿಕ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ಮಾಡಲಾಗಿದೆ.
ಸೆಬಿ ನಿಯಮ ಏನು ಹೇಳುತ್ತದೆ?
2008ರ ಸೆಬಿ ನೀತಿ ಸಂಸ್ಥೆಯಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿಯೂ ಲಾಭದಾಯಕವಾದ ಇತರೆ ಹುದ್ದೆ ಹೊಂದಿರುವಂತಿಲ್ಲ ಎಂದು ಹೇಳುತ್ತದೆ. ಇತರ ವೃತ್ತಿಪರ ಚಟುವಟಿಕೆಗಳಿಂದ ಸಂಬಳವಾಗಲೀ, ವೃತ್ತಿಪರ ಶುಲ್ಕವಾಗಲೀ ಸ್ವೀಕರಿಸುವಂತಿಲ್ಲ ಎಂದಿದೆ. ಹೀಗಾಗಿ, ಸೆಬಿ ಸದಸ್ಯೆ ಮತ್ತು ಮುಖ್ಯಸ್ಥೆಯಾಗಿದ್ದುಕೊಂಡು ಮಾಧವಿ ಅವರು ಕನ್ಸಲ್ಟೆನ್ಸಿ ಸಂಸ್ಥೆಯೊಂದರಿಂದ ಆದಾಯ ಗಳಿಸಿದ್ದಾರೆ ಎಂದಾದರೆ ಅದು ಸೆಬಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗುತ್ತದೆ.
ಭಾರತದ ಸೆಕ್ಯುರಿಟೀಸ್ ಮತ್ತು ಎಕ್ಸ್ಚೆಂಜ್ ಬೋರ್ಡ್ (ಸೆಬಿ) ಅಧ್ಯಕ್ಷೆ, ಮಾಧಬಿ ಪುರಿ ಬುಚ್ ಕಡಲಾಚೆ ಅಂದರೆ ಮಾರಿಷಸ್ ನಲ್ಲಿ ಫಂಡ್ ವಿನಿಯೋಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಮಾರಿಷಸ್ ನಿಂದಲೂ ಸ್ಪಷ್ಟನೆ ಬಂದಿತ್ತು. ಹಿಂಡೆನ್ ಬರ್ಗ್ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂದು ಮಾರಿಷಸ್ ಹೇಳಿತ್ತು. ಮಾರಿಷಸ್ ಶೆಲ್ ಕಂಪನಿಗಳ ಸೃಷ್ಟಿಗೆ ಅವಕಾಶ ನೀಡುವುದಿಲ್ಲ ಎಂದು ಮಾರಿಷಸ್‌ನ ಹಣಕಾಸು ಸೇವೆಗಳ ಆಯೋಗ (ಎಫ್‌ಎಸ್‌ಸಿ) ಹೇಳಿಕೆ ಬಿಡುಗಡೆ ಮಾಡಿತ್ತು.


Click it and Unblock the Notifications