ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡಿದವರಿಗೆ ಎಂಥಾ ಗುಡ್‌ನ್ಯೂಸ್ ಇದೆ ಗೊತ್ತಾ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದು, ನವೆಂಬರ್ 13, 2025ರಂದು, ಸಾವರಿನ್ ಗೋಲ್ಡ್ ಬಾಂಡ್ (SGB) 2018-19 ಸರಣಿ-III ರ ಹೂಡಿಕೆದಾರರಿಗೆ ಅವಧಿಗೂ ಮುನ್ನವೇ ಹಣ ಪಡೆಯುವ ಅವಕಾಶ ನೀಡಿದೆ. ಈ ಬಾಂಡ್‌ಗಳ ಪ್ರತಿ ಗ್ರಾಂ ಚಿನ್ನಕ್ಕೆ ₹12,350 ರಂತೆ ರಿಡಂಪ್ಷನ್ ದರವನ್ನು ನಿಗದಿಪಡಿಸಲಾಗಿದೆ. ಇದು ಹೂಡಿಕೆದಾರರಿಗೆ ಒಟ್ಟು ಸುಮಾರು 288% ವರೆಗೆ ಆದಾಯ ನೀಡುವಂತಾಗಿದೆ.

ಈ ಸರಣಿಯ ಬಾಂಡ್‌ಗಳನ್ನು ಭಾರತ ಸರ್ಕಾರ ಅಕ್ಟೋಬರ್ 8, 2018ರಂದು ಹೊರಡಿಸಿತ್ತು ಮತ್ತು ನವೆಂಬರ್ 13, 2018ರಂದು ವಿತರಿಸಿತ್ತು. ನಿಯಮಗಳ ಪ್ರಕಾರ, ಹೂಡಿಕೆದಾರರು ಬಾಂಡ್ ವಿತರಣೆಯ ಐದು ವರ್ಷಗಳ ನಂತರ, ಬಡ್ಡಿ ಪಾವತಿ ದಿನಗಳಲ್ಲಿ ಬಾಂಡ್‌ಗಳನ್ನು ಮುಂಚಿತವಾಗಿ ವಾಪಸ್ ಪಡೆಯಬಹುದು. ಇದೇ ಹಿನ್ನೆಲೆ ಇಂದು (ನವೆಂಬರ್ 13, 2025) ದಿನಾಂಕವು ಮುಂಚಿತ ಹಣಪಡೆದಿಗೆ ಲಭ್ಯವಿರುವ ದಿನವಾಗಿದೆ.
ರಿಡಂಪ್ಷನ್ ದರವನ್ನು ಇಂಡಿಯಾ ಬುಲಿಯನ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಟಿಸಿದ 999 ಶುದ್ಧತೆಯ ಚಿನ್ನದ ಬೆಲೆಗಳ ಮೂರು ದಿನಗಳ ಸರಾಸರಿಯ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ನವೆಂಬರ್ 10, 11 ಮತ್ತು 12, 2025ರ ಚಿನ್ನದ ದರಗಳನ್ನು ಪರಿಗಣಿಸಿ ₹12,350 ಪ್ರತಿ ಗ್ರಾಂ ದರ ತೀರ್ಮಾನಿಸಲಾಗಿದೆ.
ಅಂದರೆ, ಒಂದು ಘಟಕದ ಬಾಂಡ್ ಹೊಂದಿರುವವರು (ಒಂದು ಗ್ರಾಂ ಚಿನ್ನಕ್ಕೆ ಸಮಾನ) ₹12,350 ಪಡೆಯಲಿದ್ದಾರೆ. ಜೊತೆಗೆ, ಹೂಡಿಕೆ ಅವಧಿಯಲ್ಲಿ ಅವರಿಗೆ ಆರು ತಿಂಗಳಿಗೊಮ್ಮೆ ಪಾವತಿಸಲಾದ 2.5% ವಾರ್ಷಿಕ ಬಡ್ಡಿಯ ಲಾಭವೂ ದೊರೆಯುತ್ತದೆ.
ಮುಂಚಿತವಾಗಿ ಹಣ ಪಡೆಯಲು ಬಯಸುವ ಹೂಡಿಕೆದಾರರು ತಮ್ಮ ಬಾಂಡ್ ಖರೀದಿಸಿದ ಬ್ಯಾಂಕ್, ಅಂಚೆ ಕಚೇರಿ ಅಥವಾ ಡೆಪಾಸಿಟರಿ ಪಾಲುದಾರರನ್ನು ಸಂಪರ್ಕಿಸಬೇಕು. ಬಡ್ಡಿ ಪಾವತಿ ದಿನಾಂಕದ ಕೆಲ ದಿನಗಳ ಮೊದಲು ವಿನಂತಿಯನ್ನು ಸಲ್ಲಿಸುವುದು ಸೂಕ್ತ. ರಿಡಂಪ್ಷನ್ ಮೊತ್ತ ನೇರವಾಗಿ ಹೂಡಿಕೆದಾರರ ನೋಂದಾಯಿತ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಭಾರತ ಸರ್ಕಾರವು 2015ರ ನವೆಂಬರ್‌ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪರಿಚಯಿಸಿತು. ಇದರ ಉದ್ದೇಶ ದೇಶದ ಚಿನ್ನದ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಚಿನ್ನದ ಭೌತಿಕ ಸಂಗ್ರಹಣೆಯನ್ನು ತಗ್ಗಿಸುವುದು ಹಾಗೂ ಗೃಹ ಉಳಿತಾಯವನ್ನು ಹಣಕಾಸು ಆಸ್ತಿಗಳ ಕಡೆಗೆ ತಿರುಗಿಸುವುದಾಗಿದೆ.
ಈ ಬಾಂಡ್‌ಗಳು ಎಂಟು ವರ್ಷಗಳ ನಿಗದಿತ ಅವಧಿಯುಳ್ಳವು, ಆದರೆ ಹೂಡಿಕೆದಾರರು ಐದು ವರ್ಷಗಳ ನಂತರ ಬಡ್ಡಿ ಪಾವತಿ ದಿನಗಳಲ್ಲಿ ಅವಧಿಗೂ ಮುನ್ನವೇ ಹಣ ಪಡೆಯುವ ಆಯ್ಕೆ ಹೊಂದಿರುತ್ತಾರೆ. ಜೊತೆಗೆ, ಈ ಬಾಂಡ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾರಾಟ ಮಾಡಬಹುದು, ಇತರರಿಗೆ ವರ್ಗಾಯಿಸಬಹುದು ಅಥವಾ ಸಾಲಕ್ಕೆ ಮೇಲಾಧಾರವಾಗಿ ಬಳಸಬಹುದು.
ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ, SGB ಗಳಿಂದ ಲಭಿಸುವ ಬಡ್ಡಿ ತೆರಿಗೆಗೆ ಒಳಪಟ್ಟಿರುತ್ತದೆ. ಆದರೆ ಬಾಂಡ್‌ಗಳನ್ನು ರಿಡೀಮ್ ಮಾಡುವ ವೇಳೆ ಬಂಡವಾಳ ಲಾಭದ ತೆರಿಗೆಯಿಂದ ಮುಕ್ತವಾಗಿರುತ್ತಾರೆ. ಎಕ್ಸ್‌ಚೇಂಜ್‌ನಲ್ಲಿ ಬಾಂಡ್‌ಗಳ ವರ್ಗಾವಣೆಯಿಂದ ಉಂಟಾಗುವ ಬಂಡವಾಳ ಲಾಭಗಳಿಗೆ ಇಂಡೆಕ್ಸೇಷನ್ ಪ್ರಯೋಜನ ಲಭ್ಯ.
ಒಟ್ಟಾರೆ, ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆಯಿಂದ ಲಾಭದ ಜೊತೆಗೆ ಬಡ್ಡಿಯ ಪ್ರಯೋಜನವನ್ನೂ ನೀಡುವ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆಯಾಗಿದೆ.


Click it and Unblock the Notifications