ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ದಕ್ಷಿಣ ಕನ್ನಡ -ಉಡುಪಿ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಪ್ರಶಾಂತ ಕಡಲತೀರಗಳು ಮತ್ತು ಧಾರ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಆಕರ್ಷಕ ತಾಣವಾಗಿದೆ. ಈ ಪ್ರದೇಶವು ತನ್ನ ರುಚಿಕರವಾದ ಪಾಕಪದ್ಧತಿಗೆ, ವಿಶೇಷವಾಗಿ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿರುವ ಕರಾವಳಿ ಶೈಲಿಯ ಸಸ್ಯಾಹಾರಿ - ಮಾಂಸಹಾರಿ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ.

ಇನ್ನೊಂದೆಡೆ ಕಡಲ ನಗರಿ ಮಂಗಳೂರು ಬೆಳೆಯುತ್ತಿದೆ. ಇಲ್ಲೂ ಬೆಂಗಳೂರಿನಂತೆ ಟ್ರಾಫಿಕ್ ಜಾಮ್‌ನ ಕಿರಿಕಿರಿ ಇದ್ದೇ ಇದೆ. ಉಡುಪಿ - ಮಂಗಳೂರು ನಡುವೆ ದಿನನಿತ್ಯ ಓಡಾಡುವವರ ಸಂಖ್ಯೆಯೂ ಹೆಚ್ಚಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ೧೯೯೭ ರಲ್ಲಿ ವಿಭಜನೆ ಮಾಡಲಾಗಿತ್ತು. ಆದರೆ ವಾಣಿಜ್ಯ ಚಟುವಟಿಕೆ ಹಾಗೂ ಇನ್ನಿತರ ದಿನನಿತ್ಯ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದೇ ಜಿಲ್ಲೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಇಂದು ಕೂಡಾ ಎರಡು ಜಿಲ್ಲೆಗಳ ನಡುವೆ ಅನೇಕ ಖಾಸಗಿ ಬಸ್ ಗಳು ಓಡಾಡುತ್ತಿವೆ ನಿತ್ಯ ಸಂಚರಿಸುವವರು ಸಾವಿರಾರು ಮಂದಿ ಇದ್ದಾರೆ. ಉಡುಪಿಯಿಂದ ಮಂಗಳೂರಿಗೆ ೬೦ ಕಿ. ಮೀ ದೂರವಿದ್ದು, ಒಂದು ಗಂಟೆಗೂ ಹೆಚ್ಚು ಪ್ರಯಾಣದ ಅವಧಿ ತಗುಲುತ್ತದೆ. ಎರಡು ಜಿಲ್ಲೆಗಳ ಮದ್ಯೆ ಓಡಾಟಕ್ಕೆ ಹೆಚ್ಚಿನವರು ಖಾಸಗಿ ವಾಹನ ಹಾಗೂ ಬಸ್ ನ್ನೇ ಅವಲಂಬಿಸಿದ್ದಾರೆ. ಇದೆಲ್ಲವನ್ನು ಅರಿತು ದಿವಂಗತ ಬಿಜೆಪಿ ನಾಯಕ ಡಾ. ವಿ. ಎಸ್. ಆಚಾರ್ಯ ಅವರು ಅಂದು ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ಮಂಗಳೂರು - ಉಡುಪಿ ನಡುವೆ ಮೆಟ್ರೋ ರೈಲು ಪ್ರಸ್ತಾಪವಿಟ್ಟಿದ್ದರು.
ಮಾಸ್ಟರ್ ಪ್ಲಾನ್ ರಚಿಸಲು ರಾಜ್ಯ ಸರ್ಕಾರ ಮುಂದು:
ಹಲವು ವರ್ಷಗಳ ಕರಾವಳಿ ಜನರ ಬೇಡಿಕೆಯಾಗಿರುವ ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ಮಾಸ್ಟರ್ ಪ್ಲಾನ್ ರಚಿಸಲು ರಾಜ್ಯ ಸರಕಾರ ಮುಂದಾಗಿದೆ. ಮಂಗಳೂರು-ಉಡುಪಿ ನಗರಗಳ ಮಧ್ಯ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ 60 ಕಿ.ಮೀ. ಉದ್ದದ ಮಾಸ್ಟರ್ ಪ್ಲಾನ್ ಸಂಕ್ಷಿಪ್ತ ಟಿಪ್ಪಣಿ ಹಾಗೂ ಕಾರ್ಯಸಾಧ್ಯತಾ ವರದಿಯನ್ನು ರೂಪಿಸುವಂತೆ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL)ಕ್ಕೆ ಸೂಚಿಸಿದೆ.
ಮಂಗಳೂರು ಉಡುಪಿ- ಮಣಿಪಾಲ ಇಂಟರ್ ಸಿಟಿ 64 ಕಿ.ಮೀ ಉದ್ದದ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಸರ್ಕಾರ ಉಭಯ ಜಿಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದೆ.
"ಮಂಗಳೂರು ಮತ್ತು ಮಣಿಪಾಲದ ನಡುವೆ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸುವುದು ಅತ್ಯಗತ್ಯ. ಈ ಪ್ರದೇಶದಲ್ಲಿ ಪ್ರಮುಖ ನಗರಗಳು, ಅರೆನಗರಗಳು ಮತ್ತು ಕೈಗಾರಿಕಾ ಪ್ರದೇಶಗಳಿವೆ. ಮೆಟ್ರೋ ರೈಲು ಮಾರ್ಗವು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ, ನಗರ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ" ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈಗಿರುವ ಸಾರಿಗೆ ವ್ಯವಸ್ಥೆ ಬಹಳಷ್ಟು ದಟ್ಟಣೆಯಿಂದ ಕೂಡಿದೆ. ರಸ್ತೆ ಮಾರ್ಗವನ್ನೇ ಅವಲಂಬಿಸಿರುವುದು ಸಂಚಾರಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಜನಸಂಖ್ಯೆ ಹೆಚ್ಚಿರುವುದರಿಂದ ಮೆಟ್ರೋ ರೈಲು ವ್ಯವಸ್ಥೆ ತರಲು ಸೂಕ್ತ ಎನ್ನಲಾಗಿದೆ. ಉದ್ದೇಶಿತ ಮೆಟ್ರೋ ರೈಲು ಯೋಜನೆ ಜಾರಿಯಾದರೆ ಪ್ರಯಾಣದ ಅವಧಿ ಒಂದು ಗಂಟೆಗಿಂತಲೂ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸರಕಾರವು ಉಡುಪಿ-ಮಂಗಳೂರು ಭಾಗದಲ್ಲಿ ಮೆಟ್ರೋ ಆರಂಭಿಸುವ ಬಗ್ಗೆ ಪತ್ರ ಬರೆದಿದೆ. ಬಿಎಂಸಿಆರ್‌ಎಲ್ ಅಧ್ಯಯನ ನಡೆಸಲಿದ್ದು, ವರದಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


Click it and Unblock the Notifications