ಇಂದಿನ ಭಾರತೀಯ ಶೇರು ಮಾರುಕಟ್ಟೆ ಮಂದಗತಿಯಲ್ಲಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಬೆಳಿಗ್ಗೆ 7:55ರ ಸುಮಾರಿಗೆ ಗಿಫ್ಟ್ ನಿಫ್ಟಿ (GIFT Nifty) ರೇಟ್, ಶುಕ್ರವಾರದ ಮುಕ್ತಾಯಕ್ಕಿಂತ ಸುಮಾರು 21 ಅಂಕ ಕುಸಿದು 23,340ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಶುಕ್ರವಾರ ನಿಫ್ಟಿ 50 ಸೂಚ್ಯಂಕವು 23,346.40 ರಷ್ಟರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇನ್ನು ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಾತಾವರಣ ಕಂಡುಬಂದಿದೆಯಾದರೂ, ಸತತ ಮೂರು ದಿನಗಳ ಸಾರ್ವಜನಿಕ ರಜೆಯಿರುವುದರಿಂದ ಜಪಾನ್ ಮಾರುಕಟ್ಟೆ ಬಂದ್ ಆಗಿದೆ. ಅತ್ತ ಅಮೆರಿಕದ ಫ್ಯೂಚರ್ಸ್ ಮಾರುಕಟ್ಟೆ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಲ್ಪ ಏರಿಕೆ ಕಂಡಿದೆ.
ಏಷ್ಯನ್ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬೆಲೆ ಬ್ಯಾರೆಲ್‌ಗೆ ಸುಮಾರು $103 ರಷ್ಟಿದ್ದು, ತೈಲ ಮಾರಾಟ ಕಂಪನಿಗಳ (OMCs) ಮೇಲಿನ ಒತ್ತಡ ಕೊಂಚ ಕಡಿಮೆಯಾಗಿದೆ. ಶುಕ್ರವಾರ 95.8725 ರಷ್ಟಿದ್ದ ಡಾಲರ್ ಎದುರಿನ ರೂಪಾಯಿ ಮೌಲ್ಯ, ಇಂದು 95.90–95.95 ರಷ್ಟರಲ್ಲಿ ಆರಂಭವಾಗುವ ಸೂಚನೆ ಸಿಕ್ಕಿದೆ. ಇನ್ನು ಭಾರತದ 10 ವರ್ಷಗಳ ಬೆಂಚ್‌ಮಾರ್ಕ್ ಬಾಂಡ್ ಇಳುವರಿ ಶುಕ್ರವಾರ ಶೇ. 7.0686 ರಷ್ಟರಲ್ಲಿ ಅಂತ್ಯಗೊಂಡಿದ್ದರೆ, ಇಂಡಿಯಾ ವಿಐಎಕ್ಸ್ (India VIX) 11.39 ಕ್ಕೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಸದ್ಯಕ್ಕೆ ಏರಿಳಿತದ ಆತಂಕ ಕಡಿಮೆಯಿರುವುದನ್ನು ತೋರಿಸುತ್ತಿದೆ.

ಸೆನ್ಸೆಕ್ಸ್, ನಿಫ್ಟಿ ಪ್ರಿ-ಓಪನ್ ಅಪ್‌ಡೇಟ್: ವಲಯವಾರು ವಹಿವಾಟು ಹಾಗೂ ಆರಂಭಿಕ ಟ್ರೆಂಡ್
ಬೆಳಿಗ್ಗೆ 9:12ರ ಪ್ರಿ-ಓಪನಿಂಗ್ ವಹಿವಾಟಿನಲ್ಲಿ ನಿಫ್ಟಿ 23,330ರ ಸಮೀಪವಿತ್ತು. ಬಳಿಕ 9:18ರ ವೇಳೆಗೆ ನಿಫ್ಟಿ 23,386 ಹಾಗೂ ಸೆನ್ಸೆಕ್ಸ್ 74,741ರ ಮಟ್ಟದಲ್ಲಿ ವಹಿವಾಟು ನಡೆಸಿದವು. ವಲಯಗಳ ವಿಚಾರಕ್ಕೆ ಬಂದರೆ, ಆರಂಭದಲ್ಲಿ ಐಟಿ ಮತ್ತು ಪಿಎಸ್‌ಯು ಬ್ಯಾಂಕ್‌ಗಳ ಷೇರುಗಳು ಹಿನ್ನಡೆ ಅನುಭವಿಸಿದರೆ, ಆಟೋ ಮತ್ತು ರಿಯಾಲ್ಟಿ ವಲಯದ ಷೇರುಗಳು ಬಲ ಕಂಡುಕೊಂಡವು. ಮತ್ತೊಂದೆಡೆ, ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 95.89 ರಷ್ಟರಲ್ಲಿ ಸ್ಥಿರವಾಗಿ ಆರಂಭವಾಗಿದ್ದು, ಹೂಡಿಕೆದಾರರಲ್ಲಿ ಜಾಗರೂಕತೆಯ ಜೊತೆಗೆ ಸಕಾರಾತ್ಮಕ ಭರವಸೆ ಮೂಡಿಸಿದೆ.
ಗಿಫ್ಟ್ ನಿಫ್ಟಿ ಮುನ್ಸೂಚನೆ, ವಿದೇಶಿ ಹೂಡಿಕೆ ಮತ್ತು ಪ್ರಮುಖ ಬ್ಲಾಕ್ ಡೀಲ್‌ಗಳು
ಮಾರುಕಟ್ಟೆಯ ಚಲನೆಗೆ ಹೂಡಿಕೆಗಳ ಹರಿವೇ ಪ್ರಮುಖ ದಾರಿದೀಪವಾಗಿದೆ. ಶುಕ್ರವಾರದ ಅಂಕಿಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಸುಮಾರು ₹600 ಕೋಟಿ ಮೌಲ್ಯದ ಷೇರುಗಳನ್ನು ನಿವ್ವಳ ಖರೀದಿಸಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (DII) ₹1,020 ಕೋಟಿ ಮೌಲ್ಯದ ಷೇರುಗಳನ್ನು ಮಾರುಕಟ್ಟೆಗೆ ಸೇರಿಸಿದ್ದಾರೆ. ಪ್ರಮುಖ ಬ್ಲಾಕ್ ಡೀಲ್ ವಿಚಾರಕ್ಕೆ ಬಂದರೆ, 'ಲಾರ್ಡ್ಸ್ ಮಾರ್ಕ್ ಇಂಡಸ್ಟ್ರೀಸ್' ಕಂಪನಿಯ 5.1 ಮಿಲಿಯನ್ (51 ಲಕ್ಷ) ಷೇರುಗಳನ್ನು ಗೋಲ್ಡ್‌ಮನ್ ಸ್ಯಾಕ್ಸ್ ಇನ್‌ವೆಸ್ಟ್‌ಮೆಂಟ್ಸ್ ಮಾರಿಷಸ್ ಖರೀದಿಸಿದೆ. ಅದೇ ದಿನ ಕಂಪನಿಯ ಪ್ರವರ್ತಕರು ಮುಕ್ತ ಮಾರುಕಟ್ಟೆಯಲ್ಲಿ ಶೇ. 4.32 ರಷ್ಟು ಪಾಲು ಮಾರಾಟ ಮಾಡಿದ್ದಾರೆ.
ಸುದ್ದಿಯಲ್ಲಿರುವ ಶೇರುಗಳು, ಐಪಿಒ/ಎಸ್‌ಎಂಇ ಲಿಸ್ಟಿಂಗ್ ಹಾಗೂ ಆರಂಭಿಕ ಲೈಮ್‌ಲೈಟ್
ಇಂದು ಪ್ರೈಮರಿ ಮಾರುಕಟ್ಟೆಯಲ್ಲಿ ಹಲವು ಚಟುವಟಿಕೆಗಳಿವೆ. 'ಮಣಿಕಾ ಪ್ಲಾಸ್ಟೆಕ್' ಷೇರುಗಳು ಇಂದು ಶೇರು ಮಾರುಕಟ್ಟೆಗೆ ಪಾದಾರ್ಪಣೆ (Listing) ಮಾಡುತ್ತಿದ್ದರೆ, ಎಸ್‌ಎಂಇ ವಿಭಾಗದ 'ಖೇರಿಯಾ ಆಟೋಕಾಂಪ್' ಮತ್ತು 'ಸ್ಪೆಕ್ಟ್ರಾಎ' ಕಂಪನಿಗಳ ಐಪಿಒ ಸಬ್‌ಸ್ಕ್ರಿಪ್ಷನ್ ಇಂದು ಮುಕ್ತಾಯಗೊಳ್ಳಲಿದೆ. ಇನ್ನು ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಇಂಟರ್‌ಗ್ಲೋಬ್ ಏವಿಯೇಷನ್ ಮತ್ತು ಸನ್ ಫಾರ್ಮಾ ಷೇರುಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ. ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಏಷ್ಯನ್ ಮಾರುಕಟ್ಟೆಯ ಸಕಾರಾತ್ಮಕ ವಾತಾವರಣವು ಆಟೋ, ತೈಲ ಮಾರಾಟ ಕಂಪನಿಗಳು ಮತ್ತು ಮೆಟಲ್ ವಲಯದ ಷೇರುಗಳಿಗೆ ಬೆಂಬಲ ನೀಡಿದೆ.


Click it and Unblock the Notifications
