T20 ವಿಶ್ವಕಪ್ಗೆ ಹೊಸ ವಿವಾದದವೊಂದು ಮೆತ್ತಿಕೊಂಡಿದೆ. ಈ ವಿವಾದ ಕ್ರೀಡಾ ವಲಯದಲ್ಲಿ ದೊಡ್ಡ ಚರ್ಚೆಯನ್ನು ಸೃಷ್ಟಿಸಿದೆ. ಇದಕ್ಕೆ ಕಾರಣ ಏನು ಗೊತ್ತಾ? ಫೆಬ್ರವರಿ 15ರಂದು ಕೊಲಂಬೋದಲ್ಲಿ ನಡೆಯಬೇಕಿರೋ ಭಾರತದ ಪಂದ್ಯವನ್ನು ಬಹಿಷ್ಕಾರ ಮಾಡೋದಾಗಿ ಪಾಕಿಸ್ತಾನ ಘೋಷಿಸಿದೆ. ಈ ಕಾರಣದಿಂದ ಕ್ರಿಕೆಟ್ ವಲಯದಲ್ಲಿ ದೊಡ್ಡ ಬಿರುಗಾಳಿ ಎದ್ದಂತಾಗಿದೆ. ಅಲ್ಲದೇ ಸಾಕಷ್ಟು ಕುತೂಹಲ ಮತ್ತಯ ಒತ್ತಡ ಕೂಡ ಉಂಟುಮಾಡಿದೆ.

ಇನ್ನು ಈ ವಿವಾದಕ್ಕೆ ಪರಿಹಾರ ಹುಡುಕುವ ಉದ್ದೇಶದಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರು ಲಾಹೋರ್‌ಗೆ ತೆರಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಇದರ ಜೊತೆಗೆ, ಐಸಿಸಿ ಅಧಿಕಾರಿಗಳಿಬ್ಬರೂ ಕೂಡ ಲಾಹೋರ್‌ಗೆ ತೆರಳಿ ಬಿಸಿಬಿ ಮತ್ತು ಪಿಸಿಬಿ ಎರಡನ್ನೂ ಒಳಗೊಂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ವಿವಾದದ ಆರಂಭ ಬಾಂಗ್ಲಾದೇಶದಿಂದಲೇ ಆಯಿತು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಬೆಂಬಲದೊಂದಿಗೆ, ಬಿಸಿಬಿ ತನ್ನ ರಾಷ್ಟ್ರೀಯ ತಂಡವನ್ನು ಗುಂಪು ಹಂತದ ಪಂದ್ಯಗಳಿಗಾಗಿ ಭಾರತಕ್ಕೆ ಕಳುಹಿಸಲು ನಿರಾಕರಿಸಿತು. ಆಟಗಾರರ ಭದ್ರತೆಯನ್ನು ಕಾರಣವನ್ನಾಗಿ ಮುಂದಿಟ್ಟು, ತನ್ನ ಎಲ್ಲಾ ಪಂದ್ಯಗಳನ್ನು ಭಾರತದಿಂದ ಹೊರಗೆ, ಶ್ರೀಲಂಕಾದಲ್ಲಿ ನಡೆಸುವಂತೆ ಐಸಿಸಿಗೆ ಮನವಿ ಮಾಡಿತು. ಆದರೆ ಐಸಿಸಿ ಇದಕ್ಕೆ ಒಪ್ಪದೇ ಇದ್ದ ಕಾರಣ, ಬಾಂಗ್ಲಾದೇಶ ಪಂದ್ಯಾವಳಿಯಿಂದಲೇ ಹೊರಬರುವ ನಿರ್ಧಾರ ತೆಗೆದುಕೊಂಡಿತು.
ಬಾಂಗ್ಲಾದೇಶದ ಈ ನಿರ್ಧಾರಕ್ಕೆ ಬೆಂಬಲ ಸೂಚಿಸುವಂತೆ ಪಾಕಿಸ್ತಾನ ಕೂಡ ಭಾರತ ವಿರುದ್ಧದ ಪಂದ್ಯವನ್ನು ಆಡದೇ ಬಹಿಷ್ಕರಿಸುವುದಾಗಿ ಘೋಷಿಸಿತು. ಈ ನಿರ್ಧಾರದಿಂದ ಟಿ20 ವಿಶ್ವಕಪ್‌ನ ವೇಳಾಪಟ್ಟಿ ಮತ್ತು ಆಯೋಜನೆ ಕುರಿತು ಗೊಂದಲ ಉಂಟಾಗಿದೆ.
ಲಾಹೋರ್‌ನಲ್ಲಿ ನಡೆದ ಸಭೆಯಲ್ಲಿ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರು, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಈ ವಿಷಯದ ಕುರಿತು ನಡೆಯಲಿರುವ ವರ್ಚುಯಲ್ ಸಭೆಯಲ್ಲಿಯೂ ಅವರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಈ ನಿರ್ಧಾರ ಸರ್ಕಾರದ ಸೂಚನೆಯಂತೆ ಬಂದಿದೆ ಎನ್ನಲಾಗಿದ್ದು, ಈ ಬಗ್ಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಿಸಿಬಿಗೆ ಇಮೇಲ್ ಕಳುಹಿಸಿ, ಪಂದ್ಯವನ್ನು ಆಡಬೇಕೆಂದು ಹಾಗೂ ಅದು ತಮ್ಮ ದೇಶದ ಆರ್ಥಿಕತೆಗೆ ಸಹಾಯಕವಾಗುತ್ತದೆ ಎಂದು ಮನವಿ ಮಾಡಿದೆ.
ಈ ನಡುವೆ, ಭಾರತ ವಿರುದ್ಧ ಪಂದ್ಯ ಆಡಲು ನಿರಾಕರಿಸಿರುವುದನ್ನು ಸಮರ್ಥಿಸಲು ಪಿಸಿಬಿ 'ಫೋರ್ಸ್ ಮಜ್ಯೂರ್' ನಿಯಮವನ್ನು ಬಳಸಲು ಯತ್ನಿಸುತ್ತಿದೆ. ಈ ಸಂಬಂಧ ಐಸಿಸಿ ಪಾಕಿಸ್ತಾನದಿಂದ ವಿವರವನ್ನು ಕೇಳಿದೆ. ಪಿಸಿಬಿ ಈಗಾಗಲೇ ಈ ವಿಷಯವನ್ನು ಚರ್ಚೆಗೆಂದು ಐಸಿಸಿಯನ್ನು ಸಂಪರ್ಕಿಸಿರುವುದರಿಂದ, ಅಂತಿಮವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುಕಾಲದ ಪ್ರತಿಸ್ಪರ್ಧಿ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಐಸಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕು ತಾಳುತ್ತದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.


Click it and Unblock the Notifications