ಭಾರತದ ದೈತ್ಯ ಸಾಫ್ಟ್‌ವೇರ್ ಕಂಪನಿ ಟಿಸಿಎಸ್..ಟಿಸಿಎಸ್ ಕಂಪನಿಯಲ್ಲಿ ಕೆಲಸ ಸಿಕ್ಕರೆ ಲೈಫ್ ಸೆಟಲ್. ಜೀವನಕ್ಕೇನು ತೊಂದರೆ ಇಲ್ಲ ಎನ್ನುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಆ ಮಾತುಗಳನ್ನು ವಾಪಸ್ ತೆಗೆದುಕೊಳ್ಳಬೇಕೇನೋ ಎಂಬ ಪರಿಸ್ಥಿತಿ ಬಂದೊದಗಿಗೆ. ಏಕೆಂದರೆ ಉತ್ತಮ ಸಂಬಳ ಹಾಗೂ ಕೆಲಸದ ಸೌಲಭ್ಯ ನೀಡುತ್ತಿದ್ದ ಟಿಸಿಎಸ್ ಕಂಪನಿ, ಒಂದು ವರ್ಷದೊಳಗೆ ಮೂರನೇ ಬಾರಿ ವೇತನ ಕಡಿತ ಮಾಡಿದೆ.

ಹೌದು, ಇದೊಂದು ಶಾಕಿಂಗ್ ವಿಚಾರವೆಂದರೆ ತಪ್ಪಾಗಲ್ಲ. ದೈತ್ಯ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ತನ್ನ ಹಿರಿಯ ಉದ್ಯೋಗಿಗಳ ತ್ರೈಮಾಸಿಕ ವೇರಿಯಬಲ್ ವೇತನವನ್ನು ಕಟ್ ಮಾಡಿದೆ. ಇದು ಬಹಳ ನಿರಾಸೆಯ ಸುದ್ದಿಯೇ ಆಗಿದೆ. ಇದೇ ರೀತಿ ಟಿಸಿಎಸ್ ಕಂಪನಿಯು ಮುಂಚೆಯೂ ಮಾಡಿತ್ತು. ಹಾಗೆಯೇ ಈಗ 2025ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲೂ ಮುಂದುವರಿಸಿದೆ. ಜನವರಿ-ಮಾರ್ಚ್ ಅವಧಿಗೆ, ಹಲವಾರು ಉನ್ನತ ಹುದ್ದೆಗಳ ಉದ್ಯೋಗಿಗಳಿಗೆ ಕೇವಲ 20-30% ಮಾತ್ರ ಪಾವತಿಸಲಾಗಿದೆ ಎಂದು ಖಾಸಗಿ ಮೂಲಗಳು ತಿಳಿಸಿವೆ.
ವೇತನ ಕಡಿತದ ಆತಂಕ ಏರುತ್ತಲೇ ಇದೆ:
ಈ ವೇತನ ಕಡಿತ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಕೆಲ ಉದ್ಯೋಗಿಗಳಿಗೆ ಸುಮಾರು 60-80% ರಷ್ಟು ವೇತನ ಕಡಿತವಾಗಿದೆ. ಈ ನಿರ್ಧಾರದಿಂದಾಗಿ ಸಂಸ್ಥೆಯ ಒಳಭಾಗದಲ್ಲೇ ಭದ್ರತೆಗೆ ಸಂಬಂಧಿಸಿದ ಆತಂಕ ಹೆಚ್ಚಾಗುತ್ತಿದೆ. ವೇತನದ ಪ್ರಮುಖ ಭಾಗವಾಗಿರುವ ವೇರಿಯಬಲ್ ಪೇ, ಕಂಪನಿಯ ಕಾರ್ಯಕ್ಷಮತೆ ಹಾಗೂ ನೌಕರರ ಕಚೇರಿ ಹಾಜರಾತಿಯ ಮೇಲೆ ಆಧಾರಿತವಾಗಿದೆ.
CTC-ಯ 15-20% ಭಾಗವೇ ಕಡಿತ:
ಅಬ್ಬಬ್ಬಾ...CTC-ಯ 15-20% ಭಾಗ..ಅಂದರೆ ವರ್ಷದ ಪ್ಯಾಕೇಜ್‌ನಲ್ಲಿತೇ ಇಷ್ಟೊಂದು ಕಡಿತವಾಗಿದೆ. ಈ ಬಾರಿ ನನ್ನ ವೇರಿಯಬಲ್ ಪೇ ಕೇವಲ 20% ಮಾತ್ರ ಬಂದಿದೆ, ಎಂದು ಒಬ್ಬ ಅನುಭವಸಂಪನ್ನ ಉದ್ಯೋಗಿ ಅನಾಮಧೇಯವಾಗಿ ತಿಳಿಸಿದ್ದಾರೆ
70% ಕ್ಕಿಂತ ಹೆಚ್ಚು ಜನರಿಗೆ ಪೂರ್ತಿ ಪಾವತಿ:
ಈ ಆರೋಪಗಳಿಗೆ ಪ್ರತಿಕ್ರಿಯಿಸಿ, ಟಿಸಿಎಸ್ ಸಂಸ್ಥೆ ಇವು ತಪ್ಪು ಅಂದಾಜುಗಳು ಎಂದು ಸ್ಪಷ್ಟಪಡಿಸಿದೆ. ಸಂಸ್ಥೆಯ ಪ್ರಕಾರ, ಶೇಕಡಾ 70 ಕ್ಕಿಂತ ಹೆಚ್ಚು ನೌಕರರಿಗೆ ಶೇಕಡಾ 100 ರಷ್ಟು QVA ಪಾವತಿಸಲಾಗಿದೆ. ಉಳಿದವರಿಗೆ, ಅವರ ಡಿಪಾರ್ಟ್‌ಮೆಂಟ್‌ನ ಫಲಿತಾಂಶವನ್ನು ಅವಲಂಬಿಸಿ QVA ನೀಡಲಾಗಿದೆ ಎಂದು ಹೇಳಲಾಗಿದೆ.
ಹಾಜರಾತಿಯೊಂದಿಗೆ ವೇತನವನ್ನು ಲಿಂಕ್ ಮಾಡಿರುವ ಹೊಸ ಮಾನವ ಸಂಪನ್ಮೂಲ ನೀತಿಯಿಂದ, 75% ಕ್ಕಿಂತ ಹೆಚ್ಚು ಹಾಜರಾತಿ ಇದ್ದವರಿಗೆ ಮಾತ್ರ ಪೂರ್ಣ QVA ದೊರೆಯುತ್ತದೆ. 60-75% ಹಾಜರಾತಿಯವರಿಗೆ ಅರ್ಧದಷ್ಟು ಮಾತ್ರ ದೊರೆಯುತ್ತದೆ. ನಿಯಮ ಪಾಲನೆ ಇಲ್ಲದಿದ್ದರೆ, ಶಿಸ್ತು ಕ್ರಮವೂ ಕೈಗೊಳ್ಳಲಾಗಬಹುದು.
ವೇತನ ಹೆಚ್ಚಳವನ್ನೂ ಮುಂದೂಡಿದ ಟಿಸಿಎಸ್:
ಟಿಸಿಎಸ್ ವರ್ಷಾಂತರ ಪ್ರತಿ ಏಪ್ರಿಲ್‌ನಲ್ಲಿ ತನ್ನ ನೌಕರರ ವೇತನ ಹೆಚ್ಚಳವನ್ನು ಜಾರಿಗೆ ತರುತ್ತಿದ್ದುದು ರೂಢಿ. ಆದರೆ ಈ ಬಾರಿ ಆರ್ಥಿಕ ಅನಿಶ್ಚಿತತೆ ಕಾರಣದಿಂದಾಗಿ ವೇತನ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. "ವ್ಯವಹಾರ ಪರಿಸ್ಥಿತಿಯನ್ನು ಅವಲಂಬಿಸಿ, ಯಾವುದೇ ಸಮಯದಲ್ಲಿ ವೇತನ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಟಿಸಿಎಸ್‌ನ HR ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ತಿಳಿಸಿದ್ದಾರೆ.
ಟಿಸಿಎಸ್ ತನ್ನ ಹಿರಿಯ ಸಿಬ್ಬಂದಿಗೆ ನಿರಂತರವಾಗಿ ವೇತನದ ಹಿನ್ನಡೆ ಮಾಡುತ್ತಿರುವುದು ಉದ್ಯೋಗ ಮಾರುಕಟ್ಟೆಯಲ್ಲಿ ಆತಂಕ ಹುಟ್ಟಿಸಿದೆ. ಭದ್ರತೆ ಮತ್ತು ಪ್ರತಿಫಲದ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸೀನಿಯರ್ ಉದ್ಯೋಗಿಗಳಿಗೆ ಈ ತೃತೀಯ ತ್ರೈಮಾಸಿಕ ಪಾವತಿ ಕಡಿತ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ, ಕಚೇರಿಗೆ ಹಾಜರಾತಿ ಮತ್ತು ಪರ್ಫಾರ್ಮೆನ್ಸ್ ಟಾರ್ಗೆಟ್‌ಗಳ ಮೇಲಾಧಾರಿತ ವೇತನ ವ್ಯವಸ್ಥೆ TCS ಮಾದರಿಯಾಗುತ್ತಾ ಎಂಬ ಪ್ರಶ್ನೆಗಳು ಹುಟ್ಟಿವೆ.
ಹಿರಿಯ ಉದ್ಯೋಗಿಗಳಿಗೆ ಶೇಕಡಾ 20-30 ರಷ್ಟೇ ವೇರಿಯಬಲ್ ಪೇ ನೀಡಲಾಗಿರುವ ಈ ಕ್ರಮ, ಮುಂದಿನ ತಿಂಗಳುಗಳಲ್ಲಿಯೂ ಮುಂದುವರಿಯಬಹುದು ಎಂಬ ನಿರೀಕ್ಷೆ ಇದೆ. ಟಿಸಿಎಸ್ ಬದಲಾವಣೆಗೊಳ್ಳುತ್ತಿರುವ ತನ್ನ ಆಂತರಿಕ ನೀತಿಗಳನ್ನು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಬಳಸುತ್ತಿದ್ದರೂ, ಉದ್ಯೋಗಿಗಳ ಆಳವಾದ ಅಸಮಾಧಾನವು ಇನ್ನೂ ತಗ್ಗಿಲ್ಲ.


Click it and Unblock the Notifications