ನವದೆಹಲಿ, ಏಪ್ರಿಲ್ 3: ಪತಂಜಲಿಯ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ತನ್ನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪತಂಜಲಿ ಸಂಸ್ಥಾಪಕ ಬಾಬಾ ರಾಮ್‌ದೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನಿಮ್ಮ ವಿರುದ್ಧ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಏಕೆ ಪ್ರಾರಂಭಿಸಬಾರದು? ಎಂದು ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ನಂತರ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ್‌ನ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಇಂದು ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದಾರೆ. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠದ ಮುಂದೆ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಹಾಜರಾಗಿದ್ದರು. ಇದೇ ವೇಳೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದಿದ್ದಕ್ಕಾಗಿ ಯೋಗ ಗುರು ಬಾಬಾ ರಾಮದೇವ್ ಮಂಗಳವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಮಾರ್ಚ್ 19 ರಂದು, ಪ್ರಕರಣದಲ್ಲಿ ನೀಡಲಾದ ನೋಟಿಸ್‌ಗೆ ಕಂಪನಿಯು ಪ್ರತಿಕ್ರಿಯಿಸಲು ವಿಫಲವಾದ ಕಾರಣಕ್ಕೆ ವಿನಾಯಿತಿ ನೀಡಿದ ನಂತರ ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿತ್ತು.
ಪತಂಜಲಿ ನೀಡಿದ ಜಾಹೀರಾತುಗಳು ರಾಮ್‌ದೇವ್ ಅವರ ಅಂಗಿಕಾರವನ್ನು ಬಿಂಬಿಸುವುದರಿಂದ ಅವರಿಗೆ ಶೋಕಾಸ್ ನೋಟಿಸ್ ನೀಡುವುದು ಸರಿಯೆಂದು ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ರೋಗಗಳಿಗೆ ಚಿಕಿತ್ಸೆ ನೀಡುವ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂಬ ತನ್ನ ಒಪ್ಪಂದವನ್ನು ಪಾಲಿಸದ ಕಂಪನಿಯನ್ನು ನ್ಯಾಯಾಲಯವು ತೀವ್ರವಾಗಿ ಟೀಕಿಸಿದ್ದು, ಪತಂಜಲಿ ಕಂಪನಿ ನೀಡಿರುವ ಜಾಹೀರಾತುಗಳು ದೇಶದ ಕಾನೂನನ್ನು ಉಲ್ಲಂಘಿಸುತ್ತಿವೆ. ಈ ಜಾಹೀರಾತುಗಳಿಗಾಗಿ ಕಾನೂನು ಕ್ರಮಗಳನ್ನು ಎದುರಿಸಲು ಸಿದ್ಧರಾಗಿರಿ ಎಂದು ಸುಪ್ರೀಂ ಕೋರ್ಟ್ ಬಾಬಾ ರಾಮ್‌ದೇವ್‌ಗೆ ಎಚ್ಚರಿಕೆ ನೀಡಿದೆ.
ವಿಚಾರಣೆ ವೇಳೆ 'ಇಬ್ಬರೂ (ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ) ಹಾಜರಾಗಿದ್ದಾರೆಯೇ?' ಎಂದು ಪೀಠ ಕೇಳಿತು.ರಾಮ್‌ದೇವ್ ಪರ ವಾದ ಮಂಡಿಸಿದ ವಕೀಲರು, ಇಬ್ಬರೂ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ ಎಂದು ತಿಳಿಸಿದರು. ಮಾತ್ರವಲ್ಲದೇ ನಾವು ಬೇಷರತ್ ಕ್ಷಮೆಯಾಚಿಸುತ್ತಿದ್ದೇವೆ ಎಂದು ತಿಳಿಸಿದರು.
ಆದರೆ ಕ್ಷಮೆಯಾಚಿಸಿದ ಬಗ್ಗೆ , ನ್ಯಾಯಾಲಯವು ಇದನ್ನು "ಬರೀ ಬಾಯಿ ಮಾತಿನ ಕಾಟಾಚಾರದ ಹೇಳಿಕೆ " ಎಂದು ಕರೆದಿದ್ದು, ಪತಂಜಲಿಯು ಜನತೆಯನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ನ್ಯಾಯಾಲಯ ಮಾತ್ರವಲ್ಲಇಡೀ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕಾಗಿದೆ ನೀವು ಎಲ್ಲಾ ಇತಿ ಮಿತಿಗಳನ್ನು ಮೀರಿದ್ದೀರಿ , ಈಗ ನೀವು ನಿಮ್ಮನ್ನು ಕ್ಷಮಿಸಬೇಕು ಎಂದು ಹೇಳುತ್ತೀರಿ" ಎಂದು ನ್ಯಾಯಾಲಯ ತರಾಟೆಗೆತ್ತಿಕೊಂಡಿದೆ. ಬಾಬಾ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ "ಕೊನೆಯ ಅವಕಾಶ" ನೀಡಿದ ಸುಪ್ರೀಂ ಕೋರ್ಟ್, ಒಂದು ವಾರದೊಳಗೆ ಹೊಸ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಹೇಳಿದೆ.
ವಿವಿಧ ಕಾಯಿಲೆಗಳ ಚಿಕಿತ್ಸೆ ಸಂಬಂಧ ಪತಂಜಲಿಯು ತನ್ನ ಉತ್ಪನ್ನಗಳ ಕುರಿತು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುತ್ತಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು. ಆಧುನಿಕ ವೈದ್ಯಕೀಯ ಪದ್ಧತಿಯ ವಿರುದ್ಧ ತಪ್ಪುದಾರಿಗೆಳೆಯುವ ಮಾಹಿತಿ ಮತ್ತು ಜಾಹೀರಾತುಗಳನ್ನು ನಿಲ್ಲಿಸುವಂತೆ ಪತಂಜಲಿಗೆ ಸುಪ್ರೀಂ ಕೋರ್ಟ್ ಹೇಳಿತ್ತು. ಪತಂಜಲಿ ಯಾವುದೇ ಹೇಳಿಕೆಗಳನ್ನು ಅಥವಾ ಆಧಾರರಹಿತ ಹಕ್ಕುಗಳನ್ನು ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಭಾರತೀ ಯ ವೈದ್ಯಕೀಯ ಸಂಘ (ಐಎಂಎ) ಪತಂಜಲಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದೆ.


Click it and Unblock the Notifications