ಷೇರು, ಮ್ಯೂಚುವಲ್ ಫಂಡ್, ಹೀಗೆ ಹಣ ಬೆಳೆಸಲು ಅನೇಕ ವಿಧದ ಯೋಜನೆಗಳಿದ್ದರೂ, ಇಂದಿಗೂ ಜನರು ತಮ್ಮ ಹಣವನ್ನು ಹೂಡಿಕೆ ಮಾಡಲು ಸ್ಥಿರ ಠೇವಣಿಗಳ (Fixed Deposit) ಮೇಲೆ ಹೆಚ್ಚು ನಂಬಿಕೆ ಇರಿಸಿದ್ದಾರೆ. ಅದರಲ್ಲೂ ನಿಶ್ಚಿತ /ಸ್ಥಿರ ಠೇವಣಿ (ಎಫ್‌ಡಿ) ಎನ್ನುವುದು ಹಿರಿಯ ನಾಗರಿಕರಿಗೆ ತಮ್ಮ ಉಳಿತಾಯವನ್ನು ಬೆಳೆಸಲು ಒಂದು ಸುರಕ್ಷಿತ ಮತ್ತು ಸ್ಥಿರವಾದ ಮಾರ್ಗವಾಗಿದೆ.
ಎಫ್.ಡಿ ಅಂದರೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ನಿರ್ದಿಷ್ಟ ಅವಧಿಗೆ ಹಣವನ್ನು ಠೇವಣಿ ಇಡುವ ಒಂದು ರೀತಿಯ ಉಳಿತಾಯ ಯೋಜನೆಯಾಗಿದೆ. ಈ ಅವಧಿಯಲ್ಲಿ ಠೇವಣಿ ಹಿಂಪಡೆಯುವಂತಿಲ್ಲ. ಬದಲಾಗಿ, ನಿಗದಿತ ಅವಧಿಯ ಅಂತ್ಯದಲ್ಲಿ, ಮೂಲ ಹೂಡಿಕೆಯ ಜೊತೆಗೆ ನಿಗದಿತ ಬಡ್ಡಿ ದರವನ್ನು ಪಡೆಯಬಹುದಾಗಿದೆ.

ಎಫ್‌ಡಿ ಖಾತೆಯನ್ನು ತೆರೆದ ನಂತರ ಬಡ್ಡಿ ದರ ಕಡಿಮೆಯಾದರೂ, ಪ್ರಾರಂಭದಲ್ಲಿ ನಿರ್ಧರಿಸಿದ ಬಡ್ಡಿ ದರವನ್ನು ನೀವು ಸ್ವೀಕರಿಸುವುದು ಮುಂದುವರಿಯುತ್ತದೆ. ಏಕೆಂದರೆ, ನೀವು ಎಫ್‌ಡಿ ಖಾತೆಯನ್ನು ತೆರೆಯುವಾಗ ನಿಗದಿತ ಅವಧಿಗೆ ಒಂದು ನಿರ್ದಿಷ್ಟ ಬಡ್ಡಿ ದರವನ್ನು ಲಾಕ್ ಮಾಡಿಕೊಳ್ಳುತ್ತೀರಿ. ಆ ಅವಧಿಯಲ್ಲಿ ಬ್ಯಾಂಕು ತನ್ನ ಬಡ್ಡಿ ದರವನ್ನು ಕಡಿಮೆ ಮಾಡಿದರೂ, ನಿಮ್ಮ ಖಾತೆಗೆ ಅನ್ವಯವಾಗುವ ಬಡ್ಡಿ ದರ ಮಾತ್ರ ಬದಲಾಗುವುದಿಲ್ಲ. ಇದೇ ಎಫ್‌ಡಿಗಳ ವಿಶೇಷತೆಯಾಗಿದೆ.
ಸೀನಿಯರ್ ಸಿಟಿಜನ್ ಎಫ್‌ಡಿಗಳು ಸಾಮಾನ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಹೆಚ್ಚುವರಿ ಬಡ್ಡಿ ದರಗಳನ್ನು ನೀಡುತ್ತವೆ. ಇದು ಹಿರಿಯ ನಾಗರಿಕರಿಗೆ ತಮ್ಮ ಉಳಿತಾಯವನ್ನು ಬೆಳೆಸಲು ಒಂದು ಉತ್ತಮ ಅವಕಾಶವಾಗಿದೆ.
ಹಿರಿಯ ನಾಗರಿಕರಿಗೆ ಯಾವ ಬ್ಯಾಂಕಿನ 3 ವರ್ಷದ ಎಫ್‌ಡಿ 5 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂಬುವುದು ನಾವು ಇಲ್ಲಿ ಹೋಲಿಸಿದ್ದೇವೆ. ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ 3 ವರ್ಷದ ಎಫ್‌ಡಿಗಳ ಹೋಲಿಕೆ ಮಾಡಿದ್ದು ಹಿರಿಯ ನಾಗರಿಕರಿಗೆ ಯಾವುದು ಉತ್ತಮ ಎಂಬುವುದನ್ನು ನಿರ್ಧರಿಸಲು ನಿಮಗೆ ಸಹಾಯಕವಾಗಬಹುದು.
ಸೀನಿಯರ್ ಸಿಟಿಜನ್ ಎಫ್‌ಡಿಗಳ ಪ್ರಯೋಜನಗಳು:
ಹಿರಿಯ ನಾಗರಿಕರ ಖಾತೆಗಳಿಗೆ, ಬ್ಯಾಂಕುಗಳು ವಿವಿಧ ಬಡ್ಡಿ ಪಾವತಿ ಆಯ್ಕೆಗಳನ್ನು ನೀಡುತ್ತವೆ. ಈ ಆಯ್ಕೆಗಳನ್ನು ಆರಿಸುವುದರಿಂದ ಹಿರಿಯ ನಾಗರಿಕರು ತಮ್ಮ ಆರ್ಥಿಕ ಅಗತ್ಯಗಳಿಗೆ ತಕ್ಕಂತೆ ಬಡ್ಡಿಯನ್ನು ಪಡೆಯಬಹುದು. ಅಂದರೆ ಅಗ್ಗಾಗ್ಗೆ, ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ಜಮಾ ಮಾಡುವ ವಿವಿಧ ಬಡ್ಡಿ ಪಾವತಿ ಆಯ್ಕೆಗಳನ್ನು ಹಿರಿಯ ನಾಗರಿಕರು ಸೆಲೆಕ್ಟ್ ಮಾಡಬಹುದು.
ಹಿರಿಯ ನಾಗರಿಕ ಸ್ಥಿರ ಠೇವಣಿ ತೆರೆಯಲು ಬಯಸಿದರೆ, ಅವರು ಭಾರತದ ನಿವಾಸಿಯಾಗಿರಬೇಕು. ಸ್ಥಿರ ಠೇವಣಿ ತೆರೆಯುವ ಸಮಯದಲ್ಲಿ ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಹಿರಿಯ ನಾಗರಿಕರು ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿ ಠೇವಣಿಗಳಲ್ಲಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯಿಂದ ತಮ್ಮ ವಾರ್ಷಿಕ ಆದಾಯದ ಮೇಲೆ 50,000 ರೂ.ವರೆಗೆ ಕಡಿತವನ್ನು ಪಡೆಯಬಹುದು.
ಹಿರಿಯ ನಾಗರಿಕರಿಗೆ ಪ್ರಸ್ತುತ FD ಬಡ್ಡಿ ದರ
ನೀವು 5 ಲಕ್ಷ ರೂಪಾಯಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3 ವರ್ಷಗಳ ಕಾಲ ಸ್ಥಿರ ಠೇವಣಿ ಮಾಡಿದರೆ ಶೇಕಡಾ 7.25 ಬಡ್ಡಿ ದರ ಸಿಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಲ್ಲಿ 3 ವರ್ಷಗಳ ಕಾಲ ಹಿರಿಯ ನಾಗರಿಕರ ಎಫ್‌ಡಿ ಖಾತೆ ನಾಗರಿಕರಿಗೆ ಶೇ.7.50 ಬಡ್ಡಿ ದರ ಸಿಗುತ್ತದೆ.
ಇನ್ನು HDFC ಬ್ಯಾಂಕ್‌ನಲ್ಲಿ 3 ವರ್ಷಗಳ ಕಾಲ ಹಿರಿಯ ನಾಗರಿಕರ ಎಫ್‌ಡಿ ಖಾತೆ ತೆರೆಯಲು ಯೋಜಿಸುತ್ತಿದ್ದೀರೆ ಶೇ.7.50 ಬಡ್ಡಿ ದರ ಸಿಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ 3 ವರ್ಷಗಳ ನಿಶ್ಚಿತ ಠೇವಣಿಯಲ್ಲಿ 5 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ಅಂದಾಜು 6,20,273 ರೂ.ಸಿಗುತ್ತದೆ.
PNBನಲ್ಲಿ 3 ವರ್ಷಗಳ ಕಾಲ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಅಂದಾಜು 6,24,858 ರೂಪಾಯಿಗಳನ್ನು ಪಡೆಯಬಹುದು.
ಎಚ್‌ಡಿಎಫ್‌ಸಿ 3 ವರ್ಷದ ಎಫ್‌ಡಿ ಮೇಲೆ 7.5 ರಷ್ಟು ಬಡ್ಡಿದರದೊಂದಿಗೆ, 5 ಲಕ್ಷ ರೂ. ಹೂಡಿಕೆಯ ಮೇಲೆ ಅಂದಾಜು ಕಾರ್ಪಸ್ ರೂ. 6,24,858 ಆಗಿರುತ್ತದೆ.
ಹಿರಿಯ ನಾಗರಿಕರಿಗೆ ಯಾವ ಬ್ಯಾಂಕಿನ 3 ವರ್ಷದ ಎಫ್‌ಡಿ 5 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂಬುದನ್ನು ನಿಖರವಾಗಿ ತಿಳಿಯಲು, ನೀವು ಆಯಾ ಬ್ಯಾಂಕುಗಳ ವೆಬ್‌ಸೈಟ್‌ಗಳನ್ನು ಪರಿಶೀಲಿಸಬೇಕು ಅಥವಾ ಅವುಗಳ ಶಾಖೆಗಳಿಗೆ ಭೇಟಿ ನೀಡಬೇಕು.


Click it and Unblock the Notifications