ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಟೆಸ್ಲಾ ಕಂಪನಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈ ಟೆಸ್ಲಾ ಕಂಪನಿಯು ಭಾರತೀಯ ಮಾರುಕಟ್ಟೆ ಪ್ರವೇಶದತ್ತ ಇಡುತ್ತಿರುವ ಹೆಜ್ಜೆ, ಹೊಸ ತಿರುವು ಪಡೆದಿದ್ದು ದೀರ್ಘಲಕಾಲದ ನಿರೀಕ್ಷೆಯ ಬಳಿಕ, ತನ್ನ ಮೊದಲ ಬ್ಯಾಚ್ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಕಳಿಸಿರುವ ಬಗ್ಗೆ ವರದಿಯಾಗಿದೆ. ಈ ಬೆಳವಣಿಗೆ ಉದ್ಯಮ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ಕಾರಣ ಆಗಿರೋದಂತೂ ಸತ್ಯ.

ಇನ್ನು ಟೆಸ್ಲಾದ ಈ ಹೊಸ ಪ್ರಯಾಣಕ್ಕೆ ಬುನಾದಿಯಾಗಿದ್ದು ದಶಕದ ಹಿಂದಿನ ಒಂದು ಘಟನೆ. 2015ರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ಘಟಕದಲ್ಲಿ ಭೇಟಿಯಾಗಿ ಭಾರತದ ವ್ಯವಹಾರಕ್ಕೆ ಸಂಬಂಧಿಸಿದ ಸಂಭಾಷಣೆ ನಡೆಸಿದ್ದರು. ಆಗಿನಿಂದಲೆ ಟೆಸ್ಲಾ ಭಾರತ ಪ್ರವೇಶದ ಬಗ್ಗೆ ನಿರಂತರ ಕುತೂಹಲವಿತ್ತು. ಆದರೆ ಆಮದು ಸುಂಕದ ಗಂಭೀರ ಸಮಸ್ಯೆಗಳು ಮತ್ತು ವ್ಯಾಪಾರ ನಿಯಮಗಳ ಅಡಚಣೆಗಳಿಂದಾಗಿ ಈ ಯೋಜನೆಗಳ ಮೌಲ್ಯಮಾಪನ ಮಾತ್ರ ನಡೆಯುತ್ತಿತ್ತು.
ಶಾಂಘೈನಿಂದ ಆರಂಭ..ಭಾರತಕ್ಕೆ ಕಾರು ರವಾನೆ:
ಇತ್ತೀಚೆಗಿನ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಟೆಸ್ಲಾ ಇದೀಗ ಚೀನಾದ ಶಾಂಘೈದಲ್ಲಿರುವ ತನ್ನ ಗಿಗಾಫ್ಯಾಕ್ಟರಿಯಿಂದ ಭಾರತಕ್ಕೆ ಮೊದಲ ಬ್ಯಾಚ್ ಕಾರುಗಳನ್ನು ಕಳುಹಿಸಿದೆ. ಈ ವಾಹನಗಳು ಮಾಡೆಲ್ ವೈ ಮಾದರಿಯ ರಿಯರ್-ವೀಲ್ ಡ್ರೈವ್ ರೂಪದಲ್ಲಿ ತಯಾರಾಗಿವೆ. ಭಾರತಕ್ಕೆ ನೇರವಾಗಿ ಇವುಗಳನ್ನು ರವಾನೆ ಮಾಡಲಾಗಿದೆ ಎನ್ನುವುದು ಟೆಸ್ಲಾ ಭಾರತದ ಮಾರುಕಟ್ಟೆಗೆ ಲಘುಗತಿ ಬದಲಾಯಿಸುತ್ತಿರುವುದನ್ನು ಸೂಚಿಸುತ್ತದೆ.
ಈಗಾಗಲೇ ಕೆಲವು ವರದಿಗಳ ಪ್ರಕಾರ, ಭಾರತಕ್ಕೆ ಮೊದಲ ಟೆಸ್ಲಾ ಕಾರುಗಳು ಜರ್ಮನಿಯ ಬರ್ಲಿನ್ ಘಟಕದಿಂದ ಬರಲಿವೆ ಎನ್ನಲಾಗಿತ್ತು. ಆದರೆ ಕಂಪನಿಯ ಇತ್ತೀಚಿನ ತೀರ್ಮಾನದಿಂದಾಗಿ ಚೀನಾ ಉತ್ಪಾದನೆಗೇ ಹೆಚ್ಚಿನ ಒತ್ತು ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಬೆಂಬಲ ವ್ಯವಸ್ಥೆಯ ಸಿದ್ಧತೆ:
ವಾಹನ ರವಾನೆ ಮಾತ್ರವಲ್ಲ, ಟೆಸ್ಲಾ ತನ್ನ ಎಲ್ಲಾ ತಾಂತ್ರಿಕ ಮತ್ತು ಉಪಯೋಗ ಪರಿಕರಗಳನ್ನು ಸಹ ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಸೂಪರ್‌ಚಾರ್ಜರ್ ನೆಟ್ವರ್ಕ್ ನಿರ್ಮಾಣ, ಅವಶ್ಯಕ ವಾಹನ ಭಾಗಗಳ ಪೂರೈಕೆ ವ್ಯವಸ್ಥೆ, ಮತ್ತು ಸೇವಾ ಕೇಂದ್ರಗಳ ಸ್ಥಾಪನೆ..ಇವುಗಳನ್ನು ದೇಶದಾದ್ಯಂತ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಭಾಗಗಳನ್ನು ಅಮೆರಿಕಾ, ನೆದರ್‌ಲ್ಯಾಂಡ್ಸ್ ಮತ್ತು ಚೀನಾದಂತಹ ದೇಶಗಳಿಂದ ಆಮದು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ನೀತಿ ಬದಲಾವಣೆಯಿಂದ ಅವಕಾಶ:
ಇತ್ತೀಚೆಗೆ ಭಾರತ ಸರ್ಕಾರ ವಿದೇಶಿ ವಾಹನ ತಯಾರಕರಿಗೆ ಅನುಕೂಲವಾಗುವಂತೆ ಆಮದು ಸುಂಕಗಳನ್ನು ಶೇ.110ರಿಂದ ಶೇ.15ಕ್ಕೆ ಇಳಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ರಿಯಾಯಿತಿಯ ಪ್ರಯೋಜನ ಪಡೆಯಲು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಬೇಕು ಮತ್ತು ನಿರ್ದಿಷ್ಟ ಮಾರಾಟ ಗುರಿಗಳನ್ನು ತಲುಪಬೇಕು. ಟೆಸ್ಲಾ ಕೂಡ ಇದೇ ಮಾರ್ಗವನ್ನು ಆಯ್ದು ತನ್ನ ಯೋಜನೆಗೆ ವೇಗ ನೀಡುತ್ತಿರುವ ಸಾಧ್ಯತೆ ಇದೆ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಭವಿಷ್ಯ:
2024ರಲ್ಲಿ ದೇಶದ ಒಟ್ಟು ವಾಹನ ಮಾರಾಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಪಾಲು ಶೇ.2ರೊಳಗೆಯೇ ಇತ್ತು. ಇದು ಭಾರತದ ಎವಿ ಮಾರುಕಟ್ಟೆಯ ಬೆಳವಣಿಗೆಯ ಆರಂಭಿಕ ಹಂತವನ್ನು ಸೂಚಿಸುತ್ತದೆ. ಟೆಸ್ಲಾ ಪ್ರವೇಶವು ಈ ಕ್ಷೇತ್ರದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ ಎಂಬ ನಿರೀಕ್ಷೆಯಿದೆ. ಆಪ್ತ ಸೇವೆ, ಪ್ರಸಕ್ತ ಬ್ರಾಂಡ್ ಮೌಲ್ಯ ಮತ್ತು ತಾಂತ್ರಿಕ ಶಕ್ತಿಯೊಂದಿಗೆ, ಟೆಸ್ಲಾ ಭಾರತೀಯ ಗ್ರಾಹಕರ ಮೇಲೆ ನಿಖರವಾಗಿ ಗಮನಹರಿಸಲು ಸಜ್ಜಾಗಿದೆ.
ಫೆಬ್ರವರಿ ಸಭೆಯ ಪರಿಣಾಮವೇ?
2025ರ ಫೆಬ್ರವರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲಾನ್ ಮಸ್ಕ್ ನಡುವಿನ ಸಭೆಯ ಬಳಿಕ, ಟೆಸ್ಲಾ ತನ್ನ ಭಾರತ ಯೋಜನೆಗೆ ಹೊಸ ಉತ್ಸಾಹವನ್ನು ತೋರಿಸುತ್ತಿದೆ. ಈ ಸಭೆಯ ಪರಿಣಾಮವಾಗಿ ಉಂಟಾದ ಬದಲಾವಣೆಗಳು ಈಗ ಗಂಭೀರವಾಗಿ ಕಣ್ಣಿಗೆ ಬೀಳುತ್ತಿವೆ - ಪ್ರಾರಂಭವಾಗಿರುವ ರವಾನೆಗಳಿಂದ ಹಿಡಿದು ತಂತ್ರಜ್ಞಾನದ ಲಾಭಗಳಿಸಿ ಭಾರತ ಮಾರುಕಟ್ಟೆಗೆ ವೇಗವಾಗಿ ಪ್ರವೇಶಿಸುವ ತಂತ್ರದವರೆಗೆ.


Click it and Unblock the Notifications