ಸಾಫ್ಟ್‌ವೇರ್ ದಿಗ್ಗಜ ಝೋಹೋ (Zoho) ಕಾರ್ಪ್‌ನ ಸ್ಥಾಪಕ ಶ್ರೀಧರ್ ವೆಂಬು ಅವರು ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದಾರೆ. ತಮ್ಮ ಈ ನಿರ್ಧಾರವನ್ನು ತಮ್ಮ ಅಧಿಕೃತ ಎಕ್ಸ್'ನಲ್ಲಿನ ಪೋಸ್ಟ್'ನಲ್ಲಿ ಪ್ರಕಟಿಸಿದ್ದಾರೆ. ತಮ್ಮ ಗಮನವನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಕ್ಷೇತ್ರಕ್ಕೆ ಹರಿಸಲಿದ್ದು, ಕಂಪನಿಯ 'ಮುಖ್ಯ ವಿಜ್ಞಾನಿ'ಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.
" ಇಂದು ಹೊಸ ಅಧ್ಯಾಯ ಪ್ರಾರಂಭವಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿನ ಇತ್ತೀಚಿನ ಪ್ರಮುಖ ಬೆಳವಣಿಗೆಗಳನ್ನು ಒಳಗೊಂಡಂತೆ ನಮ್ಮ ಮುಂದಿರುವ ವಿವಿಧ ಸವಾಲುಗಳು ಮತ್ತು ಅವಕಾಶಗಳನ್ನು ಪರಿಗಣಿಸಿ, ನಾನು ನನ್ನ ಸಂಪೂರ್ಣ ಗಮನವನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಚಟುವಟಿಕೆಗಳತ್ತ ಗಮನಹರಿಸುವುದು ಸೂಕ್ತ ಎಂದು ಭಾವಿಸಿದ್ದೇನೆ.. ಅಲ್ಲದೆ, ನನ್ನ ವೈಯಕ್ತಿಕ ಗ್ರಾಮೀಣಾಭಿವೃದ್ಧಿ ಧ್ಯೇಯವನ್ನು ಮುಂದುವರಿಸಲು ನಾನು ಬಯಸುತ್ತೇನೆ.

ಝೋಹೋ ಕಾರ್ಪ್‌ನ ಸಿಇಒ ಹುದ್ದೆಯಿಂದ ನಾನು ನಿರ್ಗಮಿಸಲಿದ್ದೇನೆ ಮತ್ತು ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಚಟುವಟಿಕೆಗಳಿಗೆ ನೇತೃತ್ವವಹಿಸುವ ಹೊಸ ಪಾತ್ರವನ್ನು "ಮುಖ್ಯ ವಿಜ್ಞಾನಿ"ಯಾಗಿ ವಹಿಸಿಕೊಳ್ಳಲಿದ್ದೇನೆ. ನಮ್ಮ ಸಹ-ಸಂಸ್ಥಾಪಕ ಶೈಲೇಶ್ ಕುಮಾರ್ ದವೆ ನಮ್ಮ ಹೊಸ ಗ್ರೂಪ್ ಸಿಇಒ ಆಗಿ ಸೇವೆ ಸಲ್ಲಿಸಲಿದ್ದಾರೆ. ನಮ್ಮ ಸಹ-ಸಂಸ್ಥಾಪಕ ಟೋನಿ ಥಾಮಸ್ ಜೊಹೋ ಯುಎಸ್ ಅನ್ನು ಮುನ್ನಡೆಸಲಿದ್ದಾರೆ. ರಾಜೇಶ್ ಗಣೇಶನ್ ನಮ್ಮ ಮ್ಯಾನೇಜ್ ಎಂಜಿನಿಯರಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ ಮತ್ತು ಮಣಿ ವೆಂಬು http://Zoho.com ವಿಭಾಗವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.
ನಮ್ಮ ಕಂಪನಿಯ ಭವಿಷ್ಯವು ನಾವು ಸಂಶೋಧನೆ ಮತ್ತು ಅಭಿವೃದ್ಧಿ ಸವಾಲನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೇವೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಈ ಹೊಸ ಜವಾಬ್ದಾರಿಯನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ. ಮತ್ತೆ ತಾಂತ್ರಿಕ ಕ್ಷೇತ್ರದಲ್ಲಿ ನೇರವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ." ಎಂದು ವಿವರವಾಗಿ ತಾವು ಸಿಇಒ ಹುದ್ದೆಯಿಂದ ಕೆಳಗೆ ಇಳಿದ ಕಾರಣವನ್ನು ವಿವರಿಸಿದ್ದಾರೆ.
ಶ್ರೀಧರ್ ವೆಂಬು ಯಾರು?
ಶ್ರೀಧರ್ ವೆಂಬು ಸಾಫ್ಟ್‌ವೇರ್ ಕ್ಷೇತ್ರದ ಪ್ರಮುಖಕರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಶ್ರೀಧರ್ ವೆಂಬು ಅವರು ಖಾಸಗಿ ಹೂಡಿಕೆಯ ಮೇಲೆ ನಡೆಯುವ ಕ್ಲೌಡ್-ಆಧಾರಿತ ವ್ಯವಹಾರ ಸಾಫ್ಟ್‌ವೇರ್ ಅಭಿವೃದ್ಧಿ ಕಂಪನಿಯಾದ ಝೋಹೋ ಕಾರ್ಪ್‌ನ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಝೋಹೋದಲ್ಲಿ ಅವರು ಮತ್ತು ಅವರ ಇಬ್ಬರು ಸಹೋದರರು ಹೆಚ್ಚಿನ ಷೇರುಗಳನ್ನು ಹೊಂದಿದ್ದಾರೆ.
ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಿಂದ ವಿದ್ಯುತ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದ ವೆಂಬು ಅವರು ಭಾರತದ ಅತ್ಯಂತ ಯಶಸ್ವಿ ಖಾಸಗಿ ಹೂಡಿಕೆಯ ಕಂಪನಿಗಳಲ್ಲಿ ಒಂದಾದ ಝೋಹೋವನ್ನು ಸ್ಥಾಪಿಸಿದ್ದಾರೆ. ಅವರು "ಝೋಹೋ ವಿಶ್ವವಿದ್ಯಾಲಯ" ಎಂಬ ಆಂತರಿಕ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದ್ದು, ಇದು ಪದವಿ ಪಡೆದು ಹೊರಬಂದ ಫ್ರೆಶ್ ಪದವೀಧರರಿಗೆ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರನ್ನು ಝೋಹೋ ಕಂಪನಿಯು ನೇಮಕಾತಿ ಮಾಡಿಕೊಳ್ಳುತ್ತದೆ. ಅಲ್ಲದೆ, ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗಾಗಿ ಶಾಲೆಯೊಂದನ್ನು ಸ್ಥಾಪಿಸಿ ಅದನ್ನು ನಿರ್ವಹಿಸುತ್ತಿದ್ದಾರೆ.
ಫೋರ್ಬ್ಸ್ ಪತ್ರಿಕೆಯ ಪ್ರಕಾರ, ಅವರ ನಿವ್ವಳ ಮೌಲ್ಯವು 5.8 ಬಿಲಿಯನ್ ಡಾಲರ್‌ಗಳಷ್ಟು ಅಗಾಧವಾಗಿದೆ. ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿಯಾಗಿರುವ ಶ್ರೀಧರ್ ವೆಂಬು ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಕೂಡ ಪಡೆದುಕೊಂಡಿದ್ದಾರೆ. 1996 ರಲ್ಲಿ, ಶ್ರೀಧರ್ ವೆಂಬು ಮತ್ತು ಟೋನಿ ಥಾಮಸ್ ಎಂಬವರು ಸೇರಿ ಕ್ಲೌಡ್-ಆಧಾರಿತ ವ್ಯಾಪಾರ ಸಾಫ್ಟ್‌ವೇರ್ ಅನ್ನು ಉತ್ಪಾದಿಸುವ ಖಾಸಗಿ ಕಂಪನಿ ಝೋಹೋವನ್ನು ಪ್ರಾರಂಭಿಸಿದ್ದರು.


Click it and Unblock the Notifications