ಸಾರ್ವಜನಿಕ ಆಹಾರ ವಿತರಣೆ ವೇದಿಕೆ ಸ್ವಿಗ್ಗಿ 10 ನಿಮಿಷಗಳಲ್ಲಿ ಆಹಾರವನ್ನು ತಲುಪಿಸಲು ಹೊಸ ವಿತರಣಾ ಸೇವೆ ವೈಶಿಷ್ಟ್ಯ " ಬೋಲ್ಟ್" ಅನ್ನು ಹೊರತಂದಿದೆ. ತನ್ನ ಈ ಹೊಸ ಫೀಚರ್ ಬೋಲ್ಟ್ ಅಡಿಯಲ್ಲಿ, ಸ್ವಿಗ್ಗಿ ಆಯ್ದ ರೆಸ್ಟೋರೆಂಟ್‌ಗಳಿಂದ ಮತ್ತು ಸೀಮಿತ ಪ್ರದೇಶದಲ್ಲಿ 10 ನಿಮಿಷಗಳಲ್ಲಿ ಆಹಾರವನ್ನು ವಿತರಣೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ .
ಬೋಲ್ಟ್ ಫೀಚರ್ ಪ್ರಸ್ತುತ ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಮತ್ತು ಪುಣೆಯಾದ್ಯಂತ ಕಾರ್ಯನಿರ್ವಹಿಸಲಿದ್ದು, ಈ ಆಯ್ಕೆಯು 2 ಕಿಮೀ ವ್ಯಾಪ್ತಿಯೊಳಗೆ ಮಾತ್ರ ನಿರ್ವಹಿಸಲಿದೆ.

" ಸ್ವಿಗ್ಗಿ ಸಂಸ್ಥೆಯು ಹತ್ತು ವರ್ಷಗಳ ಹಿಂದೆ ಒಟ್ಟಾರೆ ಕಾಯುವಿಕೆಯ ಅವಧಿಯನ್ನು 30 ನಿಮಿಷಗಳಿಗೆ ಕಡಿತಗೊಳಿಸುವ ಮೂಲಕ ಆಹಾರ ವಿತರಣೆಯಲ್ಲಿ ಕ್ರಾಂತಿಯನ್ನು ಸೃಷ್ಟಿಸಿತ್ತು. ಬೋಲ್ಟ್ ಮೂಲಕ ಗ್ರಾಹಕರಿಗೆ ಸಾಟಿಯಿಲ್ಲದ ಅನುಕೂಲತೆಯನ್ನು ಒದಗಿಸುವುದು ನಮ್ಮ ಮಿಷನ್‌ನ ಪ್ರಮುಖ ಹೆಜ್ಜೆಯಾಗಿದೆ. ಇದೇ ರೀತಿ ನಮ್ಮ ಬೋಲ್ಟ್ ಫೀಚರ್ ನಡಿ, ಕಾಫಿ, ಬರ್ಗರ್‌ಗಳು, ಐಸ್‌ಕ್ರೀಂ ಮತ್ತು ಬಿರಿಯಾನಿಯಂತಹ ಪದೇ ಪದೇ ಆರ್ಡರ್ ಮಾಡಲಾದ ಐಟಂಗಳಿಗಾಗಿ ನಾವು ಕಾಯುವಿಕೆ ಅವಧಿಯನ್ನು ಮತ್ತಷ್ಟು ಕಡಿಮೆ ಮಾಡುತ್ತಿದ್ದೇವೆ. ಜೊತೆಗೆ ವಿಶ್ವಾಸಾರ್ಹ ರೆಸ್ಟೋರೆಂಟ್‌ಗಳೊಂದಿಗೆ ಪಾಲುದಾರಿಕೆ ಮೂಲಕ ಕೇವಲ 10 ನಿಮಿಷಗಳಲ್ಲಿ ಉತ್ತಮ ಆಹಾರವನ್ನು ನಮ್ಮ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ" ಎಂದು ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ದೆಹಲಿ ಮತ್ತು ಪುಣೆಯಂತಹ ನಮ್ಮ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಈ ವೈಶಿಷ್ಟ್ಯ ಪರಿಚಯಿಸುತ್ತಿದ್ದೇವೆ. ಬೆಂಗಳೂರಿನಲ್ಲಿ , ವೆಂಡೀಸ್ ಬರ್ಗರ್ಸ್, ಮೇಘನಾ ಫುಡ್ಸ್, ಕ್ಯೂರ್ ಫುಡ್ಸ್ ಷರೀಫ್ ಭಾಯ್ ಮತ್ತು ಗ್ಲೆನ್ಸ್ ಬೇಕ್‌ಹೌಸ್‌ನಂತಹ ರೆಸ್ಟೋರೆಂಟ್‌ಗಳು ಬೋಲ್ಟ್ ಸೇವೆಯಲ್ಲಿ ಗ್ರಾಹಕರಿಗೆ ಕಾಣಸಿಗುತ್ತವೆ ಎಂದು ಕಪೂರ್ ವಿವರಿಸಿದ್ದಾರೆ.
ಬೋಲ್ಟ್ ನ ಮತ್ತೊಂದು ವಿಶೇಷತೆ ಎಂದರೆ ಗ್ರಾಹಕರ ಅಭಿರುಚಿಗೆ ತಕ್ಕಂತೆ, ಪ್ರಸಿದ್ಧ ಬ್ರಾಂಡ್ ಗಳ ವಿವಿಧ ರೀತಿಯ ಆಹಾರವನ್ನು ಆಯ್ಕೆ ಮಾಡಬಹುದಾಗಿದೆ. KFC, ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಬಸ್ಕಿನ್ ರಾಬಿನ್ಸ್ ಶ್ತಾರ್ ಬಕ್ಸ್, Chaayos,EatFit ನಂತ ಪ್ರಸಿದ್ಧ ಬ್ರಾಂಡ್‌ಗಳ ಮಿಶ್ರಣವನ್ನು ಆಯ್ಕೆ ಮಾಡಬಹುದು. ಜೊತೆಗೆ ಸ್ಥಳೀಯ ಮೆಚ್ಚಿನ ಬ್ರ್ಯಾಂಡ್ ಗಳಾದ ಕರಾಚಿ ಬೇಕರಿ ಮತ್ತು ಹೈದರಾಬಾದ್‌ನ G ಪುಲ್ಲಾ ರೆಡ್ಡಿ ಸ್ವೀಟ್ಸ್, ಮುಂಬೈನ MM ಮಿಠೈವಾಲಾ, ಮತ್ತು ಬೆಂಗಳೂರಿನ ಆನಂದ್ ಸ್ವೀಟ್ಸ್, ದೆಹಲಿಯ ಸೇಥಿ ಐಸ್‌ಕ್ರೀಮ್ ಮತ್ತು ಪುಣೆಯ ಇರಾನಿ ಕೆಫೆ ಸೇರಿದಂತೆ ಹಲವು ಕಡೆಗಳಿಂದ ವಿವಿಧ ರೀತಿಯ ಆಹಾರವನ್ನು ಒಂದೇ ಆಯ್ಕೆಯಲ್ಲಿ ಪಡೆಯಬಹುದು "ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಆಹಾರ ವಿತರಣಾ ವೇದಿಕೆ ಸ್ವಿಗ್ಗಿಯ ಮುಖ್ಯ ಪ್ರತಿಸ್ಪರ್ಧಿಯಾಗಿರುವ, ಝೊಮ್ಯಾಟೋ, 2022 ರಲ್ಲಿ ಗುರ್ಗಾಂವ್‌ನಲ್ಲಿ 10-ನಿಮಿಷಗಳ ಆಹಾರದ ವಿತರಣೆಯನ್ನು ಪ್ರಯೋಗಿಕವಾಗಿ ಪರಿಚಯಿಸಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಬಳಿಕ ಈ ಪ್ರಯೋಗವನ್ನು ಸ್ಥಗಿತಗೊಳಿಸಿತು. ಇದ ಬದಲಾಗಿ, ಕಂಪನಿಯು ಝೊಮ್ಯಾಟೋ ಎವ್ವೆರಿಡೇ(Zomato Everyday) ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿತು. Zomato ಎವ್ವೆರಿಡೇ ಸೇವೆಗಳ ಮೂಲಕ ಕೇಂದ್ರೀಕೃತ ಅಡುಗೆಮನೆಗಳಿಂದ (centralised kitchens) ಮನೆ ಅಡುಗೆಯ ಮೂಲಕ ತಯಾರಿಸಿದ ಊಟವನ್ನು ಕಡಿಮೆ ಸಮಯದಲ್ಲಿ ವಿತರಿಸಲಾಗುತ್ತದೆ.
ಇದಲ್ಲದೇ Nexus ವೆಂಚರ್ ಪಾರ್ಟ್‌ನರ್ಸ್ ಬೆಂಬಲಿತ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ "ಝೆಪ್ಟೋ" ತನ್ನ ಡಾರ್ಕ್ ಸ್ಟೋರ್‌ಗಳು ಅಥವಾ ಮೈಕ್ರೋ ವೇರ್‌ಹೌಸ್‌ಗಳಿಂದ ಕಾಫಿ, ಸ್ಯಾಂಡ್‌ವಿಚ್‌ಗಳು ಮುಂತಾದವುಗಳನ್ನು ತಲುಪಿಸುವ Zepto Cafe ಎಂಬ 10-ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ಹೊಂದಿದೆ.
ಶೀಘ್ರದಲ್ಲೇ ತನ್ನ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಆರಂಭಿಸಲು ಸಿದ್ಧವಾಗಿರುವ ಬೆಂಗಳೂರು ಮೂಲದ ಸ್ವಿಗ್ಗಿ, ಜೂನ್ 2024 ರ ಅಂತ್ಯದ ತ್ರೈಮಾಸಿಕದಲ್ಲಿ ರೂ 6,808 ಕೋಟಿಗಳ ಒಟ್ಟು ಆರ್ಡರ್ ಮೌಲ್ಯವನ್ನು (ಜಿಒವಿ) ವರದಿ ಮಾಡಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ರೂ 5,959 ಕೋಟಿ ಜಿಒವಿ ಆಗಿತ್ತು. ಕಂಪನಿಯು ಏಪ್ರಿಲ್-ಜೂನ್ ಅವಧಿಯಲ್ಲಿ 14.03 ಮಿಲಿಯನ್ ಮಾಸಿಕ ವಹಿವಾಟು ಗ್ರಾಹಕರನ್ನು ಹೊಂದಿತ್ತು.


Click it and Unblock the Notifications