ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಈಗಾಗಲೇ ರ್ಯಾಪಿಡೋ, ಓಲಾ, ಊಬರ್, ನಮ್ಮ ಯಾಥ್ರಿಯಂತಹ (Ola, Uber, Namma Yatri) ಕ್ಯಾಬ್, ಟ್ಯಾಕ್ಸಿ ಸೇವೆಗಳು ಚಾಲ್ತಿಯಲ್ಲಿದೆ. ಕಡಿಮೆ ದರ, ವೇಗದ ಸೇವೆಯಿಂದಾಗಿ ಈ ಆನ್‌ಲೈನ್ ಸೇವೆಗಳು ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದೀಗ ಓಲಾ, ಊಬರ್, ರ್ಯಾಪಿಡೋಗೆ ಟಕ್ಕರ್ ಕೊಡಲು ಇದೀಗ ಸರ್ಕಾರಿ ಬೆಂಬಲಿತ ಆಪ್ ಒಂದು ಬಿಡುಗಡೆಯಾಗಿದೆ. ಫೆಬ್ರವರಿ 5 ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ನೂತನ ರೈಡ್-ಹೇಲಿಂಗ್ ವೇದಿಕೆ 'ಭಾರತ್ ಟ್ಯಾಕ್ಸಿ'ಗೆ (Bharat Taxi) ಚಾಲನೆ ನೀಡಿದ್ದಾರೆ.

ಹೌದು, ಭಾರತದಲ್ಲಿ ಹೊಸದಾಗಿ ಭಾರತ್ ಟ್ಯಾಕ್ಸಿ ಎಂಬ ಸೇವೆ ಆರಂಭವಾಗಿದೆ. ಹಾಗಿದ್ರೆ ಓಲಾ, ಊಬರ್‌ಗಳಿಗಿಂತ ಇದು ಹೇಗೆ ಭಿನ್ನ? ದರ ಹೇಗಿದೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭಾರತ್ ಟ್ಯಾಕ್ಸಿ vs ಓಲಾ vs ಊಬರ್; ಯಾವುದು ಅಗ್ಗ?
ಸರ್ಕಾರ ಬೆಂಬಲಿತ ಸಹಕಾರಿ ಮಾದರಿಯನ್ನು ಆಧರಿಸಿರುವ ಈ ಭಾರತ್ ಟ್ಯಾಕ್ಸಿ, ಸದ್ಯ ಓಲಾ, ಊಬರ್‌ಗೆ ಪ್ರತಿಸ್ಪರ್ಧಿಯಾಗಿದೆ.
- ಭಾರತ್ ಟ್ಯಾಕ್ಸಿ ಬಗ್ಗೆ ಹೇಳುವುದಾದ್ರೆ ಇದರಲ್ಲಿ ಸರ್ಜ್ ಪ್ರೈಸಿಂಗ್ ಇಲ್ಲ. ಅಂದರೆ ಪೀಕ್ ಅವರ್, ಮಳೆ, ಟ್ರಾಫಿಕ್ ಸಮಯದಲ್ಲೂ ಯಾವುದೇ ದರ ಏರಿಕೆ ಮಾಡಲಾಗುವುದಿಲ್ಲ ಎನ್ನಲಾಗಿದೆ.
- ಇನ್ನು ಡ್ರೈವರ್‌ಗಳಿಗೆ 0% ಕಮಿಷನ್. ಅಂದರೆ ಇಲ್ಲಿ ಸಂಪೂರ್ಣ ಹಣ ಡ್ರೈವರ್‌ಗಳಿಗೆ ಸಿಗುತ್ತದೆ. ದಿನಕ್ಕೆ ಸಣ್ಣ ಫೀಸ್‌ನಂತೆ 25-30 ರೂ. ಮಾತ್ರ ಕಟ್ ಮಾಡಲಾಗುತ್ತದೆ.
- ಸರ್ಕಾರಿ ಬೆಂಬಲಿತ ಸೇವೆ ಇದಾಗಿದೆ.
- ಅಂದಾಜಿನ ಪ್ರಕಾರ, ಓಲಾ, ಊಬರ್‌ಗೆ ಹೋಲಿಸಿದ್ರೆ 30% ಅಗ್ಗವಾಗಿರಬಹುದು ಎಂದು ಹೇಳಲಾಗಿದೆ.
ಪ್ರೈವೇಟ್, ಬಂಡವಾಳ-ಬೆಂಬಲಿತ ಗಿಗ್ ಎಕಾನಮಿ ವೇದಿಕೆಗಳಲ್ಲಿ Ola ಮತ್ತು Uber ಕಾರ್ಯನಿರ್ವಹಿಸಿದರೆ, ಭಾರತ್ ಟ್ಯಾಕ್ಸಿ ಸಂಪೂರ್ಣವಾಗಿ ಸಹಕಾರಿ ನಿಯಮಗಳ ಆಧಾರದಲ್ಲಿ ಸೇವೆ ಸಲ್ಲಿಸುತ್ತದೆ. ಇಲ್ಲಿ ಚಾಲಕರನ್ನು "ಸಾರಥಿಗಳು" ಎಂದು ಕರೆಯಲಾಗುತ್ತದೆ. ಇಲ್ಲಿ ಚಾಲಕರು ಕೇವಲ ಸೇವೆ ಒದಗಿಸುವವರು ಮಾತ್ರವಲ್ಲದೆ, ಸಹಕಾರಿ ಸಂಸ್ಥೆಯ ಸದಸ್ಯರು ಮತ್ತು ಸಹ-ಮಾಲೀಕರಾಗಿರುತ್ತಾರೆ. ಈ ಮೂಲಕ ಚಾಲಕರು ಸಂಸ್ಥೆಯ ನೀತಿ, ನಿರ್ಧಾರಗಳಲ್ಲಿ ಭಾಗವಹಿಸಲು ಹಾಗೂ ಲಾಭದಲ್ಲಿ ಪಾಲು ಪಡೆಯಲು ಅವಕಾಶ ನೀಡುತ್ತದೆ.
ಗ್ರಾಹಕರಿಗೆ ಅನುಕೂಲ
ಭಾರತ್ ಟ್ಯಾಕ್ಸಿಯಲ್ಲಿ ವಿಶೇಷವಾಗಿ,ಕಮಿಷನ್-ಮುಕ್ತ ಮಾದರಿಯು ಚಾಲಕರಿಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ. 'ಸರ್ಜ್-ಮುಕ್ತ ಬೆಲೆ ನಿಗದಿ' ನೀತಿಯು ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿ. ಬೇಡಿಕೆ ಅಥವಾ ಪೀಕ್ ಅವರ್‌ನಲ್ಲೂ, ಬೇಡಿಕೆಯ ಆಧಾರದ ಮೇಲೆ ದರಗಳು ಬದಲಾಗದೆ ಸ್ಥಿರವಾಗಿರುತ್ತವೆ. Ola ಮತ್ತು Uber ನಲ್ಲಿ ದರಗಳು ಬೇಡಿಕೆ ಮತ್ತು ಚಾಲಕರ ಲಭ್ಯತೆಗೆ ಅನುಗುಣವಾಗಿ ದರ ಏರಳಿತಗಳಾಗುತ್ತಿರುತ್ತದೆ. ಈಗಾಗಲೇ ಕೆಲವು ಮಾಧ್ಯಮಗಳು ಓಲಾ, ಊಬರ್ ದರದೊಂದಿಗೆ ಭಾರತ್ ಟ್ಯಾಕ್ಸಿ ದರಗಳನ್ನು ಹೋಲಿಕೆ ಮಾಡಿದೆ. ಈ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ದರ ಭಾರತ್ ಟ್ಯಾಕ್ಸಿಯಲ್ಲಿ ಹೆಚ್ಚಾಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಓಲಾ, ಊಬರ್ ದರ ಹೆಚ್ಚಾಗಿ ಕಂಡು ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಂಪೂರ್ಣ ಸೇವೆ ಆರಂಭಿಸಿದ ನಂತರ ದರದ ಸ್ಪಷ್ಟತೆ ಸಿಗಲಿದೆ.


Click it and Unblock the Notifications