ನಮ್ಮ ಮೆಟ್ರೋ (Namma Metro) ಸೇವೆ, ಇಂದು ಬೆಂಗಳೂರಿನ ಅಗತ್ಯ ಸಾರಿಗೆ ವ್ಯವಸ್ಥೆಯಾಗಿಬಿಟ್ಟಿದೆ. ಅತ್ತ ಯಾವುದೇ ಜಾಗಕ್ಕೂ ಕೆಲವೇ ಕ್ಷಣಗಳಲ್ಲಿ ಜನರನ್ನು ತಲುಪುವಂತೆ ಮೆಟ್ರೋ ಸಹಕಾರಿಯಾಗುತ್ತದೆ. ದಿನಕ್ಕೆ ಲಕ್ಷಗಟ್ಟಲೆ ಜನರನ್ನು ಕೊಂಡೊಯ್ಯುವ ಮೆಟ್ರೋ ಸೇವೆ ಇದೀಗ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಈಗಾಗಲೇ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ಥೆಗೂ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಈ ವ್ಯವಸ್ಥೆ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆ ಬೆನ್ನಲ್ಲೇ ಬಿಎಂಆರ್‌ಸಿಎಲ್ ಕೂಡಾ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಪಾರ್ಕಿಂಗ್ ಸಮಸ್ಯೆಗೆ ಪರಿಹಾರ!
ನಮ್ಮ ಮೆಟ್ರೋ ನಿಲ್ದಾಣಗಳ ಬಳಿ ವಾಹನ ನಿಲುಗಡೆ ಸಮಸ್ಯೆಗಳಿಂದ ಇತ್ತೀಚೆಗೆ ಹಲವು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಆದ್ರೆ ಇದೀಗ ಈ ಸಮಸ್ಯೆಗೆ ಪರಿಹಾರ ಒದಗಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದ ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಆಧುನಿಕ ಬಹುಮಹಡಿ ಪಾರ್ಕಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲು ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಇದು ವಾಹನ ನಿಲುಗಡೆ ಕೊರತೆಯನ್ನು ನಿಭಾಯಿಸಿ, ಸಂಚಾರ ದಟ್ಟಣೆ ಮತ್ತು ಸುರಕ್ಷತೆಯನ್ನು ಸುಧಾರಿಸಲಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದ ಮೆಟ್ರೋ ಪ್ರಯಾಣಿಕರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.
ಸಮಸ್ಯೆಯಲ್ಲಿ ಮೆಟ್ರೋ ನಿಲ್ದಾಣಗಳು:
ಪ್ರಸ್ತುತ, ಬೆಂಗಳೂರಿನ ಬಹುತೇಕ ಮೆಟ್ರೋ ನಿಲ್ದಾಣಗಳ ಬಳಿ ಖಾಸಗಿ ಗುತ್ತಿಗೆದಾರರು ಖಾಲಿ ಜಾಗಗಳನ್ನು ಅನೌಪಚಾರಿಕವಾಗಿ ವಾಹನ ನಿಲುಗಡೆಗೆ ಬಳಸುತ್ತಿದ್ದಾರೆ. ಇದರಿಂದ ನಿರ್ವಹಣೆಯಲ್ಲಿ ಸಮಸ್ಯೆ, ಭದ್ರತೆಯ ಕೊರತೆ ಮತ್ತು ಅಸಮರ್ಪಕ ಸೌಲಭ್ಯಗಳಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಇದನ್ನು ನಿಭಾಯಿಸಲು, ಜಿಬಿಎ ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಯೋಚಿಸಿದೆ.
ಒಂದು ನಿರ್ಧಾರ, ಹಲವು ಪ್ರಯೋಜನ!
ಮೆಟ್ರೋನ ಬಹುಮಹಡಿ ಪಾರ್ಕಿಂಗ್ ಸೌಲಭ್ಯಗಳಿಂದ ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಸಾಮರ್ಥ್ಯ ಮತ್ತಷ್ಟು ಉತ್ತಮವಾಗಲಿದೆ. ಕಡಿಮೆ ಜಾಗದಲ್ಲೇ ಹೆಚ್ಚು ವಾಹನಗಳಿಗೆ ಅವಕಾಶ ಕಲ್ಪಿಸುವುದರಿಂದ ರಸ್ತೆಬದಿಯ ದಟ್ಟಣೆ ಕಡಿಮೆಯಾಗಿ, ಸುರಕ್ಷಿತ ಆಯ್ಕೆಗಳು ಲಭಿಸುತ್ತವೆ. ಸುಧಾರಿತ ಪಾರ್ಕಿಂಗ್ ನಿರ್ವಹಣೆಯು ಜನನಿಬಿಡ ಮೆಟ್ರೋ ಕಾರಿಡಾರ್‌ಗಳಲ್ಲಿ ಸುಗಮ ಸಂಚಾರಕ್ಕೂ ಅವಕಾಶ ಕಲ್ಪಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸಭೆಯಲ್ಲಿ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಮೆಟ್ರೋ ನಿಲ್ದಾಣಗಳ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಭೆಯಲ್ಲಿ ಐದು ನಗರಪಾಲಿಕೆಗಳ ಆಯುಕ್ತರು, ಬೆಂಗಳೂರು ಪೊಲೀಸ್ ಕಮಿಷನರ್ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಭಾಗವಹಿಸಿದ್ದರು.
ಹಲವು ವರ್ಷಗಳಿಂದ ಮೆಟ್ರೋ ನಿಲ್ದಾಣಗಳಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರಯಾಣಿಕರಿಂದ ಭಾರೀ ಬೇಡಿಕೆಯಿತ್ತು. ಆದ್ರೆ ಈ ಕುರಿತು ಹಿಂದಿನ ಚರ್ಚೆಗಳು ಫಲ ನೀಡಿರಲಿಲ್ಲ. ಇದೀಗ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ. ಇದೀಗ ಸೂಕ್ತ ಸ್ಥಳ ಗುರುತಿಸುವ ಇತ್ತೀಚಿನ ನಿರ್ದೇಶನವು ಈ ಬಹುನಿರೀಕ್ಷಿತ ಯೋಜನೆಗೆ ಶೀಘ್ರದಲ್ಲೇ ಅಡಿಪಾಯ ಹಾಕಲಿದೆ. ಒಂದು ವೇಳೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ, ಇದು ಮೆಟ್ರೋ ಬಳಕೆದಾರರ ದೈನಂದಿನ ಪ್ರಯಾಣದ ಅನುಭವವನ್ನು ಮತ್ತಷ್ಟು ಗುಣಮಟ್ಟಗೊಳಿಸಲಿದೆ.


Click it and Unblock the Notifications