ನವದೆಹಲಿ, ಆಗಸ್ಟ್ 13: ಪತಂಜಲಿ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಎಂಡಿ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರ ಮೇಲೆ ಕೇಳಿಬಂದಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಮಂಗಳವಾರ ಮುಕ್ತಾಯಗೊಳಿಸಿದೆ.
ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೆಲವು ಜಾಹೀರಾತುಗಳನ್ನು ಪ್ರಕಟಸಿದಂತೆ ತಿಳಿಸಿದ್ದರೂ ಕೂಡಾ ಪತಂಜಲಿ ಸಂಸ್ಥೆ ಪ್ರಕಟಿಸಿತ್ತು. ಜನರನ್ನು ದಾರಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ಸುಪ್ರೀಂ ಕೋರ್ಟ್ ಕೆಂಡಕಾರಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿತ್ತು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

ಕಂಪನಿಯು 2023ರ ನವೆಂಬರ್‌ನ ಆದೇಶವನ್ನು ಉಲ್ಲಂಘಿಸಿದೆ. ಗುಣಮುಖವಾಗದ ರೋಗಗಳನ್ನು ಗುಣಪಡಿಸುವ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುವ ಮೂಲಕ ಸುಪ್ರೀಂ ಕೋರ್ಟ್ ಮತ್ತು ಅದರ ಸ್ವಂತ ಜವಾಬ್ದಾರಿಯನ್ನು ಉಲ್ಲಂಘಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ಪತಂಜಲಿ ಸಂಸ್ಥೆ ದಿನಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟ ಮಾಡಿತ್ತು. ಆದರೆ ಇದಕ್ಕೆ ತೃಪ್ತವಾಗದ ಕೋರ್ಟ್ ಜಾಹೀರಾತು ಯಾವ ಪ್ರಮಾಣದಲ್ಲಿ ಮುದ್ರಣ ಮಾಡಿದ್ದಿರಿ ಅದೇ ಪ್ರಮಾಣದಲ್ಲಿ ಕ್ಷಮಾಪಣೆ ಪ್ರಕಟ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿತ್ತು.
ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಟೀಕೆ ಮಾಡಿತ್ತು. ಪತಂಜಲಿ ಉತ್ಪನ್ನಗಳು ಕೊರೊನಾ ಗುಣಪಡಿಸುತ್ತದೆ ಎಂದು ಜಾಹೀರಾತು ನೀಡಿತ್ತು. ಈ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಪ್ರಾರಂಭಿಸಿತ್ತು.
ಕ್ಲಾಸ್ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್:
ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಕ್ಷಮೆ ಯಾಚನೆ ಪತ್ರದ ಜಾಹೀರಾತನ್ನು ಕಡತಗಳಿಗೆ ಸೇರಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಪತಂಜಲಿ ಸಂಸ್ಥೆಯ ಉಭಯ ಮುಖ್ಯಸ್ಥರು ಸಲ್ಲಿಸಿದ್ದ ಬೇಷರತ್ ಕ್ಷಮೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಅವರಿಗೆ ಛೀಮಾರಿ ಹಾಕಿತ್ತು.
ಸರ್ಕಾರಗಳು, ಮಾಧ್ಯಮಗಳು ಸಹ ದಾರಿ ತಪ್ಪಿವೆ. ಮಾಧ್ಯಮವೊಂದರಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಒಂದು ಕಡೆ ಪತಂಜಲಿ ಪ್ರಕರಣ ಏನಾಯಿತು? ಎಂದು ಪ್ರಶ್ನೆ ಮಾಡುತ್ತಿದ್ದರೆ ಇನ್ನೊಂದು ಕಡೆ ಅದೇ ಕಾರ್ಯಕ್ರಮದಲ್ಲಿ ಪತಂಜಲಿಯ ಜಾಹೀರಾತು ಪ್ರಸಾರ ಆಗುತ್ತದೆ ಇದು ಎಂತಹ ಪರಿಸ್ಥಿತಿ ಎಂದು ಕೋರ್ಟ್ ಪ್ರಶ್ನೆ ಮಾಡಿತ್ತು. ಈ ಪ್ರಕರಣದ ನಂತರ ಎಲ್ಲ ಕಂಪನಿಗಳು ಜಾಹೀರಾತು ನೀಡುವಾಗ ಮತ್ತು ರೋಗಗಳಿಗೆ ನಮ್ಮಲ್ಲಿದೆ ಪರಿಹಾರ ಎಂದು ಹೇಳುವುದಕ್ಕೆ ಒಂದಿಷ್ಟು ಬ್ರೇಕ್ ಬಿದ್ದಿದೆ.


Click it and Unblock the Notifications