ನವದೆಹಲಿ, ಜೂನ್ 18: ಕೊರೊನಾವೈರಸ್ ಪರಿಣಾಮವಾಗಿ ಅಭಿವೃದ್ಧಿ ಹೊಂದುತ್ತಿರುವ ಏಷ್ಯಾದ ದೇಶಗಳು 2020 ರಲ್ಲಿ ಆರ್ಥಿಕವಾಗಿ ಬೆಳೆಯುವುದಿಲ್ಲ ಎಂದು ಏಷಿಯನ್ ಡೆವೆಲೆಪ್‌ಮೆಂಟ್ ಬ್ಯಾಂಕ್ (ಎಡಿಬಿ) ಹೇಳಿದೆ.
ಎಡಿಬಿ ತನ್ನ ಏಷ್ಯನ್ ಡೆವಲಪ್‌ಮೆಂಟ್ ಔಟ್‌ಲುಕ್ ವರದಿಯಲ್ಲಿ ಈ ಮುನ್ನೋಟ ಕೊಟ್ಟಿದೆ. ಎಡಿಬಿಯ ಸದಸ್ಯರಾಗಿರುವ ನಲವತ್ತು ರಾಷ್ಟ್ರಗಳಲ್ಲಿ ಹಾಂಗ್ ಕಾಂಗ್, ಉತ್ತರ ಕೊರಿಯಾ ಹಾಗೂ ಸಿಂಗಪುರ್ ಹೊರತುಪಡಿಸಿ ಯಾವುದೇ ದೇಶಗಳು ಕೊರೊನಾವೈರಸ್ ಹೊಡೆತದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿ ಇಲ್ಲ ಎಂದು ಎಡಿಬಿ ಹೇಳಿದೆ.
ದಕ್ಷಿಣ ಏಷ್ಯಾದ ಆರ್ಥಿಕತೆ ಶೇ 3 ರಷ್ಟು ಕುಗ್ಗುತ್ತದೆ
ಏಷ್ಯಾದ ಅಭಿವೃದ್ದಿಶೀಲ ದೇಶಗಳಿಗೆ ಕೊರೊನಾವೈರಸ್ ಪರಿಣಾಮವಾಗಿ ಬಹುದೊಡ್ಡ ಸವಾಲು ಎದುರಾಗಿದೆ. ದಕ್ಷಿಣ ಏಷ್ಯಾದ ಆರ್ಥಿಕತೆಯು 2020 ರಲ್ಲಿ ಶೇಕಡಾ 3 ರಷ್ಟು ಕುಗ್ಗುವ ಮುನ್ಸೂಚನೆ ಇದೆ. ಕೋವಿಡ್ ದುಷ್ಪರಿಣಾಮದಿಂದಾಗಿ ಭಾರತದ ಆರ್ಥಿಕತೆಯು ಈ ಹಣಕಾಸು ವರ್ಷದಲ್ಲಿ ಶೇ 4 ರಷ್ಟು ಸಂಕುಚಿತಗೊಳ್ಳುವ ಮುನ್ಸೂಚನೆ ಇದೆ ಎಂದು ಹೇಳಿದೆ.
ಹೊಡೆತವನ್ನು ಅನುಭವಿಸುತ್ತಲೇ ಇರುತ್ತವೆ
ಏಷ್ಯಾ ಮತ್ತು ಪೆಸಿಫಿಕ್ ಭಾಗದ ಆರ್ಥಿಕತೆಗಳು ಈ ವರ್ಷ ಕೋವಿಡ್ 19 ಮಹಾಮಾರಿಯ ಹೊಡೆತವನ್ನು ಅನುಭವಿಸುತ್ತಲೇ ಇರುತ್ತವೆ. ಲಾಕ್‌ಡೌನ್‌ಗಳು ನಿಧಾನವಾಗಿ ಸಡಿಲಗೊಳ್ಳುತ್ತವೆಯಾದರೂ ಆಯ್ದ ಆರ್ಥಿಕ ಚಟುವಟಿಕೆಗಳು ಹೊಸ ಸನ್ನಿವೇಶದಲ್ಲಿ ಪುನರಾರಂಭಗೊಳ್ಳುತ್ತವೆ ಎಂದು ಎಡಿಬಿ ಮುಖ್ಯ ಅರ್ಥಶಾಸ್ತ್ರಜ್ಞ ಯಸುಯುಕಿ ಸಾವಡಾ ಹೇಳಿದ್ದಾರೆ.
ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಬೇಕು
ಕೋವಿಡ್ -19 ರ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರಗಳು ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವುದೇ ರೀತಿಯ ಏಕಾಏಕಿ ಮುಗ್ಗಟ್ಟು ಸಂಭವಿಸದಂತೆ ನೋಡಿಕೊಳ್ಳಬೇಕು. ಎಡಿಬಿ ಮುನ್ಸೂಚನೆಯ ಪ್ರಕಾರ ಹಲವು ರಾಷ್ಟ್ರಗಳು ಅಪಾಯದಲ್ಲಿ ಸಿಲುಕುವುದು ಖಚಿತ ಎಂದು ಎಡಿಬಿ ಮುಖ್ಯ ಅರ್ಥಶಾಸ್ತ್ರಜ್ಞ ಯಸುಯುಕಿ ಸಾವಡಾ ಹೇಳಿದ್ದಾರೆ.
ಅಮೆರಿಕ ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗುತ್ತೆ
ಮುಂಬರುವ ಅವಧಿಯಲ್ಲಿ ಅನೇಕ ಆರ್ಥಿಕ ಅಪಾಯಗಳಲ್ಲದೇ ಸಾಮಾಜಿಕ ಸಮಸ್ಯೆಗಳು ಏಕಾಏಕಿ ಕಾಣಿಸಬಹುದು ದೊಡ್ಡ ಹಾಗೂ ದೀರ್ಘಾವಧಿಯ ಆರ್ಥಿಕ ಬಿಕ್ಕಟ್ಟುಗಳನ್ನು ತಳ್ಳಿಹಾಕಲಾಗುವುದಿಲ್ಲ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗುವ ಅಪಾಯವೂ ಇದೆ ಎಂದು ಎಡಿಬಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.


Click it and Unblock the Notifications