ವಿಶ್ವದ ಅತಿದೊಡ್ಡ ವಾಣಿಜ್ಯ ಕಚೇರಿ ಕಟ್ಟಡ ಎಲ್ಲಿರಬಹುದು ಊಹಿಸಿ... ದುಬೈ, ಅಮೇರಿಕಾ, ಯುಕೆ, ಜರ್ಮನಿ ಇಲ್ಲೇನಾದರೂ ಇರಬಹುದು ಅಂದುಕೊಂಡರೇ ಖಂಡಿತಾ ತಪ್ಪು.!
ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರ ಎಂದು ದಾಖಲೆ ಮಾಡಿರುವ 'ಸೂರತ್ ಡೈಮಂಡ್ ಬೋರ್ಸ್' ಇರೋದು ಭಾರತದ ಗುಜರಾತ್ ನಲ್ಲಿ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಬೃಹತ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದು ಸೂರತ್‌ನ ಖಾಜೋದ್ ಪ್ರದೇಶದಲ್ಲಿ ನಿರ್ಮಿಸಲಾದ 'ಸೂರತ್ ಡೈಮಂಡ್ ಬೋರ್ಸ್' ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಿದೆ.

3,400 ಕೋಟಿ ರೂಪಾಯಿ ವೆಚ್ಚದ ಈ ಕಟ್ಟಡವು ವಿಶ್ವದ ಅತಿ ದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾಗಿ ನಿರ್ಮಿಸಲು 35.54 ಎಕರೆ ಜಮೀನನ್ನು ಬಳಸಿಕೊಳ್ಳಲಾಗಿದೆ. ಇದು ಅಂತರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯವಹಾರಕ್ಕೆ ವಿಶ್ವದ ಅತಿ ದೊಡ್ಡ ಮತ್ತು ಆಧುನಿಕ ಕೇಂದ್ರವಾಗಿದೆ.
ಈ ಕಟ್ಟಡವನ್ನು ವಿಶೇಷವಾಗಿ ವಜ್ರದ ವ್ಯಾಪಾರಕ್ಕಾಗಿ ನಿರ್ಮಿಸಲಾಗಿದೆ. ಇಲ್ಲಿ ಒರಟು ವಜ್ರಗಳನ್ನು ತಂದು ಅವುಗಳನ್ನು ಹೊಳಪು ಮಾಡಿ ಮಾರಾಟ ಮಾಡುವ ಕೆಲಸ ನಡೆಯುತ್ತದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅತ್ಯಾಧುನಿಕ ವಜ್ರ ವ್ಯಾಪಾರ ಕೇಂದ್ರವಾಗಿದೆ. ಇದು ಕಸ್ಟಮ್ ಕ್ಲಿಯರೆನ್ಸ್ ಹೌಸ್, ಜ್ಯುವೆಲ್ಲರಿ ಮಾಲ್, ಇಂಟರ್ ನ್ಯಾಷನಲ್ ಬ್ಯಾಂಕಿಂಗ್ ಮತ್ತು ಸೇಫ್ ವಾಲ್ಟ್ ಗಳನ್ನು ಒಳಗೊಂಡಿದೆ.

ಅಮೇರಿಕಾ ಪ್ರಧಾನ ರಕ್ಷಣಾ ಕಚೇರಿ 'ಪೆಂಟಗನ್' ಹಿಂದಿಕ್ಕಿದ ಸೂರತ್ ಡೈಮಂಡ್ ಬೋರ್ಸ್
ಸೂರತ್ ಡೈಮಂಡ್ ಬೋರ್ಸ್ ಎಂಬ ಹೆಸರಿನ ಈ ಕಟ್ಟಡವು ಅಮೆರಿಕದ ಪೆಂಟಗನ್ ಕಟ್ಟಡಕ್ಕಿಂತಲೂ ದೊಡ್ಡದಾಗಿದೆ. ಇದೊಂದು ಕೇವಲ ಕಟ್ಟಡವಾಗಿ ನಿಂತಿಲ್ಲ. ಇದೊಂದು ವಾಸ್ತುಶಿಲ್ಪದ ವಿಶೇಷತೆಯನ್ನೇ ಎತ್ತಿತೋರಿಸುತ್ತದೆ. ಇದರಲ್ಲಿ ಸುಮಾರು 4,500 ಕ್ಕೂ ಹೆಚ್ಚು ಕಚೇರಿಗಳಿವೆ. ಗಾತ್ರದಲ್ಲಿ ದಾಖಲೆ ಬರೆದಿದ್ದ ಪೆಂಟಗನ್ ಕಟ್ಟಡವನ್ನು ಮೀರಿಸಿ, ಈ ಬೃಹತ್ ಕಟ್ಟಡ ದೇಶದ ಅತಿದೊಡ್ಡ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಎಂಬ ಖ್ಯಾತಿಗೂ ಪಾತ್ರವಾಗಿದೆ. 175 ದೇಶಗಳ 4,200 ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ ಸೂರತ್ ಡೈಮಂಡ್ ಬೋರ್ಸ್ ಜಾಗತಿಕ ವಜ್ರ ವ್ಯಾಪಾರ ಮಾಡೋರಿಗೆ ಅದ್ಭುತ ವೇದಿಕೆಯಾಗಿದೆ.
ವೈಶಿಷ್ಟ್ಯಗಳು:
ಒಂಬತ್ತು ಗೋಪುರಗಳು: SDB ಒಂಬತ್ತು 15-ಅಂತಸ್ತಿನ ಗೋಪುರಗಳನ್ನು ಹೊಂದಿದೆ. ಇದರಲ್ಲಿ 4,500 ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿವೆ. ಇದು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ (ಡ್ರೀಮ್) ಸಿಟಿ ಯೋಜನೆಯ ಭಾಗವಾಗಿದೆ. ಸೂರತ್‌ನಲ್ಲಿ ವಜ್ರ ಉದ್ಯಮವನ್ನು ಹೆಚ್ಚು ವ್ಯವಸ್ಥಿತಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ದೀರ್ಘಕಾಲೀನ ದೃಷ್ಟಿಯನ್ನು ಇದು ತೋರಿಸುತ್ತದೆ.
ಸೂರತ್ ಡೈಮಂಡ್ ಬೋರ್ಸ್, 80,000 ಚದರ ಮೀಟರ್ ವಿಸ್ತಾರವಾಗಿರುವ 1,000 ಕಚೇರಿಗಳನ್ನು ಒಳಗೊಂಡಿರುವ ಇಸ್ರೇಲ್ ಡೈಮಂಡ್ ಎಕ್ಸ್‌ಚೇಂಜ್‌ಗಿಂತ ದೊಡ್ಡದಾಗಿದೆ.
35.54 ಎಕರೆ ಪ್ರದೇಶದಲ್ಲಿ 4,500 ಕಾರುಗಳು ಮತ್ತು 10,000 ಬೈಕ್‌ಗಳಿಗೆ ಸ್ಥಳಾವಕಾಶ ಕಲ್ಪಿಸುವ ಎರಡು ಅಂತಸ್ತಿನ ಭೂಗತ ಪಾರ್ಕಿಂಗ್ ಸ್ಥಳವಿದೆ. ಸುಮಾರು 4,500 ಕಚೇರಿಗಳಲ್ಲಿ 65,000 ಉದ್ಯೋಗಿಗಳಿದ್ದಾರೆ.
ಸೂರತ್ ಡೈಮಂಡ್ ಬೋರ್ಸ್ ವಜ್ರ ಕೈಗಾರಿಕೆಯ ಹೃದಯಭಾಗವಾಗಿದೆ. ಇದು 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರಿಗೆ ಒಂದು-ನಿಲುಗಡೆ ತಾಣವಾಗಿದ್ದು, ಇದರಲ್ಲಿ ಕಟ್ಟರ್, ಪಾಲಿಷರ್ ಮತ್ತು ವ್ಯಾಪಾರಿಗಳು ಸೇರಿದ್ದಾರೆ.
ಸೂರತ್ ಡೈಮಂಡ್ ಬೋರ್ಸ್ 175ಕ್ಕೂ ಹೆಚ್ಚು ದೇಶಗಳಿಂದ ಬಂದ 4,200ಕ್ಕೂ ಹೆಚ್ಚು ವಜ್ರ ವ್ಯಾಪಾರಿಗಳನ್ನು ಒಟ್ಟುಗೂಡಿಸುವ ಜಾಗತಿಕ ವೇದಿಕೆಯಾಗಿದೆ. ಪಾಲಿಶ್ ಮಾಡಿದ ವಜ್ರಗಳ ಖರೀದಿ ಮತ್ತು ಮಾರಾಟಕ್ಕೆ ಇದು ಒಂದು ಪ್ರಮುಖ ಕೇಂದ್ರವಾಗಿದೆ.ಈ ಅತ್ಯಾಧುನಿಕ ಕಟ್ಟಡವು ಆಮದು-ರಫ್ತು ವ್ಯವಹಾರಗಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಅನ್ನು ಹೊಂದಿದೆ.


Click it and Unblock the Notifications