ನಾಡು ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ, ದೂರದೃಷ್ಟಿ ಚಿಂತನೆಗಳ ಹರಿಕಾರ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (92) ತಮ್ಮ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅಪಾರ ವಿದ್ವತ್, ಸುದೀರ್ಘ ಅನುಭವದ ಮೂಲಕ ಆಡಳಿತದಲ್ಲಿ ಹಲವು ಹೆಗ್ಗುರುತು ಮೂಡಿಸಿದ್ದ ಎಸ್.ಎಂ. ಕೃಷ್ಣ ಅವರು ಪ್ರಜಾಪ್ರಭುತ್ವ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದ ಹಿರಿಯ ರಾಜಕಾರಣಿಯಾಗಿದ್ದರು. ಸುಮಾರು ಅರುವತ್ತು ವರ್ಷಗಳ ಕಾಲ ನಾಡಿನ, ರಾಷ್ಟ್ರದ ಸೇವೆಗೈದ ಕೃಷ್ಣ ಅವರು ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆಗುರುತು ಮೂಡಿಸಿದವರು.
ರಾಜ್ಯ ರಾಜಧಾನಿ ಬೆಂಗಳೂರಿನತ್ತ ವಿಶ್ವವೇ ಕಣ್ಣುಹಾಯಿಸುವಂತೆ ಮಾಡಿದ, ಐಟಿಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎಸ್.ಎಂ. ಕೃಷ್ಣ ಅವರು ರಾಷ್ಟ್ರಮಟ್ಟದಲ್ಲಿಯೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ.

ಅಧುನಿಕ ಬೆಂಗಳೂರಿನ ಕನಸುಗಾರ ಎಸ್.ಎಂ. ಕೃಷ್ಣ
ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಹೆಸರು ಕಾಣಿಸಿಕೊಳ್ಳುವಂತೆ ಮಾಡಿದ ಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲಬೇಕು. 1999ರಿಂದ 2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಬೆಂಗಳೂರು ನಗರ ಬೆಳವಣಿಗೆಗೆ ಪ್ರಥಮ ಆದ್ಯತೆ ನೀಡಿ ಅದಕ್ಕಾಗಿ ಶ್ರಮಿಸಿದ್ದರು. ಇವರ ಆಡಳಿತದಲ್ಲಿ ನಗರವಾಗಿದ್ದ ಬೆಂಗಳೂರು ಸಿಲಿಕಾನ್ ಸಿಟಿಯಾಗಿ , ಭಾರತದ ಇನ್ಫರ್ಮೇಷನ್ ಟೆಕ್ನಾಲಜಿ ಕೇಂದ್ರವಾಗಿ ಬೆಳೆದು ನಿಲ್ಲಲು ಇವರ ಕೊಡುಗೆ ಪ್ರಮುಖ ಕಾರಣ ಎನ್ನಬಹುದು. ಉದ್ಯಾನ ನಗರಿಯತ್ತ ಬಂಡವಾಳ ಹೂಡಿಕೆ ಹರಿದುಬರಲು ಇವರ ಶ್ರಮ ಪ್ರಮುಖ ಕಾರಣವಾಗಿತ್ತು.
ಬೆಂಗಳೂರು ನಗರವನ್ನು ಸಿಂಗಪುರದಂತೆ ಅಭಿವೃದ್ಧಿಪಡಿಸುವ ದೂರದೃಷ್ಟಿಯನ್ನು ಹೊಂದಿದ್ದ ಅವರು ಇದೇ ಕಾರಣಕ್ಕೆ ದೇಶ-ವಿದೇಶದ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮಾಡಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿಗೆ ಹೈದರಾಬಾದ್ ನಗರ ಸ್ಪರ್ಧೆಯೊಡ್ಡುತ್ತಿತ್ತು. ಆದರೆ ಸಿಲಿಕಾನ್ ಸಿಟಿ ಎಂಬ ಹೆಸರಿಗೆ ಎಸ್ಎಂ ಕೃಷ್ಣ ಅಡಿಪಾಯ ಹಾಕಿ ಆ ಮೂಲಕ ದೊಡ್ಡ ಐಟಿ ಕಂಪನಿಗಳು ಬೆಳೆದು ನಿಲ್ಲಲು ಬೇಕಾದ ಪೂರಕ ಪರಿಸರವನ್ನು ಸೃಷ್ಟಿಸಿ ಅನೇಕ ಯೋಜನೆಯನ್ನು ಪರಿಚಯಿಸಿದ್ದರು.
ಇಂದು ವಿಧಾನಸೌಧದ ದಕ್ಷಿಣ ಭಾಗದಲ್ಲಿ ತಲೆಎತ್ತಿ ನಿಂತಿರುವ ವಿಕಾಸ ಸೌಧ ಆರಂಭಕ್ಕೆ ಕಾರಣಕರ್ತರು ಎಸ್.ಎಂ.ಕೃಷ್ಣ. ಇಷ್ಟು ಮಾತ್ರವಲ್ಲ ಉದ್ಯೋಗ ಸೌಧ ಹಾಗೂ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಕ್ಕೆ ಶ್ರಮಿಸಿದ್ದವರು ಮಾಜಿ ಮುಖ್ಯಮಂತ್ರಿ ಕೃಷ್ಣ. ಇಂದು ಅದೆಷ್ಟೋ ಜನ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಇಲ್ಲದೇ ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ ಅಂದರೆ ಅದರ ಕೀರ್ತಿಯೂ ಎಸ್.ಎಂ.ಕೃಷ್ಣ ಅವರಿಗೆ ಸಲ್ಲಬೇಕು. ಮೆಟ್ರೋ ಬಗ್ಗೆ ಅಧ್ಯಯನ ಮಾಡಲು ದೆಹಲಿಗೆ ಇಂದಿನ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರನ್ನು ಕಳುಹಿಸಿದ್ದರು. ಎಸ್ಎಂ ಕೃಷ್ಣ ಪ್ರಸ್ತಾಪದಿಂದಲೇ ಇವತ್ತು ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಓಡಾಡುತ್ತಿದೆ. ಎಸ್.ಎಂ. ಕೃಷ್ಣ ಅವರ ದೂರದೃಷ್ಟಿಯ ಚಿಂತನೆ ಹಾಗೂ ಅವರು ನಗರದ ಬಗ್ಗೆ ಹೊಂದಿದ್ದ ಕಲ್ಪನೆಗಳಿಗೆ ನೈಜ ಉದಾಹರಣೆಗಳಾಗಿವೆ.
ಬರ, ಕಾವೇರಿ ವಿವಾದ, ರಾಜ್ ಕುಮಾರ್ ಅಪಹರಣ ಮತ್ತು ಆರ್ಥಿಕ ಸಂಕಷ್ಟ ಕಾಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಎಸ್.ಎಂ. ಕೃಷ್ಣ ಕರ್ನಾಟದ ಅಭಿವೃದ್ದಿಗೆ ಅಪಾರ ಶ್ರಮವಹಿಸಿದರು. ಅವರ ಆಡಳಿತದಲ್ಲಿ ರಾಜ್ಯದ ಬಜೆಟ್ ಅನ್ನು 34 ಸಾವಿರ ಕೋಟಿ ಹೆಚ್ಚಳ ಮಾಡಿದರು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣ ರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೆ ಕಾರಣ ಎಂದರೆ ತಪ್ಪಾಗಲಾರದು. ರಾಜಧಾನಿಯಿಂದ ಭರಪೂರ ಆದಾಯ ಬಂದರೆ ರಾಜ್ಯದ ಉಳಿದ ಭಾಗಗಳೂ ಅದರ ಲಾಭ ಪಡೆಯುತ್ತವೆ ಎನ್ನುವುದು ಕೃಷ್ಣ ಅವರ ದೂರಾಲೋಚನೆಯ ಫಲವನ್ನು ಬೆಂಗಳೂರಿಗರು ಸವಿಯುತ್ತಿದ್ದಾರೆ.
ಸಿಎಂ ಆಗಿದ್ದ ಬೆಂಗಳೂರು ಅಜೆಂಡಾ ಟಾಸ್ಟ್ ಫೋರ್ಸ್ (ಬಿಎಟಿಎಫ್) ರಚಿಸಿದ್ದರು. ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರಿನ ಚಹರೆಯನ್ನು ಬದಲಾಯಿಸಲು ಇದು ಪ್ರಮುಖ ಕೊಡುಗೆ ನೀಡಿತು. ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ( BATF ) ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಆಗಿದ್ದು ನಗರಕ್ಕೆ ಅಭಿವೃದ್ಧಿ ಕಾರ್ಯಸೂಚಿಯನ್ನು ವಿನ್ಯಾಸಗೊಳಿಸಲು ವ್ಯಾಪಾರ ಮತ್ತು ನಾಗರಿಕ ನಾಯಕರನ್ನು ಪ್ರೋ-ಬೋನೋ ಆಧಾರದ ಮೇಲೆ ತರುವುದು ಮತ್ತು ನಗರದ ಮೂಲಸೌಕರ್ಯ ಮತ್ತು ಸೇವಾ ವಿತರಣೆಯನ್ನು ಬೇರೆಡೆ ಉತ್ತಮ ಅಭ್ಯಾಸ ವ್ಯವಸ್ಥೆಗಳ ಪ್ರಕಾರ ನವೀಕರಿಸುವ ಮತ್ತು ಸುಧಾರಿಸುವ ಮಾರ್ಗಗಳನ್ನು ಸೂಚಿಸುವುದು ಇದರ ಪ್ರಮುಖ ಗುರಿಯಾಗಿತ್ತು.
ಒಟ್ಟಾರೆಯಾಗಿ ನೋಡುವುದಾದರೆ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರ ಅನನ್ಯವಾದ ಕೊಡುಗೆಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.


Click it and Unblock the Notifications