ನವದೆಹಲಿ, ಮೇ 13: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಡ ಕುಟುಂಬಗಳ ಮಹಿಳೆಯರಿಗೆ ₹ 1 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ಅವರು, "ನಮಸ್ಕಾರ, ನನ್ನ ಪ್ರೀತಿಯ ಸಹೋದರಿಯರೇ. ಮಹಿಳೆಯರು ಸ್ವಾತಂತ್ರ್ಯ ಹೋರಾಟದಿಂದ ಆಧುನಿಕ ಭಾರತದ ಸೃಷ್ಟಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ, ಇಂದು ನಮ್ಮ ಮಹಿಳೆಯರು ತೀವ್ರ ಹಣದುಬ್ಬರದ ನಡುವೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಶ್ರಮ ಮತ್ತು ತಪಸ್ಸಿಗೆ ನ್ಯಾಯ ಸಲ್ಲಿಸಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್‌ನ 'ಮಹಾಲಕ್ಷ್ಮಿ' ಯೋಜನೆಯಡಿ ನಾವು ಪ್ರತಿ ವರ್ಷ ಬಡ ಕುಟುಂಬದ ಮಹಿಳೆಗೆ ₹ 1 ಲಕ್ಷ ನೀಡುತ್ತೇವೆ. ಈ ಭರವಸೆಗಳು ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದ ಕೋಟ್ಯಂತರ ಕುಟುಂಬಗಳ ಜೀವನವನ್ನು ಬದಲಾಯಿಸಿವೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

"ಅದು ನರೇಗಾ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಅಥವಾ ಆಹಾರ ಭದ್ರತೆ, ಕಾಂಗ್ರೆಸ್ ಪಕ್ಷವು ನಮ್ಮ ಯೋಜನೆಗಳ ಮೂಲಕ ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಿದೆ. ಮಹಾಲಕ್ಷ್ಮಿ ನಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಹೊಸ ಭರವಸೆ. ಈ ಕಷ್ಟದ ಸಮಯದಲ್ಲಿ, ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಕೈ ನಿಮ್ಮೊಂದಿಗಿದೆ ಮತ್ತು ಈ ಕೈ ನಿಮ್ಮ ಪರಿಸ್ಥಿತಿಯನ್ನು ಬದಲಾಯಿಸುತ್ತದೆ" ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನವು ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 96 ಕ್ಷೇತ್ರಗಳಲ್ಲಿ ನಡೆದಿದೆ. 96 ಲೋಕಸಭಾ ಸ್ಥಾನಗಳ ಪೈಕಿ ಆಂಧ್ರಪ್ರದೇಶದಿಂದ 25, ತೆಲಂಗಾಣದಿಂದ 17, ಉತ್ತರ ಪ್ರದೇಶದಿಂದ 13, ಮಹಾರಾಷ್ಟ್ರದಿಂದ 11, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ತಲಾ 8, ಬಿಹಾರದಿಂದ ಐದು, ಜಾರ್ಖಂಡ್ ಮತ್ತು ಒಡಿಶಾದಿಂದ ತಲಾ ನಾಲ್ಕು ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಒಂದು ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಚುನಾವಣಾ ಆಯೋಗದ ಪ್ರಕಾರ, 96 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 4,264 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಲ್ಕನೇ ಹಂತವು ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಪೈಪೋಟಿಗೆ ಸಾಕ್ಷಿಯಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ಟಿಎಂಸಿ ನಾಯಕ ಮಹುವಾ ಮೊಯಿತ್ರಾ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್, ಜೆಡಿಯುನ ರಾಜೀವ್ ರಂಜನ್ ಸಿಂಗ್ (ಲಾಲನ್ ಸಿಂಗ್), ಟಿಎಂಸಿ ನಾಯಕರಾದ ಶತ್ರುಘ್ನ ಸಿನ್ಹಾ ಮತ್ತು ಯೂಸುಫ್ ಪಠಾಣ್ ಮುಂತಾದ ನಾಯಕರು ಕಣದಲ್ಲಿದ್ದಾರೆ.


Click it and Unblock the Notifications