ಮಧ್ಯಪ್ರಾಚ್ಯದಲ್ಲಿ ಸಂಘರ್ಷ (Middle East War) ತೀವ್ರವಾಗುತ್ತಿದ್ದಂತೆ, ಇತ್ತ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ವಿಷಯದಲ್ಲಿ ಭಾರೀ ಚರ್ಚೆ ಎದ್ದಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ (Israel-Iran War) ಜಾಗತಿಕವಾಗಿ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದು ಪ್ರಮಾಣ ಬಹಳಷ್ಟು ಕುಸಿತ ಕಂಡಿದೆ. ಅಲ್ಲದೇ ಸರ್ಕಾರ ಕೂಡಾ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಈ ಹಿನ್ನೆಲೆ ಪೂರೈಕೆಯಲ್ಲೂ ಅಡ್ಡಿಯಾಗಿದೆ.

ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿ ಹಲವಾರು ಹೋಟೆಲ್, ರೆಸ್ಟೋರೆಂಟ್‌ಗಳ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ. ಇದೀಗ ಬೆಂಗಳೂರು, ಚೆನ್ನೈ ಹೋಟೆಲ್ ಅಸೋಸಿಯೇಷನ್‌ಗಳು ಪ್ರಧಾನಿ ಮೋದಿ, ಸಚಿವರಿಗೆ ಪತ್ರ ಬರೆದು ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸುವಂತೆ ಪತ್ರ ಬರೆದಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಕೊರತೆ; ಉದ್ಯಮಕ್ಕೆ ಸಂಕಷ್ಟ!
ಹೌದು, ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಈ ಹಿನ್ನೆಲೆ ಹೋಟೆಲ್ ಉದ್ಯಮಕ್ಕೆ ಭಾರೀ ಪೆಟ್ಟು ಬೀಳುತ್ತಿದೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದ ನಗರದ ಹಲವು ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿಗೆ ಬಂದಿದ್ದು, ಇದೀಗ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮನವಿ ಮಾಡಿದೆ. ಅಲ್ಲದೇ ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ತೇಜಸ್ವಿ ಸೂರ್ಯ ಪತ್ರದಲ್ಲೇನಿದೆ?
ಹೋಟೆಲ್ ಮತ್ತು ಹಾಸ್ಪಿಟಾಲಿಟಿ ವಲಯಗಳಿಗೆ ನಿರಂತರವಾಗಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಖಚಿತಪಡಿಸುವಂತೆ ಮನವಿ ಮಾಡಿ, ತೇಜಸ್ವಿ ಸೂರ್ಯ ಈ ಕುರಿತು ಎಕ್ಸ್‌ನಲ್ಲಿ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಹೋಟೆಲ್ ಮತ್ತು ಆಹಾರ ಸೇವಾ ಉದ್ಯಮಗಳು ಇಂದು ತುಂಬಾನೇ ಅಗತ್ಯವಾಗಿದೆ. ಅದ ರೀತಿ ಈ ಉದ್ಯಮಗಳು ಬಹುತೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದ್ದರಿಂದ ಎಲ್‌ಪಿಜಿ ಪೂರೈಕೆಯಲ್ಲಿ ಏನಾದರೂ ಅಡಚಣೆಯಾದರೆ, ಅದು ಹೋಟೆಲ್, ರೆಸ್ಟೋರೆಂಟ್‌ಗಳ ಉದ್ಯಮಕ್ಕೆ ನೇರ ಪರಿಣಾಮ ಬೀರುತ್ತದೆ. ಅಲ್ಲದೇ ಉದ್ಯೋಗವಕಾಶ ಮತ್ತು ಗ್ರಾಹಕರ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಬಳಕೆಯಿಲ್ಲದ ಕಾರಣ, ಎಲ್‌ಪಿಜಿ ಅಗತ್ಯವಾಗಿಬಿಟ್ಟಿದೆ. ಆದ್ದರಿಂದ ಎಲ್‌ಪಿಜಿ ಪೂರೈಕೆಯನ್ನು ಮುಂದುವರೆಸಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಸಚಿವೆ ಶೋಭಾ ಕರಂದ್ಲಾಜೆ ಪತ್ರ
ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಎಲ್‌ಪಿಜಿ ಗ್ಯಾಸ್ ಪೂರೈಕೆ ಮಾಡುವಂತೆ ಪತ್ರ ಬರೆದಿದ್ದಾರೆ. ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿನ ಹೋಟೆಲ್ ಉದ್ಯಮಿಗಳು ಸದ್ಯ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ನೇರವಾಗಿ ಭೇಟಿ ಮಾಡಿ, ಸಮಸ್ಯೆಗೆ ಪರಿಹಾರ ಹೇಗೆ ತರುವುದು ಎಂಬುದರ ಬಗ್ಗೆ ಚರ್ಚೆ ನಡೆಸುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.


Click it and Unblock the Notifications