ಮಾರ್ಜಿನ್ ಟ್ರೇಡಿಂಗ್ ಫೆಸಿಲಿಟಿ (MTF) ಮೂಲಕ ರಿಟೇಲ್ ಹೂಡಿಕೆದಾರರು ಪಡೆಯುವ ಸಾಲದ ಮೇಲಿನ ಮಿತಿಯನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಸೆಬಿ ಅಧ್ಯಕ್ಷ ತುಹಿನ್ ಕಾಂತ ಪಾಂಡೆ ನವೆಂಬರ್ 18 ರಂದು ಸುಳಿವು ನೀಡಿದ್ದಾರೆ. ಈ ಬೆನ್ನಲ್ಲೇ ಶೇರು ಮಾರುಕಟ್ಟೆಯಲ್ಲಿ ಭಾರಿ ಚಲನವಲನ ಕಂಡುಬಂದಿದೆ. ಏಂಜೆಲ್ ಒನ್, ಬಿಎಸ್‌ಇ ಮತ್ತು ಗ್ರೋ ಸಂಸ್ಥೆಗಳ ಶೇರುಗಳು ದಿನದ ಗರಿಷ್ಠ ಮಟ್ಟದಿಂದ ಶೇ. 7ರಷ್ಟು ಕುಸಿತ ಕಂಡಿವೆ. ಟ್ರೇಡರ್‌ಗಳು ತಮ್ಮ ರಿಸ್ಕ್, ನಗದು ಲಭ್ಯತೆ ಮತ್ತು ಫಂಡಿಂಗ್ ಲೆಕ್ಕಾಚಾರಗಳನ್ನು ಮರುಪರಿಶೀಲಿಸುತ್ತಿರುವುದರಿಂದ ಈ ಶೇರುಗಳ ಮೇಲೆ ಪರಿಣಾಮ ಬೀರಿದೆ.
'ಮಾರ್ಜಿನ್ ಟ್ರೇಡಿಂಗ್ ಫೆಸಿಲಿಟಿ' (MTF) ಎಂದರೆ ಸಾಲದ ಆಧಾರದಲ್ಲಿ ಷೇರು ಖರೀದಿಸುವ ಸೌಲಭ್ಯವಾಗಿದೆ. ಇನ್ನು 'ಫ್ರೀ ಫ್ಲೋಟ್' ಎಂದರೆ ಸಾರ್ವಜನಿಕ ವಹಿವಾಟಿಗೆ ಲಭ್ಯವಿರುವ ಷೇರುಗಳು. "ಶೇರುಗಳ ಫ್ರೀ ಫ್ಲೋಟ್ ಮಟ್ಟಕ್ಕೆ MTF ಮಿತಿಯನ್ನು ಲಿಂಕ್ ಮಾಡುವ ಪ್ರಸ್ತಾಪವನ್ನು ಸೆಬಿ ಪರಿಶೀಲಿಸುತ್ತಿದೆ" ಎಂದು ಪಾಂಡೆ ಅವರು 'ಸಿಎನ್‌ಬಿಸಿ-ಟಿವಿ18'ಗೆ ತಿಳಿಸಿದ್ದಾರೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ಸೂಕ್ಷ್ಮ ವ್ಯತ್ಯಾಸದಿಂದಾಗಿ ಕ್ಯಾಪಿಟಲ್ ಮಾರ್ಕೆಟ್ ಶೇರುಗಳಲ್ಲಿ ಏರಿಳಿತ ಮುಂದುವರಿದಿದೆ.

ಫ್ರೀ ಫ್ಲೋಟ್‌ಗೆ MTF ಮಿತಿ ಲಿಂಕ್: ಮಾರುಕಟ್ಟೆಯ ಮೇಲೇಕೆ ಪರಿಣಾಮ?
ಈ ಹಠಾತ್ ಕುಸಿತವು ಮುಖ್ಯವಾಗಿ ಕ್ಯಾಪಿಟಲ್ ಮಾರ್ಕೆಟ್ ಶೇರುಗಳಲ್ಲಿ ಕಂಡುಬಂದರೂ, ಮಾರ್ಜಿನ್ ಫಂಡಿಂಗ್ ಹೆಚ್ಚಿರುವ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಶೇರುಗಳ ಮೇಲೆಯೂ ಪರಿಣಾಮ ಬೀರಿದೆ. ನಿರ್ದಿಷ್ಟ ಶೇರೊಂದರ ಸಾಲದ ಪ್ರಮಾಣವು ಫ್ರೀ ಫ್ಲೋಟ್ ಮಿತಿಯ ಸಮೀಪಕ್ಕೆ ತಲುಪಿದಾಗ, ಆಪ್‌ಗಳ ಮಟ್ಟದಲ್ಲೇ ಹೊಸ MTF ಖರೀದಿಗೆ ಬ್ರೇಕ್ ಬೀಳಬಹುದು ಎಂದು ಟ್ರೇಡರ್‌ಗಳು ಅಂದಾಜಿಸುತ್ತಿದ್ದಾರೆ. ನಿಯಂತ್ರಕ ಸಂಸ್ಥೆ ಸೆಬಿ ಇನ್ನೂ ನಿಯಮಗಳನ್ನು ಅಂತಿಮಗೊಳಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿರುವುದರಿಂದ, ಗಾಬರಿಯಿಂದ ನಡೆಯುವ ಶೇರು ಮಾರಾಟ ಕೊಂಚ ಕಡಿಮೆಯಾಗಿದೆಯಾದರೂ ರಿಸ್ಕ್ ಮ್ಯಾನೇಜ್‌ಮೆಂಟ್ ಕಡೆಗೆ ಗಮನ ಹೆಚ್ಚಾಗಿದೆ.
MTF ಮತ್ತು ಫ್ರೀ ಫ್ಲೋಟ್ ಮಿತಿಯಿಂದ ಏನೆಲ್ಲಾ ಬದಲಾಗಲಿದೆ?
ದೇಶದಲ್ಲಿ MTF ಸೌಲಭ್ಯದ ಬಳಕೆ ವೇಗವಾಗಿ ಬೆಳೆದಿದ್ದು, ನವೆಂಬರ್ 13ರ ವೇಳೆಗೆ ಸುಮಾರು ₹1.46 ಲಕ್ಷ ಕೋಟಿಗೆ ತಲುಪಿದೆ. ಇದು ಭಾರತದ ಒಟ್ಟು ಫ್ರೀ ಫ್ಲೋಟ್ ಶೇರುಗಳ ಪೈಕಿ ಶೇ. 0.7 ರಷ್ಟಿದೆ. ಇದರಲ್ಲಿ ಸುಮಾರು ಮೂರನೇ ಎರಡರಷ್ಟು ಪಾಲು ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಶೇರುಗಳಲ್ಲೇ ಇರುವುದರಿಂದ, ಮಾರುಕಟ್ಟೆಯಲ್ಲಿ ಏರಿಳಿತ ಉಂಟಾದಾಗ ಸಾಲ ತೀರಿಸುವ ಒತ್ತಡ ಹೆಚ್ಚಾಗುತ್ತದೆ. ಶೇರೊಂದರ ಫ್ರೀ ಫ್ಲೋಟ್‌ನ ಶೇ. 5 ರಿಂದ 10 ರಷ್ಟು ಮಿತಿಯನ್ನು ಸಾಲ ತಲುಪಿದರೆ, ಹೊಸ MTF ಖರೀದಿಯನ್ನು ತಾತ್ಕಾಲಿಕವಾಗಿ ತಡೆಯುವ ಪ್ರಸ್ತಾಪವೂ ಚರ್ಚೆಯಲ್ಲಿದೆ. ಇದರಿಂದ ಬ್ರೋಕರೇಜ್ ಸಂಸ್ಥೆಗಳ ಬಡ್ಡಿ ಆದಾಯ, ಫಂಡಿಂಗ್ ವೆಚ್ಚ ಮತ್ತು ಕೊಲ್ಯಾಟರಲ್ ಹೈರ್‌ಕಟ್ ಮೇಲೆ ಪರಿಣಾಮ ಬೀರಲಿದೆ.
ಮುಂದೆ ಸೆಬಿ ಇವರಿಂದ ಅಧಿಕೃತ ಸುತ್ತೋಲೆ ಬರುತ್ತದೆಯೇ ಅಥವಾ ಮತ್ತೊಂದು ಸಮಾಲೋಚನೆ ನಡೆಯುತ್ತದೆಯೇ ಎಂಬುದನ್ನು ಗಮನಿಸಬೇಕಿದೆ. ಜತೆಗೆ ಬ್ರೋಕಿಂಗ್ ಆಪ್‌ಗಳಲ್ಲಿ ತಕ್ಷಣಕ್ಕೆ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದೂ ಮುಖ್ಯ. ಮುನ್ನೆಚ್ಚರಿಕಾ ಕ್ರಮವಾಗಿ ಸಾಲದ ಬಳಕೆಯ ಅಲರ್ಟ್‌ಗಳು, ಕಟ್ಟುನಿಟ್ಟಿನ ಹೈರ್‌ಕಟ್ ಹಾಗೂ ಕಡಿಮೆ ಫ್ರೀ ಫ್ಲೋಟ್ ಇರುವ ಶೇರುಗಳಿಗೆ ತಾತ್ಕಾಲಿಕ ತಡೆ ಮುಂತಾದ ಕ್ರಮಗಳನ್ನು ಬ್ರೋಕರ್‌ಗಳು ಕೈಗೊಳ್ಳಬಹುದು. ಹೆಚ್ಚು MTF ಬುಕ್ ಹೊಂದಿರುವ ಬ್ರೋಕರ್‌ಗಳು ಹಾಗೂ ಫ್ರೀ ಫ್ಲೋಟ್ ಬಳಕೆ ಈಗಾಗಲೇ ಹೆಚ್ಚಿರುವ ಶೇರುಗಳ ಮೇಲೆ ಕಣ್ಣಿಡುವುದು ಒಳಿತು. ಹಿಂದಿನ ಅನುಭವಗಳನ್ನು ನೋಡಿದರೆ, ಇಂತಹ ಕಾರ್ಯಾಚರಣೆಯ ಬದಲಾವಣೆಗಳು ಹಂತ ಹಂತವಾಗಿ ಜಾರಿಗೆ ಬರುವ ಸಾಧ್ಯತೆಯಿದೆ.


Click it and Unblock the Notifications