ನವದೆಹಲಿ, ಜೂನ್ 9: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಅನೇಕ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಗ್ರಾಮಗಳನ್ನು ಸೇರಿದ್ದಾರೆ. ಅಂತವರಲ್ಲಿ ಬಹುತೇಕರು ಸ್ವ ಉದ್ಯೋಗಕ್ಕಾಗಿ ಅರಸುತ್ತಿದ್ದಾರೆ. ಸರ್ಕಾರಗಳೂ ಸಹ ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗೆ ಬೆಂಬಲ ನೀಡಲು ಹಲವಾರು ಉಪ ಕ್ರಮಗಳನ್ನು ಘೋಷಣೆ ಮಾಡುತ್ತಿದೆ.
ಇದಕ್ಕೆ ಪೂರಕವೆಂಬಂತೆ, ದೇಶೀಯವಾಗಿ ಬಿದಿರಿನ ಬಳಕೆಯನ್ನು ಉತ್ತೇಜಿಸಲು ಮತ್ತು ಬೆಳೆಗಾರರನ್ನು ಬೆಂಬಲಿಸಲು ಬಿದಿರಿನ ಮೇಲಿನ ಸುಂಕವನ್ನು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಮಂಗಳವಾರ ಹೆಚ್ಚಿಸಿದೆ.
ಇದರಿಂದ ದೇಶದ ಲಕ್ಷಾಂತರ ಅಸಂಘಟಿತ ಕಾರ್ಮಿಕರಿಗೆ, ಸ್ವ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ. ಬಿದಿರಿನ ವಸ್ತುಗಳನ್ನು ಹೆಚ್ಚೆಚ್ಚು ದೇಶಿಯವಾಗಿ ಉತ್ಪಾದಿಸಿ ಮಾರಾಟ ಮಾಡಲು ಇದು ಸಿಬಿಐಸಿ ಅನುಕೂಲ ಕಲ್ಪಿಸಿದೆ.
10% ರಿಂದ 25% ಕ್ಕೆ ಏರಿಸಿದೆ
ತಕ್ಷಣ ಜಾರಿಗೆ ಬರುವಂತೆ ಬಿದಿರಿನ ಆಮದಿನ ಮೇಲಿನ ಸುಂಕವನ್ನು ಸಿಬಿಐಸಿ 10% ರಿಂದ 25% ಕ್ಕೆ ಏರಿಸಿ ಆದೇಶ ಹೊರಡಿಸಿದೆ. ವ್ಯಾಪಾರಿಗಳು ಸೇರಿದಂತೆ ಯಾವುದೇ ಬಿದಿರಿನ ಆಮದಿಗೆ 25% ಕಸ್ಟಮ್ಸ್ ಸುಂಕವು ಏಕರೂಪವಾಗಿ ಅನ್ವಯಿಸುತ್ತದೆ.
ಎರಡು ತಿಂಗಳ ಆದಾಯ ಮೊಟಕುಗೊಂಡಿದೆ
ಲಾಕ್‌ಡೌನ್ ನಂತರ ಸ್ವ ಉದ್ಯೋಗಿಗಳ ಎರಡು ತಿಂಗಳ ಆದಾಯ ಮೊಟಕುಗೊಂಡಿದೆ. ಆಮದು ಸುಂಕ ಹೆಚ್ಚಳದ ಕ್ರಮವು ರೈತರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದು ಸುಂಕ ಬದಲಾವಣೆಯ ಕುರಿತು ಸಿಬಿಐಸಿ ಟ್ವೀಟ್‌ನಲ್ಲಿ ತಿಳಿಸಿದೆ.
ದೇಶೀಯ ಆರ್ಥಿಕತೆಗೆ ಒಂದು ಬೆಂಬಲ ನೀಡುತ್ತದೆ
ಕಸ್ಟಮ್ಸ್ ಮೇಲಿನ ಹೆಚ್ಚಳವು ದೇಶೀಯ ಆರ್ಥಿಕತೆಗೆ ಒಂದು ಬೆಂಬಲ ನೀಡುತ್ತದೆ. ವಿಶೇಷವಾಗಿ ಅಮೆರಿಕ ಮತ್ತು ಚೀನಾದಂತಹ ದೇಶಗಳು ಸಹ ಇಂತಹ ಕ್ರಮಕ್ಕೆ ಮುಂದಾಗುತ್ತಿವೆ ಎಂದು ಲೈವ್ ಮಿಂಟ್ ವರದಿ ಹೇಳುತ್ತದೆ.
ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕಳೆದ ಎರಡು ಬಜೆಟ್‌ಗಳಲ್ಲಿ ದೇಶೀಯ ಸರಕುಗಳ ಉತ್ಪಾದನೆಯನ್ನು ಉತ್ತೇಜಿಸಲು ಬಂಡವಾಳ ಸರಕುಗಳು ಮತ್ತು ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವುದು ಮತ್ತು ಸ್ಥಳೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದರು.


Click it and Unblock the Notifications