ಕಳೆದ ವರ್ಷ ಸರ್ಕಾರದಿಂದ ಟಾಟಾ ಗ್ರೂಪ್ ಖರೀದಿ ಮಾಡಿದ ಏರ್‌ಇಂಡಿಯಾದ ಪುನರುಜ್ಜೀವನಕ್ಕಾಗಿ 15,000 ಕೋಟಿ ರೂಪಾಯಿ ಸಾಲವನ್ನು ಪಡೆಯಲು ಟಾಟಾ ಗ್ರೂಪ್ ಬ್ಯಾಂಕ್‌ಗಳೊಂದಿಗೆ ಚರ್ಚೆಯನ್ನು ನಡೆಸುತ್ತಿದೆ.
ವಿಮಾನ ಬಾಡಿಗೆಗಳನ್ನು ಪಾವತಿಸಲು, ಫ್ಲೀಟ್ ಅನ್ನು ನವೀಕರಿಸಲು, ದಿನನಿತ್ಯದ ಕಾರ್ಯಾಚರಣೆಗಳು ಮತ್ತು ನಷ್ಟಗಳನ್ನು ಸರಿದೂಗಿಸಲು ಮತ್ತು ಐಟಿ ಕಾರ್ಯಾಚರಣೆಗಳನ್ನು ಕೂಲಂಕಷವಾಗಿ ಮಾಡಲು ಸಾಲವನ್ನು ಪಡೆದ ಹಣವನ್ನು ಬಳಕೆ ಮಾಡಲು ಟಾಟಾ ಗ್ರೂಪ್ ಚಿಂತನೆ ನಡೆಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಸಾಲವನ್ನು ಸುಮಾರು ಶೇಕಡ 7.5 ಮತ್ತು 8ರ ನಡುವಿನ ಬಡ್ಡಿದರದಲ್ಲಿ ಪಡೆಯಲು ಸಂಸ್ಥೆ ಮುಂದಾಗಿದೆ. ಹಾಗೆಯೇ ಸಾಲವನ್ನು ಮೂರು ವರ್ಷಗಳ ಮರುಪಾವತಿ ಅವಧಿಯ ಮೂಲಕ ಪಡೆಯಲು ಸಂಸ್ಥೆ ನಿರ್ಧಾರ ಮಾಡಿದೆ. ಈ ಬಗ್ಗೆ ಬ್ಯಾಂಕ್‌ನೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ವರ್ಷ ಏರ್‌ಇಂಡಿಯಾ ಖರೀದಿ
ಟಾಟಾ ಸನ್ಸ್ ತನ್ನ ಅಂಗಸಂಸ್ಥೆ ಟ್ಯಾಲೇಸ್ ಮೂಲಕ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಖರೀದಿ ಮಾಡುವ ಬಿಡ್ ಅನ್ನು ಗೆದ್ದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ 23,000 ಕೋಟಿ ರೂಪಾಯಿಗಳ ಸಾಲವನ್ನು ಇದಕ್ಕಾಗಿ ಪಡೆದುಕೊಂಡಿದೆ. ಹಾಗೆಯೇ ಸುಮಾರು ಶೇಕಡ 4.25 ಬಡ್ಡಿದರಲ್ಲಿ ಒಂದು ವರ್ಷದ ಅವಧಿಗೆ ಸಾಲವನ್ನು ಪಡೆದುಕೊಂಡಿದೆ. ಸಾಲದ ಅವಧಿ ಜನವರಿ ಅಂತ್ಯದಲ್ಲಿ ನವೀಕರಿಸಬೇಕಾಗಿದೆ.
ಇನ್ನು ಬಡ್ಡಿದರಗಳು ಅಧಿಕವಾಗುತ್ತಿದೆ ಹಾಗೂ ದ್ರವ್ಯತೆ ಕೊರತೆಯು ಇದೆ, ಇದರಿಂದಾಗಿ ಸಾಲವು ಇನ್ನಷ್ಟು ದುಬಾರಿಯಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಯನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಏರ್‌ಇಂಡಿಯಾಕ್ಕೆ ಆದ ನಷ್ಟ
ಮಾರ್ಚ್ 2021 ರ ಅಂತ್ಯದ ವೇಳೆಗೆ ಏರ್ ಇಂಡಿಯಾದಿಂದ ಉಂಟಾದ ಒಟ್ಟು ನಷ್ಟವು 83,916 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2022ರಲ್ಲಿ ಹೆಚ್ಚುವರಿ 9,556.5 ಶತಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ.
ಮುಂದಿನ ಐದು ವರ್ಷಗಳಲ್ಲಿ 113 ವಿಮಾನಗಳ ಪ್ರಸ್ತುತ ಫ್ಲೀಟ್ ಅನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಏರ್‌ಲೈನ್ ಹೊಂದಿದೆ. ಸೆಪ್ಟೆಂಬರ್‌ನಲ್ಲಿ, ಐದು ಬೋಯಿಂಗ್ ಮತ್ತು 25 ಏರ್‌ಬಸ್ ವಿಮಾನಗಳನ್ನು ಮುಂದಿನ ಕೆಲವು ವರ್ಷಗಳವರೆಗೆ ಗುತ್ತಿಗೆ ನೀಡಲು ಒಪ್ಪಿಕೊಂಡಿದೆ. ಟಾಟಾ ಗ್ರೂಪ್ ಕೂಡ ಐಟಿ ಕ್ಷೇತ್ರಕ್ಕೂ ಹೂಡಿಕೆ ಮಾಡುತ್ತಿದೆ.


Click it and Unblock the Notifications