ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಇವಿ ಪ್ಲೇಯರ್ ಓಲಾ ಎಲೆಕ್ಟ್ರಿಕ್ ಮೊಬಿಲಿಟಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಸೆಬಿಯ ಬಹಿರಂಗಪಡಿಸುವ ನಿಯಮಗಳ ಉಲ್ಲಂಘನೆಗಾಗಿ ಜನವರಿ 7ರಂದು ಆಡಾಳಿತಾತ್ಮಕ ಎಚ್ಚರಿಕೆಯನ್ನು ನೀಡಿದೆ.
ಜನವರಿ 8 ರಂದು ಬೆಳಿಗ್ಗೆ 9.35 ಕ್ಕೆ, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಷೇರುಗಳು ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಹಿಂದಿನ ಮುಕ್ತಾಯದಿಂದ ನಾಲ್ಕು ಶೇಕಡಾ ಕಡಿಮೆಯಾಗಿ ಕುಸಿದು ರೂ. 76.14 ಕ್ಕೆ ಇಳಿದಿದೆ.

ಅಂದಹಾಗೆ ಓಲಾ ಮೊಬಿಲಿಟಿ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಭವಿಶ್ ಅಗರ್ವಾಲ್, ಓಲಾ ಎಲೆಕ್ಟ್ರಿಕ್‌ನ ನಾಲ್ಕು ಪಟ್ಟು ವಿಸ್ತರಣೆಯ ಯೋಜನೆಗಳ ವಿವರಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಆದರೆ ಈ ವಿಚಾರವನ್ನು ಬಹಿರಂಗಪಡಿಸುವ ಮೊದಲು ಷೇರು ವಿನಿಮಯ ಕೇಂದ್ರಗಳಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿತ್ತು.
ಭವಿಶ್ ಅಗರ್ವಾಲ್ ಅವರು ಎಕ್ಸ್ ಖಾತೆ ಮೂಲಕ "ಈ ತಿಂಗಳು ಎಲೆಕ್ಟ್ರಿಕ್ ಕ್ರಾಂತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಕೊಂಡೊಯ್ಯಲಾಗುತ್ತಿದೆ. ಇದೀಗ 800 ಮಳಿಗೆಗಳಿಂದ ಈ ತಿಂಗಳಲ್ಲೇ 4000 ಮಳಿಗೆಗಳಿಗೆ ಹೋಗುತ್ತಿದೆ. ನಮ್ಮ ಗ್ರಾಹಕರಿಗೆ ಸಾಧ್ಯವಾದಷ್ಟು ಹತ್ತಿರವಾಗುವುದು ಗುರಿಯಾಗಿದೆ" ಎಂದು ಬರೆದುಕೊಂಡಿದ್ದರು.
ಓಲಾ ಎಲೆಕ್ಟ್ರಿಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಭವಿಶ್ ಅಗರ್ವಾಲ್, ಡಿಸೆಂಬರ್ 2, 2024 ರಂದು ಬೆಳಿಗ್ಗೆ 9:58 ಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಕಂಪನಿಯ ವಿಸ್ತರಣಾ ಯೋಜನೆಗಳನ್ನು ಘೋಷಿಸಿದ್ದರು. ಆದರೆ ಓಲಾ ಎಲೆಕ್ಟ್ರಿಕ್ ಅದೇ ದಿನ ಮಧ್ಯಾಹ್ನ 1:36 ಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ಮಧ್ಯಾಹ್ನ 1:41 ಕ್ಕೆ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (NSE) ಗೆ ಈ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿತು. ಆದರೆ
ಬಹಿರಂಗಪಡಿಸುವ ಸಮಯದಲ್ಲಿನ ಈ ವ್ಯತ್ಯಾಸದ ಕಾರಣ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಪರಿಶೀಲನೆ ನಡೆಸುತ್ತಿದೆ.
"ನಿಯಂತ್ರಕ ಸಂಸ್ಥೆಯ ನಿಯಮಗಳ ಪ್ರಕಾರ ಪಟ್ಟಿ ಮಾಡಲಾದ ಘಟಕವು ಈ ನಿಯಮಗಳ ಪ್ರಕಾರ ವಸ್ತುನಿಷ್ಠವಾಗಿರುವ ಎಲ್ಲಾ ಘಟನೆಗಳು ಅಥವಾ ಮಾಹಿತಿಯನ್ನು ಕ್ಲಪ್ತ ಸಮಯದಲ್ಲಿ ನೀಡಬೇಕು. ಆದರೆ SEBI ಈ ಮಾಹಿತಿಯನ್ನು ಮೊದಲು ಷೇರು ವಿನಿಮಯಗಳಿಗೆ ಬಹಿರಂಗಪಡಿಸಲಾಗಿಲ್ಲ ಮತ್ತು ಕ್ಲಪ್ತ ಸಮಯದಲ್ಲಿ ಷೇರು ವಿನಿಮಯಗಳಲ್ಲಿ ಬಹಿರಂಗಪಡಿಸಲಾಗಿಲ್ಲ" ಎಂದು ಗಮನಿಸಿದೆ.
ಷೇರು ವಿನಿಮಯಗಳಲ್ಲಿ ಪ್ರಸಾರ ಮಾಡುವ ಬದಲು ಮೊದಲು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಉಲ್ಲೇಖಿತ ಘೋಷಣೆಯನ್ನು ಮಾಡುವ ಮೂಲಕ, [ಓಲಾ ಎಲೆಕ್ಟ್ರಿಕ್] ತನ್ನ ಪಾಲುದಾರ ಹಿತಾಸಕ್ತಿಗಳನ್ನು ಮತ್ತು ಕಾನೂನುಬದ್ಧ ನಿರ್ಬಂಧಗಳನ್ನು ನಿರ್ಲಕ್ಷಿಸಿದೆ. ಈ ಉಲ್ಲಂಘನೆಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದ್ದು ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಅಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಲು ನಿಮ್ಮ ಅನುಸರಣೆ ಮಾನದಂಡಗಳನ್ನು ಸುಧಾರಿಸಲು ಸಲಹೆ ನೀಡುತ್ತಿದ್ದೇವೆ. ಇಲ್ಲದಿದ್ದರೆ ಸೂಕ್ತ ಜಾರಿ ಕ್ರಮಗಳನ್ನು ಕೈಗೊಳ್ಳಬಹುದು" ಎಂದು ಸೆಬಿ ವಾರ್ನಿಂಗ್ ನೀಡಿದೆ.
ಸೆಬಿ ನೀಡಿರುವ ಈ ಎಚ್ಚರಿಕೆಯಿಂದಾಗಿ ಯಾವುದೇ ಓಲಾ ಮೇಲೆ ಯಾವುದೇ ಆರ್ಥಿಕ ಪರಿಣಾಮಗಳಿಲ್ಲ ಎಂದು ಗಮನಿಸಬೇಕಾದ ಅಂಶವಾಗಿದೆ.
ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಬಗ್ಗೆ:
ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ಕಂಪನಿಯಾಗಿದ್ದು, ಇದು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ತಯಾರಿಸುತ್ತದೆ. ಇದು ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು ಇದನ್ನು 2017 ರಲ್ಲಿ ಭವಿಶ್ ಅಗರ್ವಾಲ್ ಸ್ಥಾಪಿಸಿದರು. ಓಲಾ ಎಲೆಕ್ಟ್ರಿಕ್‌ನ ವಾಹನಗಳು ಅವುಗಳ ಆಧುನಿಕ ತಂತ್ರಜ್ಞಾನ, ಸ್ಟೈಲಿಶ್ ವಿನ್ಯಾಸ ಮತ್ತು ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಭಾರತದಾದ್ಯಂತ ವಿಶಾಲವಾದ ಚಾರ್ಜಿಂಗ್ ನೆಟ್ವರ್ಕ್ ಅನ್ನು ನಿರ್ಮಿಸುತ್ತಿದೆ ಮತ್ತು ಎಲೆಕ್ಟ್ರಿಕ್ ವಾಹನ ಅನುಭವವನ್ನು ಸುಧಾರಿಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ತಮಿಳುನಾಡಿನ ಕೃಷ್ಣಗಿರಿಯಲ್ಲಿ ತನ್ನ ಉತ್ಪಾದನಾ ಕಾರ್ಖಾನೆಯನ್ನು ಹೊಂದಿದೆ.


Click it and Unblock the Notifications