ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಯುಎಸ್‌ನ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ. ಟೆಸ್ಲಾ ಹಾಗೂ ಟ್ವಿಟ್ಟರ್‌ನ ಮಾಲಿಕ ಎಲಾನ್ ಮಸ್ಕ್ ಅನ್ನು ಕೂಡಾ ನರೇಂದ್ರ ಮೋದಿ ಮಂಗಳವಾರ ಭೇಟಿಯಾಗಿದ್ದಾರೆ. ಈ ಭೇಟಿಯ ಬಳಿಕ ಎಲಾನ್ ಮಸ್ಕ್ ಟೆಸ್ಲಾ ಭಾರತದಲ್ಲಿ ಹೂಡಿಕೆಗೆ ಉತ್ಸುಕವಾಗಿದೆ, ಭಾರತ ಇತರೆ ದೊಡ್ಡ ದೇಶಗಳಿಗಿಂತ ಹೆಚ್ಚಿನ ಭರವಸೆಯನ್ನು ಹೊಂದಿರುವ ದೇಶವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್‌ನ ನೂತನ ಸಿಇಒ ಜಾಕ್ ಡಾರ್ಸೆ ಭಾರತ ಸರ್ಕಾರದ ವಿರುದ್ಧದ ಆರೋಪಗಳನ್ನು ಮಾಡಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್, ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಸ್ಥಳೀಯ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ, ಪಾಲಿಸದಿದ್ದರೆ, ಅಲ್ಲಿ ಬಳಕೆಯೆ ಮಾಡಲಾರರು ಎಂದು ತಿಳಿಸಿದ್ದಾರೆ.

"ನಾವು ಯಾವುದೇ ದೇಶದಲ್ಲಿ ಆ ದೇಶದ ಕಾನೂನನ್ನು ಪಾಲನೆ ಮಾಡುವುದು ಉತ್ತಮ. ಅದಕ್ಕಿಂತ ಹೆಚ್ಚಿನದ್ದನ್ನು ಮಾಡಲು ನಮ್ಮಿಂದ ಸಾಧ್ಯವಾಗದು. ಎಲ್ಲ ದೇಶಗಳಲ್ಲಿ ಬೇರೆ ಬೇರೆಯಾದ ಕಾನೂನು, ನಿಯಮಗಳು ಇರುತ್ತದೆ. ಆ ಸರ್ಕಾರದ ಕಾನೂನನ್ನು ಪಾಲನೆ ಮಾಡುವ ಎಲ್ಲ ಪ್ರಯತ್ನವನ್ನು ನವು ಮಾಡುತ್ತೇವೆ," ಎಂದು ಎಲಾನ್ ಮಸ್ಕ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಟೆಸ್ಲಾ ಭಾರತಕ್ಕೆ ಎಂಟ್ರಿ ನೀಡುತ್ತಾ?
ಟೆಸ್ಲಾ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಹೊಂದಿಲ್ಲ. ಈ ಹಿಂದೆಯೂ ಹಲವಾರು ಬಾರಿ ಟೆಸ್ಲಾ ಭಾರತದ ಮಾರುಕಟ್ಟೆಗೆ ಪ್ರವೇಶ ಮಾಡುತ್ತದೆಯೇ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯ ಬಳಿಕವು ಮಾಧ್ಯಮಗಳು ಟೆಸ್ಲಾ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆಯೇ ಎಂಬ ಪ್ರಶ್ನೆಯನ್ನು ಕೇಳಿದೆ. ಇದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಭಾರತದಲ್ಕಿ ಟೆಸ್ಲಾ ಮಾರುಕಟ್ಟೆ ಪ್ರವೇಶದ ಸುಳಿವು ನೀಡಿದ್ದಾರೆ.
"ಭಾರತ ದೇಶಕ್ಕೆ ಮುಂದಿನ ವರ್ಷ ಭೇಟಿ ನೀಡುವ ಪ್ಲ್ಯಾನ್ ಅನ್ನು ಮಾಡಿದ್ದೇನೆ. ಟೆಸ್ಲಾ ಭಾರತದ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎಂಬ ನಂಬಿಕೆ ನನಗಿದೆ. ಅದಕ್ಕಾಗಿ ಬೇಕಾದ ಎಲ್ಲ ಪ್ರಯತ್ನಗಳನ್ನು ಟೆಸ್ಲಾ ಮಾಡುತ್ತಾ ಬರುತ್ತದೆ. ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸುತ್ತೇನೆ. ಶೀಘ್ರವೇ ಈ ಬಗ್ಗೆ ಒಂದು ಘೋಷಣೆಯನ್ನು ಮಾಡಲಾಗುತ್ತದೆ," ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
"ನಾವು ಸಮಯವನ್ನು ನೋಡದೆ, ಎಲ್ಲ ತಯಾರಿ ನಡೆಸದೆ ಯಾವುದೇ ಘೋಷಣೆಗಳನ್ನು ಮಾಡಲು ಮುಂದಾಗುವುದಿಲ್ಲ. ಭಾರತದಲ್ಲಿ ನಾವು ಮಾಡುವ ಅತೀ ಮುಖ್ಯವಾದ ಹೂಡಿಕೆ ಇದಾಗಿರುತ್ತದೆ," ಎಂದಿದ್ದಾರೆ. ಇನ್ನು ಪ್ರತ್ಯೇಕ ವಿಡಿಯೋದಲ್ಲಿ ಮಸ್ಕ್ ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. "ಅವರಿಗೆ ಖಂಡಿತವಾಗಿಯೂ ಭಾರತದ ಮೇಲೆ ಕಾಳಜಿ ಇದೆ, ಅದಕ್ಕಾಗಿ ಭಾರತದಲ್ಲಿ ಹೂಡಿಕೆ ಮಾಡಲು ನಮ್ಮನ್ನು ತಲುಪುತ್ತಿದ್ದಾರೆ. ನಾನು ಮೋದಿಯ ಫ್ಯಾನ್," ಎಂದಿದ್ದಾರೆ.
ಹೊಸ ಕಚೇರಿಗೆ ಭಾರತವೇ ಆಸಕ್ತಿದಾಯಕ ಆಯ್ಕೆ
ಈ ಹಿಂದೆ "ಎಲ್ಲವೂ ಸರಿಯಾಗಿ ಆದಲ್ಲಿ ಮುಂದಿನ ಟೆಸ್ಲಾದ ಹೊಸ ಕಚೇರಿಗೆ ಭಾರತವೇ ಆಸಕ್ತಿದಾಯಕ ಆಯ್ಕೆಯಾಗಿದೆ," ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. "ಟೆಸ್ಲಾದ ಹೊಸ ಕಚೇರಿಗಾಗಿ ಭಾರತ ಆಸಕ್ತಿದಾಯಕ ಸ್ಥಳವಾಗಿದೆಯೇ," ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್ "ಖಂಡಿತವಾಗಿಯೂ" ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲೇ ಸರ್ಕಾರದೊಂದಿಗಿನ ಸವಾಲುಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಎಲಾನ್ ಮಸ್ಕ್‌ಗೆ ಹಲವಾರು ಸವಾಲುಗಳು ಸರ್ಕಾರದ ಕಡೆಯಿಂದ ಎದುರಾಗಿದೆ ಎಂದು ತಿಳಿಸಿದ್ದಾರೆ. "ಟೆಸ್ಲಾ ಸದ್ಯ ಭಾರತದಲ್ಲಿ ಇಲ್ಲ, ಸರ್ಕಾರದೊಂದಿಗೆ ಇರುವ ಕೆಲವು ಸವಾಲುಗಳಿಂದಾಗಿ ಭಾರತದಲ್ಲಿ ಟೆಸ್ಲಾ ಆರಂಭ ಮಾಡಲಾಗಿಲ್ಲ," ಎಂದು ಹೇಳಿದ್ದಾರೆ.


Click it and Unblock the Notifications