ಬೆಂಗಳೂರು, ಮಾರ್ಚ್ 13: ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ ನೋಡಿದಾಗ ಟೆಸ್ಲಾದ ಎಲಾನ್ ಮಸ್ಕ್, ಅಮೆಜಾನ್‌ನ ಜೆಫ್ ಬೆಜೋಸ್, ಲೂಯಿ ವಿಟಾನ್ ಮಾಲೀಕ ಅರ್ನಾಲ್ಡ್ ಬರ್ನಾಲ್ಟ್, ಭಾರತದ ರಿಲಯನ್ಸ್ ಗ್ರೂಪ್‌ನ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಆದರೆ ಇತಿಹಾಸವನ್ನು ತಿರುವಿ ಹಾಕಿದಾಗ ಇವರ ಸಾಲಿನಲ್ಲಿ ಚೀನಾದ ಸಾಮ್ರಾಜ್ಞಿ, ರಾಣಿ ವೂ ಕೂಡ ಇದ್ದಾರೆ. ಐತಿಹಾಸಿಕ ಪರಂಪರೆಯಲ್ಲಿ ಕ್ರಿ.ಶ 655 ರಲ್ಲಿ ಅಧಿಪತಿಯಾಗಿ ಗುರುತಿಸಿಕೊಂಡಿರುವ ವೂ ಅತ್ಯಂತ ಶ್ರೀಮಂತ ಮಹಿಳೆ ಎಂಬುದಾಗಿ ಉಲ್ಲೇಖಿಸಲಾಗುತ್ತಿದೆ. ಇನ್ನು ಕೆಲವು ಇತಿಹಾಸಕಾರರು ಆಕೆಯನ್ನು ಇದುವರೆಗೆ ಬದುಕಿದ್ದವರಲ್ಲೇ ಅತ್ಯಂತ ಶ್ರೀಮಂತ ಮಹಿಳೆ ಎಂಬುದಾಗಿ ಬಣ್ಣಿಸಿದ್ದಾರೆ.

ವೂ ಅವರ ಅಂದಾಜು ನಿವ್ವಳ ಆಸ್ತಿ ಮೌಲ್ಯ ಕೇಳಿದರೆ ಆಶ್ಚರ್ಯವಾಗಬಹುದು. ವೂ ಅವರ ಆಸ್ತಿ ಮೌಲ್ಯ 16 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಇದು ಮಸ್ಕ್, ಮುಕೇಶ್ ಅಂಬಾನಿ, ಜೆಫ್ ಬೆಜೋಸ್, ಅದಾನಿ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯವನ್ನು ಮೀರಿಸುತ್ತದೆ.
ಟ್ಯಾಂಗ್ ರಾಜವಂಶ ಕುಟುಂಬದಿಂದ ಬಂದ ರಾಣಿ ವೂ ಅವರ ಸಂಪತ್ತು ಜಗತ್ತಿನ ಶ್ರೀಮಂತ ವ್ಯಕ್ತಿಗಳ ಆಸ್ತಿ ಮೊತ್ತವನ್ನು ಮೀರಿಸುತ್ತದೆ ಎಂದರೆ ಅದು ಅಚ್ಚರಿಯ ಸಂಗತಿ. ಎಲಾನ್ ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯ 229 ಶತಕೋಟಿ ಅಮೆರಿಕನ್ ಡಾಲರ್. ಹಾಗೆಯೇ ಜೆಫ್ ಬೆಜೋಸ್ ಅವರ ಆಸ್ತಿ ಮೌಲ್ಯ 174 ಶತಕೋಟಿ ಅಮೆರಿಕನ್ ಡಾಲರ್. ಇನ್ನು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯ 106.2 ಶತಕೋಟಿ ಯುಎಸ್ ಡಾಲರ್.
ಇತಿಹಾಸಕಾರರು ವೂ ಅವರನ್ನು ಅತ್ಯಂತ ಚಾಣಾಕ್ಷ ಆಡಳಿತಗಾರ್ತಿ ಎಂಬುದಾಗಿಯೂ ಇತಿಹಾಸದಲ್ಲಿ ಉಲ್ಲೇಖಿಸಿದ್ದಾರೆ. ಅವರು ತಮ್ಮ ಆಡಳಿತಾವಧಿಯಲ್ಲಿ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದಕ್ಕೆ ಅವರು ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದ್ದರು. ಕೆಲವು ವರದಿಗಳ ಪ್ರಕಾರ ವೂ ಅವರು ತಮ್ಮ ಸ್ವಂತ ಮಕ್ಕಳನ್ನೇ ಅಧಿಕಾರದಿಂದ ಕಿತ್ತು ಹಾಕುವ ಮೂಲಕ ತಮ್ಮ ಅಧಿಪತ್ಯವನ್ನು ಭದ್ರಪಡಿಸಿಕೊಂಡಿದ್ದರು.
ಅವರು ಸುಮಾರು 15 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು ಮಧ್ಯ ಏಷ್ಯಾದಲ್ಲಿ ಚೀನಾ ಸಾಮ್ರಾಜ್ಯದ ವಿಸ್ತರಣೆಗೆ ಸಾಕ್ಷಿಯಾಗಿದ್ದರು. ವೂ ಅವರ ಆಡಳಿತಾವಧಿಯಲ್ಲಿ ಚೀನಾವು ಹೆಚ್ಚಿನ ಶ್ರೀಮಂತಿಕೆಯನ್ನು ಗಳಿಸಿತ್ತು. ಅದರಲ್ಲೂ ಚಹಾ ಹಾಗೂ ರೇಷ್ಮೆ ವ್ಯಾಪಾರದಲ್ಲಿ ಗಣನೀಯ ಬೆಳವಣಿಗೆಯನ್ನು ಸಾಧಿಸಿತ್ತು. ವೂ ಅವರ ಶ್ರೀಮಂತಿಕೆ ಹಾಗೂ ಐಷಾರಾಮಿ ಜೀವನಕ್ಕೆ ಸಂಬಂಧಿಸಿದಂತೆ ʼಎಂಪ್ರೆಸ್ ಆಫ್ ಚೀನಾʼ ಸೇರಿದಂತೆ ಹಲವು ಚಲನಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳು ಪ್ರಸಾರಗೊಂಡಿವೆ.


Click it and Unblock the Notifications