ಬೆಂಗಳೂರು, ನವೆಂಬರ್ 12: ಕರ್ನಾಟಕ ಮೂಲದ ಮೂವರು ಮಹಾರಾಷ್ಟ್ರ ರಾಜ್ಯದ ಪುಣೆಯ ವೈದ್ಯರಿಗೆ ಸೈಬರ್ ವಂಚನೆ ಮಾಡಿದ್ದಾರೆ. ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡುವ ಟೆಂಡರ್‌ನಲ್ಲಿ ಹೂಡಿಕೆ ಮಾಡಿಸಿ ಸುಮಾರು 3.84 ಕೋಟಿ ರೂ. ಪಂಗನಾಮ ಹಾಕಿದ್ದಾರೆ. 2024ರ ಡಿಸೆಂಬರ್‌ನಿಂದ ಈ ವರ್ಷದ ಮಾರ್ಚ್ 27ರ ತನಕ ಮೂವರು ವೈದ್ಯರಿಂದ ಹಣ ಪಡೆದಿದ್ದಾರೆ.
ಮಹಾರಾಷ್ಟ್ರದ ನೌಪಾಡಾ ಪೊಲೀಸ್ ಠಾಣೆಯಲ್ಲಿ ಈ ಕುರಿತು 39 ವರ್ಷದ ವೈದ್ಯರು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಇಲ್ಲಿಯ ತನಕ ಯಾರನ್ನೂ ಬಂಧಿಸಿಲ್ಲ. ಡಿಸೆಂಬರ್ 1, 2020 ರಿಂದ ಮಾರ್ಚ್ 27ರ ತನಕ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ.

ಆದರೆ ಯಾವುದೇ ಲಾಭ ಬಾರದ ಹಿನ್ನಲೆಯಲ್ಲಿ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ನೌಪಾಟಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ವೈದ್ಯಕೀಯ ಉಪಕರಣ ಸರಬರಾಜು ಮಾಡುವ ಆಮಿಷವೊಡ್ಡಿ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಕರೆ ಮಾಡಿದವರು ಕರ್ನಾಟಕ ಮೂಲದ ಮೂವರು ಎಂಬ ಮಾಹಿತಿ ಇದೆ. ಪುಣೆಯ ವೈದ್ಯರು ಈ ಮಾದರಿಯಲ್ಲಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ.
ಇದೇ ಮಾದರಿಯ ವಂಚನೆ ಪ್ರಕರಣವೊಂದು ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. 50 ವರ್ಷದ ಬೆಂಗಳೂರಿನ ಕುಮಾರ್ ಉತ್ಸಲ್‌ಗಾರ್ ಗೋವಾದ ಸೈಬರ್ ಕ್ರೈಂ ಪೊಲೀಸರಿಗೆ ವ್ಯಕ್ತಿಯೊಬ್ಬ 2.3 ಕೋಟಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾನೆ ಎಂದು ದೂರು ದಾಖಲಸಿದ್ದರು.
ವಾಟ್ಸಪ್ ಮೆಸೇಜ್‌ಗಳ ಮೂಲಕ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವಂತೆ ಕುಮಾರ್ ಉತ್ಸಲ್‌ಗಾರ್‌ಗೆ ಆಮಿಷ ಒಡ್ಡಲಾಗಿತ್ತು. ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಪಡೆಯಬಹುದು ಎಂದು ತಿಳಿಸಿದ್ದರು. ಇದಕ್ಕಾಗಿ ಲಾಭ ಮಾಡಿಕೊಂಡವರ ನಕಲಿ ವಾಟ್ಸಪ್ ಗ್ರೂಪ್ ಸಹ ಕ್ರಿಯೇಟ್ ಮಾಡಲಾಗಿತ್ತು. ಆದರೆ ಹೂಡಿಕೆ ಮಾಡಿದ ಮೇಲೆ ಯಾವುದೇ ಲಾಭ ಬಂದಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದರು.
ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳಲ್ಲಿ ಕೋರಿಯರ್ ಹೆಸರಿನಲ್ಲಿ ವಂಚನೆ, ಸ್ಟಾಕ್ ಮಾರುಕಟ್ಟೆ ಹೂಡಿಕೆ, ಡಿಜಿಟಲ್ ಅರೆಸ್ಟ್ ಮುಂತಾದವುಗಳು ಸೇರಿವೆ.
ಈಗ ನಡೆದಿರುವ ಎರಡು ಪ್ರಕರಣಗಳು ಆನ್‌ಲೈನ್ ಲಿಂಕ್‌ಗಳನ್ನು ನಂಬಿ ಹಣ ಹೂಡಿಕೆ ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅಧಿಕಾರಿಗಳು ಈ ಕುರಿತು ತನಿಖೆಯನ್ನು ಕೈಗೊಂಡಿದ್ದು, ಆರೋಪಿಗಳ ಬಂಧನವಾಗಬೇಕಿದೆ.
ಬೆಂಗಳೂರು ನಗರದಲ್ಲಿ 2001ರಲ್ಲಿ ಭಾರತದ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಬೆಂಗಳೂರಿನ ಸಿಐಡಿಯಲ್ಲಿ ಪ್ರಾರಂಭಿಸಲಾಗಿತ್ತು. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಭಾಯಿಸಲು, ಸೈಬರ್ ಕ್ರೈಂ ಪೊಲೀಸ್ ಠಾಣೆ, ಬೆಂಗಳೂರು ನಗರವು ಮಾರ್ಚ್ 2017ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಇದು ಬೆಂಗಳೂರಿನ ಪೊಲೀಸ್ ಆಯುಕ್ತರ ಕಛೇರಿ ಆವರಣದಲ್ಲಿದೆ ಮತ್ತು ಸೈಬರ್ ಅಪರಾಧಗಳು, ಆರ್ಥಿಕ ಮತ್ತು ಮಾದಕವಸ್ತು ಅಪರಾಧಗಳಿಗೆ ಸಂಬಂಧಿಸಿದ ಅಪರಾಧಗಳನ್ನು ನೋಂದಾಯಿಸಲು ಮತ್ತು ತನಿಖೆ ಮಾಡಲು 8 ಪೊಲೀಸ್ ಠಾಣೆಗಳನ್ನು ಸಹ ರಚಿಸಲಾಗಿದೆ.
ಬೆಂಗಳೂರು ನಗರದ ಸೈಬರ್ ಪೊಲೀಸ್ ಠಾಣೆಗಳು ತನಿಖೆ ನಡೆಸುತ್ತಿರುವ ಸೈಬರ್ ಅಪರಾಧಗಳ ಸಾಮಾನ್ಯ ವಿಧಗಳು ಡೆಬಿಟ್/ ಕ್ರೆಡಿಟ್ ಕಾರ್ಡ್ ವಂಚನೆ, ಉದ್ಯೋಗ ವಂಚನೆ, ವೈವಾಹಿಕ ವಂಚನೆ, ಆಮದು ಮತ್ತು ರಫ್ತು ವ್ಯಾಪಾರ ವಂಚನೆಗಳು (ಇ-ಮೇಲ್ ವಂಚನೆ),
ಲಾಟರಿ ವಂಚನೆ, ಹರ್ಬಲ್ ಸೀಡ್ಸ್ ವ್ಯಾಪಾರ ವಂಚನೆಗಳು.
ಅಲ್ಲದೇ ಮುಂಗಡ ಶುಲ್ಕ ವಂಚನೆ, ಸಿಮ್ ಕ್ಲೋನಿಂಗ್, ಫಿಶಿಂಗ್ ಮತ್ತು ವಿಶಿಂಗ್, ಸಾಮಾಜಿಕ ಮಾಧ್ಯಮ ಅಪರಾಧಗಳು ಮತ್ತು ಡೇಟಾ ಕಳ್ಳತನದ ಪ್ರಕರಣಗಳನ್ನು ತನಿಖೆ ಮಾಡಲಾಗುತ್ತದೆ.


Click it and Unblock the Notifications