ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಯೋಜನೆ ಮಾಡುವ 2026ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅತ್ತ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಉಂಟಾಗಿರುವ ಘರ್ಷಣೆ ಭಾರೀ ಸಂಚಲನ ಸೃಷ್ಟಿಸಿತ್ತು. ಅಲ್ಲದೇ 2026ರ ಐಸಿಸಿ ಮೆನ್ಸ್ ಟಿ20 ವರ್ಲ್ಡ್ ಕಪ್ ಅನ್ನು (T20 World Cup 2026) ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಿದೆ. ಫೆಬ್ರವರಿ 7 ರಿಂದ ಆರಂಬವಾಗುವ ಐಸಿಸಿ ಟಿ20 ವಿಶ್ವಕಪ್, ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡುವ ಮುನ್ನವೇ ದೊಡ್ಡ ಗೊಂದಲ ಉಂಟಾಗಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆಯ ಬಗ್ಗೆ ಬಾಂಗ್ಲಾದೇಶ (Bangladesh( ಕ್ರಿಕೆಟ್ ಮಂಡಳಿ (BCB) ಕಳವಳ ವ್ಯಕ್ತಪಡಿಸಿದೆ.

ಆ ಹಿನ್ನೆಲೆ ಇದೀಗ ಬಾಂಗ್ಲಾದೇಶವು 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಿದ್ರೆ ಬಾಂಗ್ಲಾದೇಶ ಪಾಲ್ಗೊಳ್ಳದಿದ್ದರೆ ಯಾವ ತಂಡ ಬದಲಿ ಆಡಬಹುದು? ಈ ಗೊಂದಲಕ್ಕೆ ಉತ್ತರ ಇಲ್ಲಿದೆ.
ಬಾಂಗ್ಲಾದೇಶ ಹೇಳಿದ್ದೇನು?
ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಆದರೆ ಪಂದ್ಯಾವಳಿ ಆರಂಭವಾಗಲು ಒಂದು ತಿಂಗಳು ಮೊದಲೇ ಬಾಂಗ್ಲಾದೇಶ ವಿಶ್ವಕಪ್ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಅದರಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬರುವುದಿಲ್ಲ, ಆದ್ದರಿಂದ ತನ್ನೆಲ್ಲಾ ಪಂದ್ಯಾಟಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕೆಂದು ಕೇಳಿಕೊಂಡಿದೆ. ಆದರೆ ಈ ಬೇಡಿಕೆಯನ್ನು ಐಸಿಸಿ ಮತ್ತು ಬಿಸಿಸಿಐ ನಿರಾಕರಿಸಿದೆ.
ಜನವರಿ 17ರಂದು ಢಾಕಾದಲ್ಲಿ ನಡೆದ ಐಸಿಸಿ ಸಭೆಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (BCB) ಜನವರಿ 21 ರೊಳಗೆ ಸ್ಪಷ್ಟನೆ ನೀಡುವಂತೆ ಗಡುವನ್ನೂ ನೀಡಿದೆ. ಇದು ಒಂದೇ ವಾರದಲ್ಲಿ ಐಸಿಸಿ ಮತ್ತು ಬಿಸಿಬಿ ನಡುವೆ ನಡೆದ ಎರಡನೇ ಚರ್ಚೆಯಾಗಿತ್ತು.
ಬಿಸಿಬಿ ಪ್ರಕಾರ, ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಆಡಲು ಸಿದ್ಧವಿದ್ದರೂ, ಆಟಗಾರರ ಸುರಕ್ಷತೆಯ ಕಳವಳದಿಂದಾಗಿ ಭಾರತದ ಹೊರಗೆ ಪಂದ್ಯಗಳನ್ನು ಆಡಲು ಆದ್ಯತೆ ನೀಡಿದೆ. ಬಿಸಿಸಿಐ ಇತ್ತೀಚೆಗಷ್ಟೇ ತನ್ನ ನಿರ್ದೇಶನದಂತೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ 2026ರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಗಡೆ ಇಟ್ಟಿತ್ತು. ಈ ನಿರ್ಧಾರದ ಬೆನ್ನಲ್ಲೇ ಭಾರತದ ವಿರುದ್ಧ ಬಾಂಗ್ಲಾದೇಶ ವಿರೋಧ ವ್ಯಕ್ತಪಡಿಸುತ್ತಿದೆ.
ಐಸಿಸಿಯ ದೃಢ ನಿರ್ಧಾರ!
ಬಾಂಗ್ಲಾದೇಶ ಭಾರತಕ್ಕೆ ಬರಲು ನಿರಾಕರಿಸಿದರೂ, ಐಸಿಸಿ ಮೂಲ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ದೃಢವಾಗಿದೆ. ಬಾಂಗ್ಲಾದೇಶ 'ಸಿ' ಗುಂಪಿನಲ್ಲಿದ್ದು, ಫೆಬ್ರವರಿ 7ರಿಂದ ಈಡನ್ ಗಾರ್ಡನ್ಸ್‌ನಲ್ಲಿ ಶುರುವಾಗುವ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಲು ನಿಗದಿಪಡಿಸಲಾಗಿದೆ. ಭಾರತದಲ್ಲಿ ಬಾಂಗ್ಲಾದೇಶ ತಂಡಕ್ಕೆ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಐಸಿಸಿ, ಬಿಸಿಬಿಗೆ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶದ ಬದಲು ಈ ದೇಶಕ್ಕೆ ಅವಕಾಶ
ಬಾಂಗ್ಲಾದೇಶ ಭಾರತಕ್ಕೆ, ತಂಡ ಕಳುಹಿಸದಿರಲು ನಿರ್ಧರಿಸಿದರೆ, ಐಸಿಸಿ ಪರ್ಯಾಯ ತಂಡವನ್ನು ಹೆಸರಿಸಬಹುದು. ಪ್ರಸ್ತುತ ಶ್ರೇಯಾಂಕಗಳ ಆಧಾರದ ಮೇಲೆ, ಸ್ಕಾಟ್ಲೆಂಡ್ ತಂಡವನ್ನು ಪರಿಗಣಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಬಾಂಗ್ಲಾದೇಶ ತಂಡ ಐಸಿಸಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದರೆ, ಆ ತಂಡದ ಬದಲಿಗೆ ಸ್ಕಾಟ್ಲೆಂಡ್ ಆಡುವ ಅವಕಾಶ ಪಡೆಯಬಹುದು ಎನ್ನಲಾಗಿದೆ.
ಏಕೆಂದರೆ ಸ್ಕಾಟ್ಲೆಂಡ್ ಈ ಹಿಂದೆಯೂ ಐಸಿಸಿ ಪಂದ್ಯಗಳಿಗೆ ಅರ್ಹತೆ ಪಡೆದಿತ್ತು. ಈ ಹಿಂದೊಮ್ಮೆ 2009 ರಲ್ಲಿ ಟಿ20 ವಿಶ್ವಕಪ್‌ನಿಂದ ಜಿಂಬಾಬ್ವೆ ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ಸ್ಕಾಟ್‌ಲೆಂಡ್‌ಗೆ ಟಿ20 ವಿಶ್ವಕಪ್ ಆಡುವ ಅವಕಾಶ ಸಿಕ್ಕಿತ್ತು. ಅದೇ ರೀತಿ ಇದೀಗ ಮತ್ತೆ ಸ್ಕಾಟ್‌ಲೆಂಡ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.


Click it and Unblock the Notifications