ಬೆಂಗಳೂರು, ಜುಲೈ 18: ಬಜೆಟ್ ಮಂಡನೆಯಾಗುತ್ತದೆ ಎನ್ನುವಾಗ ಎಲ್ಲ ವರ್ಗದವರ ನಿರೀಕ್ಷೆ ಸಹ ಹೆಚ್ಚಾಗುತ್ತದೆ. ಈ ಬಾರಿಯ ಬಜೆಟ್ ಮೇಲೆ ಸ್ವಯಂ ಉದ್ಯೋಗಿಗಳ ನಿರೀಕ್ಷೆ ಸಹ ಹೆಚ್ಚಾಗಿದೆ. ಸ್ವಯಂ ಉದ್ಯೋಗಿಗಳು ಸಾಲ ಪಡೆಯಲು ಇರುವ ನಿಯಮದಲ್ಲಿ ಮಹತ್ವದ ಬದಲಾವಣೆಯಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
ಹಪ್ಪಳ-ಸಂಡಿಗೆ ತಯಾರಿಸಿ ಮಾರಾಟ ಮಾಡುವವರು, ಬೊಂಬೆ ತಯಾರಕರು. ದರ್ಜಿಗಳು, ಸಣ್ಣ ಹೂಡಿಕೆಯ ವ್ಯಾಪರಿಗಳು, ಸ್ಥಳೀಯ ದಿನಸಿ ಅಥವಾ ಸ್ಟೇಷನರಿ ಅಂಗಡಿಗಳು, ಗಾರ್ಮೆಂಟ್, ನೈರ್ಮಲ್ಯ, ಪೀಠೋಪಕರಣಗಳು, ಮಸಾಲೆ ಮತ್ತು ಹಾರ್ಡ್‌ವೇರ್ ವ್ಯಾಪಾರ, ಬೇಕರಿ ಮಾಲೀಕರು, ಇಟ್ಟಿಗೆ ತಯಾರಿಕೆ, ಕೈಯಿಂದ ಮೇಣದಬತ್ತಿ ತಯರಾರಿಕೆ, ಸಾಬೂನುಗಳು ಮತ್ತು ಚಾಕೊಲೇಟ್ ತಯಾರಿಕೆ, ತೆಂಗಿನ ಎಣ್ಣೆ ಉತ್ಪಾದಕರು, ಆಟೋಮೊಬೈಲ್ ತಯಾರಿಕೆ, ಹೇರ್ ಕಟಿಂಗ್, ಫ್ಯಾಶನ್ ಡಿಸೈನಿಂಗ್, ವೆಡ್ಡಿಂಗ್ ಫೋಟೊಗ್ರಫಿ, ಇಂಟೀರಿಯರ್ ಡೆಕೊರೇಶನ್ ಮತ್ತು ಮೋಟಾರ್ ರಿಪೇರಿ, ಸಣ್ಣ ಗುತ್ತಿಗೆದಾರರು, ಸ್ವತಂತ್ರ ಬರವಣಿಗೆ ಮತ್ತು ಕಾಪಿರೈಟಿಂಗ್ ಕೆಲಸ ಮಾಡುವವರು, ಗ್ರಾಫಿಕ್ ವಿನ್ಯಾಸ ಮಾಡುವವರು, ಛಾಯಾಗ್ರಹಣದಲ್ಲಿ ನಿರತರಾದವರು, ಆನ್‌ಲೈನ್ ಬೋಧಕರು, ಶಿಶುಪಾಲನಾ ಸೇವೆ ನೀಡುವವರು, ಈವೆಂಟ್ ಮ್ಯಾನೆಜ್ ಮೆಂಟ್ ಮಾಡುವವರು, ಕ್ಯಾಟರಿಂಗ್ ಮಾಡುವವರು. ಈ ರೀತಿ ನೂರಾರು ವರ್ಗದ ಜನರು ಬಜೆಟ್ ಮೇಲೆ ತಮ್ಮ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಈ ವರ್ಗದವರು ತುಂಬಾ ಸವಾಲುಗಳನ್ನು ಎದುರಿಸಿದ್ದಾರೆ. ನಿಧಾನಕ್ಕೆ ಚೇತರಿಸಿಕೊಂಡಿದ್ದರೂ ಹಳೆಯ ದಿನಗಳಿಗೆ ಮರಳಲು ಸಾಧ್ಯವಾಗಿಲ್ಲ.

ಇವರಿಗೆಲ್ಲ ಬೃಹತ್ ಮೊತ್ತದ ಬಂಡವಾಳ ಒಂದೇ ಬಾರಿಗೆ ಹೊಂದಿಸುವುದು ದೊಡ್ಡ ಸವಾಲಾಗಿದೆ. ಸಾಲ ಕೇಳಲು ಬ್ಯಾಂಕ್ ಬಳಿ ಹೋದರೆ ಮೇಲಾಧಾರವಾಗಿ ಏನನ್ನು ನೀಡುತ್ತೀರಿ ಎನ್ನುವ ಪ್ರಶ್ನೆ ಎದುರಾಗುತ್ತದೆ. ಗುತ್ತಿಗೆ ಆಧಾರದಲ್ಲಿ ಯಾರ ಬಳಿಯಿಂದಾದರೂ ಕೆಲಸ ಪಡೆದುಕೊಂಡು ಬಂದರೆ ಎಲ್ಲವನ್ನು ಪೂರೈಸುವ ತನಕ ಲಾಭ ಎಂದು ಏನೂ ಉಳಿಯುತ್ತಿಲ್ಲ. ಇಂಥ ವರ್ಗದವರೆಲ್ಲ ಈ ಬಜೆಟ್ ನಲ್ಲಿ ಸಮರ್ಪಕ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಕಚ್ಚಾ ಸರಕು ಮಾರುಕಟ್ಟೆ:
ಈ ರೀತಿಯ ಕೆಲಸ ಮಾಡಿಕೊಂಡು ಬಂದವರಿಗೆ ಸರಿಯಾದ ಬೆಲೆಯಲ್ಲಿ ಕಚ್ಚಾ ಸರಕು ಸಿಗಲು ಬಗಜೆಟ್ ನಲ್ಲಿ ಏನಾದರೂ ಪರಿಹಾರ ಸೂತ್ರ ಕಂಡುಕೊಳ್ಳಬೇಕಿದೆ. ಹತ್ತಿ, ಲೋಹ, ಬಟ್ಟೆ, ಸಂಬಂಧಿಸಿದ ಆಹಾರ ಸಾಮಗ್ರಿಗಳು ಕಡಿಮೆ ದರದಲ್ಲಿ ಸಿಗುವಂತಹ ಕೆಲಸ ಆಗಬೇಕಿದೆ. ಸ್ವಯಂ ಉದ್ಯೋಗ ಮಾಡಿಕೊಂಡು ಬಂದಿದ್ದಾರೆ ಎಂದರೆ ಅಂಥವರನ್ನು ಗುರುತಿಸಿ ಸರ್ಕಾರವೇ ನಿಗಮಗತಳ ಮೂಲಕ ಕಚ್ಚಾ ವಸ್ತು ಪೂರೈಕೆ ಮಾಡುವಂತಹ ವ್ಯವಸ್ಥೆ ನಿರ್ಮಾಣವಾದರೆ ಒಳಿತು.
ಸುಲಭ ಸಾಲ ಸಿಗಬೇಕಿದೆ:
ಬಂಡವಾಳ ಸಂಗ್ರಹಣೆಗೆ ಈ ಸ್ವಯಂ ಉದ್ಯೋಗಿಗಳು ಹರಸಾಹಸ ಮಾಡಬೇಕಿದ್ದು ಅದಕ್ಕೆ ಒಂದು ಸಮರ್ಪಕ ಪರಿಹಾರ ಸಿಗಬೇಕಿದೆ. ಇಂಥವರಿಗೆ ಮನೆ ಕಟ್ಟುವ ಕನಸಿದ್ದರೂ ಹೋಂ ಲೋನ್ ಸಹ ಸುಲಭಕ್ಕೆ ಸಿಗುವುದಿಲ್ಲ. ರೆಗ್ಯೂಲರ್ ಇನ್ ಕಂ ಇಲ್ಲ. ರೆಗ್ಯೂಲರ್ ಜಾಬ್ ಇಲ್ಲ ಎನ್ನುವ ಕಾರಣ ನೀಡಿ ಅಂಥವರನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ.
ಸಾಮಾನ್ಯವಾಗಿ ಬ್ಯಾಂಕ್‌ಗಳು ಅಥವಾ NBFCಗಳು ಸಾಲವನ್ನು ತೆಗೆದುಕೊಳ್ಳುವ ವ್ಯಕ್ತಿಯ ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡ್ತವೆ. ಆದ್ದರಿಂದ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿ ಸಲ್ಲಿಕೆ ಮಾಡುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ಸ್ವಯಂ ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ. ಸ್ಯಾಲರಿ ಪಡೆಯುವ ವ್ಯಕ್ತಿಗಿಂತ ಸ್ವಯಂ ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ ಕಡಿಮೆ ಇರೋ ಕಾರಣಕ್ಕೆ ಹೋಂ ಲೋನ್ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ.
ಸ್ವಯಂ ಉದ್ಯೋಗಿಗಳಿಗೆ ಸುಲಭದಲ್ಲಿ ಕಚ್ಚಾ ವಸ್ತು ಸಿಗುವಂತೆ ಮಾಡುವುದು, ಅವರು ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಮನೆ ಕಟ್ಟುವ ಕನಸಿದ್ದರೆ ಸುಲಭ ಮಾನದಂಡ ಇಟ್ಟುಕೊಂಡು ಹೋಂ ಲೋನ್ ನೀಡಿಕೆ. ಈ ರೀತಿಯ ವಿಚಾರಗಳಿಗೆ ಈ ಬಜೆಟ್ ನಲ್ಲಿ ಪರಿಹಾರ ಸಿಗುತ್ತದೆಯಾ ಕಾದು ನೋಡಬೇಕಿದೆ.


Click it and Unblock the Notifications