ಬೆಂಗಳೂರು, ನವೆಂಬರ್ 05: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್, ಕ್ಯಾಬ್ ಸೇರಿದಂತೆ ವಿವಿಧ ಸಾರಿಗೆ ಸಂಪರ್ಕವಿದೆ. ಆದರೆ ಕ್ಯಾಬ್‌ಗಳ ದರದ ಬಗ್ಗೆ ಹಲವು ಆರೋಪಗಳು ಪದೇ ಪದೇ ಕೇಳಿ ಬರುತ್ತದೆ. ಈಗ ಇಂತಹ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕ್ಯಾಬ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ, ಅದರಲ್ಲೂ ಮಹಿಳಾ ಪ್ರಯಾಣಿಕರು ಎಚ್ಚರವಾಗಿರಬೇಕು ಎಂದು ಪೋಸ್ಟ್‌ನಲ್ಲಿ ಮನವಿ ಮಾಡಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಕೆಲವು ಕ್ಯಾಬ್‌ಗಳಲ್ಲಿ ಚಾಲಕರು ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಹೊಸ ತಂತ್ರವೊಂದನ್ನು ಕಂಡುಕೊಂಡಿದ್ದಾರೆ ಎಂದು ಟೆಕ್ಕಿಯೊಬ್ಬರು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ. ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಟೆಕ್ಕಿ ತಮ್ಮ ಪೋಸ್ಟ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಸಂಚಾರ ನಡೆಸುವ ಕ್ಯಾಬ್‌ಗಳ ಹೊಸ ಹಗರಣವನ್ನು ಬಿಚ್ಚಿಟ್ಟಿದ್ದಾರೆ. ಹೆಚ್ಚಿನ ಹಣವನ್ನು ಸುಲಿಗೆ ಮಾಡಲು ಅದರಲ್ಲಿಯೂ ಮಹಿಳಾ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯಲು ಡ್ರೈವರ್‌ಗಳು ಈ ಹೊಸ ತಂತ್ರದ ಮೊರೆ ಹೋಗಿದ್ದಾರೆ ಎಂದು ಪೋಸ್ಟ್‌ನಲ್ಲಿ ಆರೋಪವನ್ನು ಮಾಡಲಾಗಿದೆ.
ಶಿವಂ ಶೌರ್ಯ ಝಾ ಎಂಬ ಟೆಕ್ಕಿ ಎಕ್ಸ್ ಪೋಸ್ಟ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಕ್ಯಾಬ್‌ನಲ್ಲಿ ಹೊಸ ಹಗರಣ ಆರಂಭವಾಗಿದೆ. ನಮ್ಮ ಡ್ರೈವರ್‌ಗಳು ಪ್ರಯಾಣಿಕರಿಂದ ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಂದ ಈ ತಂತ್ರದ ಮೂಲಕ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಮಾರ್ಗ ಮಧ್ಯೆ ಕ್ಯಾಬ್ ನಿಲ್ಲಿಸುವ ಚಾಲಕರು ಇಂಧನ ಖಾಲಿ ಆಗಿದೆ ಎಂದು ಹೇಳುತ್ತಾರೆ ಮತ್ತು ಪೆಟ್ರೋಲ್ ಬಂಕ್‌ನಲ್ಲಿ ತೋರಿಸುವ 1,100 ರೂ. ನೀವು ನೀಡಿ ಎಂದು ತಿಳಿಸುತ್ತಾರೆ. ಆದರೆ ಇದಕ್ಕೆ ಕೇವಲ 1000 ರೂ. ಆಗಿರುತ್ತದೆ. ಒಂದು ವೇಳೆ ನೀವು ಹಣ ಕೊಡದಿದ್ದರೆ ನಿಮ್ಮನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುವುದಿಲ್ಲ ಎಂದು ಹೇಳುತ್ತಾರೆ. ನೀವು ಹಣ ಕೊಡದಿದ್ದರೆ ನಾವು ಪೆಟ್ರೋಲ್ ಬಂಕ್‌ನಿಂದ ಮುಂದೆ ಹೋಗಲ್ಲ ಎಂದು ಹಠ ಹಿಡಿಯುತ್ತಾರೆ. ಮುಂದೆ ಸಾಗದಿದ್ದರೆ ವಿಮಾನ ತಪ್ಪಿ ಹೋಗುವ ಕಾರಣ ಪ್ರಯಾಣಿಕರು ಹಣ ಕೊಡುತ್ತಾರೆ. ಅಲ್ಲದೇ ಅವರು ಟೋಲ್ ತಪ್ಪಿಸಲು ಒಳ ಮಾರ್ಗದಲ್ಲಿಯೂ ಸಂಚಾರ ನಡೆಸುತ್ತಾರೆ ಎಂದು ಟೆಕ್ಕಿ ಹೇಳಿದ್ದಾರೆ.
ಟೋಲ್ ಹಣವನ್ನು ತಪ್ಪಿಸುವ ಚಾಲಕರು ಪೆಟ್ರೋಲ್ ಬಂಕ್‌ನಲ್ಲಿ ಪ್ರಯಾಣಿಕರಿಂದ ಹಣವನ್ನು ವಸೂಲಿ ಮಾಡುತ್ತಾರೆ. ರ‍್ಯಾಪಿಡೋ ಕ್ಯಾಬ್‌ನಲ್ಲಿ ಸಂಚಾರ ನಡೆಸುವಾಗ ಈ ಅನುಭವವಾಗಿದೆ ಎಂದು ಟೆಕ್ಕಿ ಹೇಳಿಕೊಂಡಿದ್ದು, ಅದನ್ನು ತಮ್ಮ ಪೋಸ್ಟ್‌ನಲ್ಲಿ ಅವರು ಟ್ಯಾಗ್ ಸಹ ಮಾಡಿದ್ದಾರೆ. ಹೊಸ ಹಗರಣದ ಬಗ್ಗೆ ನೀವು ಎಚ್ಚರವಹಿಸಿ ಎಂದು ರ‍್ಯಾಪಿಡೋಗೂ ಸಲಹೆ ನೀಡಿದ್ದಾರೆ.
ಈ ಬಗ್ಗೆ ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ರೀತಿಯ ಅನುಭವ ತಮಗೂ ಆಗಿದೆ. ಆದ್ದರಿಂದ ಕ್ಯಾಬ್ ಬಿಟ್ಟು ಬಿಎಂಟಿಸಿ ಬಸ್‌ನಲ್ಲಿ ಸಂಚಾರ ನಡೆಸುತ್ತೇನೆ. ಏರ್‌ಪೋರ್ಟ್‌ಗೆ ಸಾಗಲು ಬಸ್ ಬಳಕೆ ಮಾಡಿ ಎಂದು ಸಹ ಅವರು ಸಲಹೆ ನೀಡಿದ್ದಾರೆ. ಈ ಕುರಿತು ದೂರುಗಳ ಬಗ್ಗೆ ಕ್ಯಾಬ್ ನಡೆಸುವ ಕಂಪನಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಲಾಗಿದೆ.
ನನಗೂ ಈ ರೀತಿಯ ಅನುಭವವಾಗಿದೆ. ಟೋಲ್ ಇರುವ ರಸ್ತೆಯಲ್ಲಿ ಹೋಗಲು ಒತ್ತಾಯಿಸಿದರೂ ಸಹ ಒಳ ಮಾರ್ಗದಲ್ಲಿ ಕ್ಯಾಬ್ ಓಡಿಸುತ್ತಾರೆ. ಸರಿಯಾಗಿ ಬೀದಿ ದೀಪಗಳು ಇಲ್ಲದ ರಸ್ತೆಗಳಲ್ಲಿ ಅವರು ಹೋಗುತ್ತಾರೆ. ಸುರಕ್ಷತೆ ಬಗ್ಗೆ ಯಾವುದೇ ಖಾತ್ರಿ ಇಲ್ಲ ಎಂದು ಮತ್ತೊಬ್ಬರು ಕಮೆಂಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications