ಬೆಂಗಳೂರು, ಅಕ್ಟೋಬರ್ 17: ಬೆಂಗಳೂರು ನಗರದಲ್ಲಿ ನಾಗಸಂದ್ರ-ಮಾದಾವರ ನಡುವಿನ ಹಸಿರು ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಓಡಿಸಲು ಅಕ್ಟೋಬರ್ 4ರಂದು ಒಪ್ಪಿಗೆ ಸಿಕ್ಕಿದೆ. ಆದರೆ ಮೆಟ್ರೋ ರೈಲು ಸಂಚಾರ ಯಾವಾಗ ಆರಂಭ? ಎಂಬ ಕುರಿತು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಮೆಟ್ರೋ ಮಾರ್ಗದ ಆರಂಭವಾದರೆ ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರ ರೈಲು ಸಂಚಾರ ಆರಂಭಿಸಲು ದಿನಾಂಕ ನಿಗದಿ ಮಾಡಬೇಕಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸದ್ಯ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ಬಿಎಂಆರ್‌ಸಿಎಲ್ ಈ ಮಾರ್ಗವನ್ನು 3.14 ಕಿ. ಮೀ. ವಿಸ್ತರಣೆ ಮಾಡಿದ್ದು, ಹೊಸದಾಗಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳು ಸೇರ್ಪಡೆಯಾಗಿವೆ.

ಈ ವಿಸ್ತರಿತ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಯೋಗಿಕ ಸಂಚಾರವೂ ಮುಗಿದಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪ್ರಾಯೋಗಿಕ ಸಂಚಾರವನ್ನು ನಡೆಸಿ, ರೈಲುಗಳ ವಾಣಿಜ್ಯ ಸಂಚಾರಕ್ಕೆ ಬಿಎಂಆರ್‌ಸಿಎಲ್‌ಗೆ ಅನುಮಿತಿ ನೀಡಿದ್ದಾರೆ. ಆದರೆ ರೈಲು ಓಡಿಸಲು ಸರ್ಕಾರ ಉದ್ಘಾಟನಾ ದಿನಾಂಕ ನಿಗದಿ ಮಾಡಬೇಕಿದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ನಮ್ಮ ಮೆಟ್ರೋ ಸಂಚಾರ ಆರಂಭದ ದಿನಾಂಕ ನಿಗದಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ಇಲಾಖೆ ಈ ಪತ್ರವನ್ನು ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಡಿ. ಕೆ. ಶಿವಕುಮಾರ್‌ಗೆ ಕಳಿಸಿದೆ. ಅಕ್ಟೋಬರ್ ಅಂತ್ಯದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಸಂಸದರ ಪತ್ರ: ನಾಗಸಂದ್ರ-ಮಾದವರ ಮಾರ್ಗದಲ್ಲಿ ತಕ್ಷಣ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರು, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಪತ್ರ ಬರೆದಿದ್ದಾರೆ.
ಡಿ. ಕೆ. ಶಿವಕುಮಾರ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಮನೋಹರ್ ಲಾಲ್ ಕಟ್ಟರ್‌ಗೆ ಸಂಸದರು ಪತ್ರವನ್ನು ಬರೆದು, ರೈಲ್ವೆ ಸುರಕ್ಷತಾ ಆಯುಕ್ತರು ಬಿಎಂಆರ್‌ಸಿಎಲ್‌ಗೆ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಮೆಟ್ರೋ ರೈಲು ಓಡಿಸಲು ಒಪ್ಪಿಗೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.
3.14 ಕಿ. ಮೀ. ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದವರ ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಸಂಚಾರ ಆರಂಭಿಸಿದರೆ ನಗರದ ನಮ್ಮ ಮೆಟ್ರೋ ಜಾಲ 77 ಕಿ. ಮೀ.ಗೆ ವಿಸ್ತರಣೆಯಾಗಲಿದೆ, ಅಲ್ಲದೇ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ದಿನಾಂಕ ನಿಗದಿ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ ಸರ್ಕಾರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜೊತೆ ಚರ್ಚಿಸಿ, ಕೇಂದ್ರ ಸಚಿವರ ದಿನಾಂಕವನ್ನು ಪಡೆದು ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ದಿನಾಂಕವನ್ನು ನಿಗದಿ ಮಾಡುತ್ತದೆ. ಈಗಾಗಲೇ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ವಿಳಂಬವಾಗಿದೆ. ಈಗ ಸರ್ಕಾರ ಇನ್ನಷ್ಟು ವಿಳಂಬ ಮಾಡಬಾರದು ಎಂಬುದು ಜನರ ಬೇಡಿಕೆಯಾಗಿದೆ.
ಬಿಎಂಆರ್‌ಸಿಎಲ್ ಈ ವಿಸ್ತರಿತ ಮಾರ್ಗದಲ್ಲಿ ಆಗಸ್ಟ್ 12 ರಿಂದ 17ರ ತನಕ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು. ರೈಲುಗಳ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಅಕ್ಟೋಬರ್ 3ರಂದು ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗ ಪರಿಶೀಲನೆ ನಡೆಸಿದ್ದರು. ಅಕ್ಟೋಬರ್ 4ರಂದು ರೈಲುಗಳ ವಾಣಿಜ್ಯ ಸೇವೆಗೆ ಅನುಮತಿ ನೀಡಿದ್ದಾರೆ. ಆದರೆ ಸರ್ಕಾರ ದಿನಾಂಕ ನಿಗದಿ ಮಾಡುವುದು ಬಾಕಿ ಇದೆ.
19 ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯೊಂದಿಗೆ 2017ರಲ್ಲಿ ಬಿಎಂಆರ್‌ಸಿಎಲ್ ಈ ವಿಸ್ತರಿತ ಮಾರ್ಗದ ಕಾಮಗಾರಿ ಪ್ರಾರಂಭಿಸಿತು. ಆದರೆ 2024ರ ಅಕ್ಟೋಬರ್‌ಗೆ ಮಾರ್ಗ ಪೂರ್ಣಗೊಂಡಿದೆ. ಈಗ ರೈಲು ಸಂಚಾರವನ್ನು ಮತ್ತಷ್ಟು ವಿಳಂಬ ಮಾಡಬೇಡಿ ಎಂಬುದು ಜನರ ಬೇಡಿಕೆಯಾಗಿದೆ.


Click it and Unblock the Notifications