ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಂದು ಐಟಿ ಗರಿ ಸೇರಿಕೊಳ್ಳಲಿದೆ. ಒಂದು ಐಟಿ ಹೂಡಿಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಲಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ, ಟಾಟಾ ರಿಯಾಲ್ಟಿ ಮತ್ತು ಮೂಲಸೌಕರ್ಯ ಲಿಮಿಟೆಡ್ (TRIL) ಸಂಸ್ಥೆಯು, ಬೆಂಗಳೂರು ನಗರದ ವೈಟ್‌ಫೀಲ್ಡ್‌ನ ದೊಡ್ಡನೆಕುಂಡಿಯಲ್ಲಿ ₹3,273 ಕೋಟಿ ವೆಚ್ಚದ ಐಟಿ ಉದ್ಯಾನವನವನ್ನು ಸ್ಥಾಪಿಸಲು ಮುಂದಾಗಿದೆ. ಈ ಹೊಸ ಐಟಿ ಉದ್ಯಾನವನದಲ್ಲಿ ಸಾವಿರಾರು ಉದ್ಯೋಗವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ.

5,500ಕ್ಕೂ ಹೆಚ್ಚು ಉದ್ಯೋಗಾವಕಾಶ:
ಟಾಟಾ ರಿಯಾಲ್ಟಿಯಡಿ ನಿರ್ಮಾಣವಾಗುತ್ತಿರುವ ಈ ಯೋಜನೆಯಡಿ, ಸುಮಾರು 5,500 ನೇರ ಉದ್ಯೋಗಗಳ ಸೃಷ್ಟಿಗೆ ದಾರಿ ಮಾಡಿಕೊಡಬಹುದಾಗಿದೆ. ಈ ಮೂಲಕ ಸ್ಥಳೀಯ ಯುವಜನತೆಗೆ, ಉದ್ಯೋಗಾಕಾಂಕ್ಷಿಗಳಿಗೆ ನೆರವು ಒದಗಿಸಿದಂತಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಈ ವರ್ಷದ ಏಪ್ರಿಲ್ 17 ರಂದು ಅಧಿಕೃತ ಅನುಮೋದನೆ ನೀಡಿದೆ. ಅಲ್ಲದೇ ಇದಕ್ಕೆ ಅನೇಕ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಷರತ್ತುಗಳನ್ನು ಕೂಡ ವಿಧಿಸಿದೆ.
25.5 ಎಕರೆ ಜಾಗದಲ್ಲಿ 'ಇಂಟೆಲಿಯನ್ ಪಾರ್ಕ್':
ವೈಟ್‌ಫೀಲ್ಡ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಯೋಜನೆ, ಟಾಟಾ ಇಂಟೆಲಿಯನ್ ಪಾರ್ಕ್ ಎಂಬ ಹೆಸರಿನಲ್ಲಿ ಸ್ಥಾಪನೆಯಾಗಲಿದೆ. ಅಂದರೆ ಸುಮಾರು 25.5 ಎಕರೆ ಭೂಮಿಯಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ. ಇನ್ನು ಈ ಭೂಮಿಯನ್ನು ಟಾಟಾ ರಿಯಾಲ್ಟಿಯು 2023ರ ಆಗಸ್ಟ್‌ನಲ್ಲಿ ಗ್ರಾಫೈಟ್ ಇಂಡಿಯಾ ಸಂಸ್ಥೆಯಿಂದ ₹986 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಸ್ಥಳದಲ್ಲಿ ಐಟಿ ಮತ್ತು ಐಟಿಇಎಸ್ ಸೇವೆಗಳಿಗೆ ಅಗತ್ಯವಿರುವ ಆಧುನಿಕ ಮೂಲಸೌಕರ್ಯಗಳೊಂದಿಗೆ, ರಿಟೇಲ್ ಔಟ್ಲೆಟ್‌ಗಳು ಮತ್ತು ಫುಡ್‌ಕೋರ್ಟ್‌ಗಳು ಕೂಡ ನಿರ್ಮಾಣ ಮಾಡಲಾಗುತ್ತದೆ.
ಪರಿಸರ ಸ್ನೇಹಿ ಅಭಿಪ್ರಾಯಗಳೊಂದಿಗೆ ಅಭಿವೃದ್ಧಿ:
ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಈ ಉದ್ಯಾನವನ ಯೋಜನೆಯು ಶೂನ್ಯ-ವಿಸರ್ಜನೆ ತಂತ್ರಜ್ಞಾನ, ಮಳೆನೀರು ಸಂಗ್ರಹಣೆ, ತ್ಯಾಜ್ಯ ನೀರಿನ ಮರುಬಳಕೆ ಸೇರಿದಂತೆ ಪರಿಸರಾಭಿಮಾನಿ ವಿಧಾನಗಳನ್ನು ಅನುಸರಿಸಲಿದೆ ಎಂಬುದಾಗಿದೆ. ಇದಿಷ್ಟೇ ಅಲ್ಲ, ಇದರ ಜೊತೆಗೆ ಸ್ಥಳೀಯ ಜನತೆಗೆ ಉದ್ಯೋಗ ಹಾಗೂ ತರಬೇತಿ ನೀಡುವುದು, ಸ್ಥಳೀಯ ವ್ಯಾಪಾರಿಗಳಿಗೆ ಅವಕಾಶ ಒದಗಿಸುವುದು ಮತ್ತು ಸಿಎಸ್‌ಆರ್ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವುದು ಯೋಜನೆಯ ಅವಿಭಾಜ್ಯ ಅಂಗವಾಗಿದೆ.
ಭೂ ವಿಂಗಡನೆ:
ವೈಟ್‌ಫೀಲ್ಡ್‌ನಲ್ಲಿ ಈ ಉದ್ಯಾನವನ ಸ್ಥಾಪನೆಗಾಗಿ ಬಳಸಲಾಗುವ ಜಾಗವನ್ನು, ಟಾಟಾ ರಿಯಾಲ್ಟಿ ಮತ್ತು ಮೂಲಸೌಕರ್ಯ ಲಿಮಿಟೆಡ್ (TRIL) ತನ್ನ ವಿವಿಧ ಉಪಘಟಕಗಳ ನಡುವೆ ಭಾಗಿಯಾಗಿ ಹಂಚಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ TRIL ಬೆಂಗಳೂರು ರಿಯಲ್ ಎಸ್ಟೇಟ್ ಸಿಕ್ಸ್ ಎಂಬ ಘಟಕಕ್ಕೆ 21.3 ಎಕರೆ ಭೂಮಿ ನಿಯೋಜಿಸಲಾಗಿದೆ. ಇದೇ ರೀತಿ, ಇನ್ನೊಂದು ಘಟಕವಾದ TRIL ಬೆಂಗಳೂರು ರಿಯಲ್ ಎಸ್ಟೇಟ್ ಫೈವ್ ಗೆ 4 ಎಕರೆ ಭೂಮಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ, 858 ಚದರ ಮೀಟರ್ ಜಮೀನನ್ನು ಕೂಡ ಪ್ರಸ್ತುತ ಯೋಜನೆಗೆ ಸೇರಿಸಲಾಗಿದೆ. ಈ ಭಾಗವನ್ನು ಮೌಲ್ಯ ಆಧಾರಿತ ಮಾರಾಟ ಪತ್ರದ ಅನುಬಂಧದ ಮೂಲಕ ಯೋಜನೆಯೊಂದಿಗೇ ಒಕ್ಕೂಟಗೊಳಿಸಲಾಗಿದೆ.
ಸರ್ಕಾರದಿಂದಲೂ ಅನುಮತಿ:
ಅಂದಹಾಗೆ ಈ ಯೋಜನೆಗೆ ಸರ್ಕಾರ ಕೂಡ ಅನುಮೋದನೆ ನೀಡಿದೆ. ಎಲ್ಲಾ ನಿರ್ವಹಣಾತ್ಮಕ ಮತ್ತು ಶಾಶ್ವತ ಅನುಮತಿಗಳನ್ನು ಇ-ಉದ್ಯಮಿ ಪೋರ್ಟಲ್ ಮೂಲಕ ಪಡೆಯುವಂತೆ ನಿರ್ದೇಶನ ನೀಡಿದ್ದು, ಉದ್ಯೋಗ ಮಿತ್ರ ಯೋಜನೆಯ ಮಾರ್ಗಸೂಚಿ ಅನುಸಾರ ಯೋಜನೆಯು ನಡೆಯಬೇಕು ಹಾಗೂ TRIL ಕಂಪನಿಯು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ವರದಿ ಸಲ್ಲಿಸಬೇಕು ಎನ್ನಲಾಗಿದೆ.
ಅಷ್ಟೇ ಅಲ್ಲ ಇದೇ ಕಾಂಪೌಂಡ್‌ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ ಕೂಡ, ಭವಿಷ್ಯದಲ್ಲಿ 25,000 ಸೀಟು ಸಾಮರ್ಥ್ಯದ ವಿಸ್ತೀರ್ಣದಲ್ಲಿ ತನ್ನದೇ ಆದ ಯೋಜನೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದು ಬೆಂಗಳೂರಿನ ಐಟಿ ಪಟೆಯಲ್ಲಿ ಮತ್ತೊಂದು ಬೃಹತ್ ಕೊಡುಗೆಯಾಗಲಿದೆ.
ಸದ್ಯ ಟಾಟಾ ರಿಯಾಲ್ಟಿಯು ಈಗಾಗಲೇ 7.6 ಮಿಲಿಯನ್ ಚದರ ಅಡಿ ವ್ಯಾಪಾರದ ಜಾಗವನ್ನು ನಿರ್ವಹಿಸುತ್ತಿದ್ದು, 9.4 ಮಿಲಿಯನ್ ಚದರ ಅಡಿ ವಾಣಿಜ್ಯ ಅಭಿವೃದ್ಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸಂಸ್ಥೆಯು ಮುಂಬೈ, ಚೆನ್ನೈ ಹಾಗೂ ಗುರುಗ್ರಾಮ್‌ನಲ್ಲಿ 'ಇಂಟೆಲಿಯನ್ ಸ್ಕ್ವೇರ್' ಮತ್ತು 'ಇಂಟೆಲಿಯನ್ ಪಾರ್ಕ್' ಗಳಂತಹ ಹಲವಾರು ಯಶಸ್ವಿ ಯೋಜನೆಗಳನ್ನು ನಿರ್ವಹಿಸುತ್ತಿದೆ.


Click it and Unblock the Notifications