ನಾವು ಕೆಲಸ ಮಾಡಿದ್ದಕ್ಕೆ ಸಾರ್ಥಕ ಅನಿಸುವುದು ನಮಗೆ ಒಂದು ಪ್ರಶಂಸೆ ಲಭ್ಯವಾದಾಗ ಅಲ್ಲವೇ?. ವೇತನದಲ್ಲಿ ಹೆಚ್ಚಳ, ನಮ್ಮ ಕಾರ್ಯದ ಗುರುತಿಸುವಿಕೆ ಯಾವುದೇ ಉದ್ಯೋಗಿಗಾದರೂ ಅತೀ ಮುಖ್ಯವಾಗುತ್ತದೆ. ಹೀಗಿರುವಾಗ ಐಟಿ ಸಂಸ್ಥೆಯ ಮುಖ್ಯಸ್ಥರೊಬ್ಬರು ತನ್ನ ಉದ್ಯೋಗಿಗಳ ಕೆಲಸ ಮೆಚ್ಚಿ ಕಾರುಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ!
ಹೌದು, ನಿಷ್ಠೆಗೆ ಪ್ರತಿಫಲ ನೀಡುವ ಮತ್ತೊಂದು ಘಟನೆ ಇದಾಗಿದೆ. ಚೆನ್ನೈ ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥರು 50 ಉದ್ಯೋಗಿಗಳಿಗೆ ಹೊಚ್ಚ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆದರೆ ಇಷ್ಟಕ್ಕೆ ಮುಗಿಯಲ್ಲ. ಈ ಸಂಸ್ಥೆ ನೀಡಿದ ಉಡುಗೊರೆಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಐಟಿ ಸಂಸ್ಥೆ ನೀಡಿದ ಉಡುಗೊರೆ
ಐಟಿ ಸಂಸ್ಥೆಯ ಸಂಸ್ಥಾಪಕ ಮುರಳಿ, ಕೆಲವು ಉದ್ಯೋಗಿಗಳು ಹಲವಾರು ವರ್ಷಗಳಿಂದಲೂ ತಮ್ಮ ಜೊತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಉದ್ಯೋಗಿಗಳ ಶ್ರಮಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸಲು ಬಯಸಿದೆ. ಆದ್ದರಿಂದಾಗಿ ಕಾರುಗಳನ್ನು ಗಿಫ್ಟ್ ಆಗಿ ನೀಡಿದೆ ಎಂದಿದ್ದಾರೆ.
ಮುರಳಿ 2009 ರಲ್ಲಿ ತಮ್ಮ ಪತ್ನಿಯೊಂದಿಗೆ ಕಂಪನಿಯನ್ನು ಸ್ಥಾಪಿಸಿದರು. "ನಾನು ಮತ್ತು ನನ್ನ ಪಾಲುದಾರರು ಸಂಸ್ಥೆಯಲ್ಲಿ ಷೇರುಗಳನ್ನು ಹೊಂದಿದ್ದೇವೆ. ನಾವು ಈಗ ನಮ್ಮಲ್ಲಿ ದೀರ್ಘ ಕಾಲದಿಂದ ಕಾರ್ಯ ನಿರ್ವಹಣೆ ಮಾಡುತ್ತಿರುವ ಉದ್ಯೋಗಿಗಳಿಗೆ ಶೇಕಡ 33 ರಷ್ಟು ಪಾಲನ್ನು ಇತರೆ ರೀತಿಯಲ್ಲಿ ನೀಡಲು ನಿರ್ಧರಿಸಿದ್ದೇವೆ," ಎಂದು ಮುರಳಿ ಹೇಳಿದರು.
"ನಾವು ಸಂಪತ್ತು ಹಂಚಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಅದರ ಮೂಲಕ ನಮ್ಮ ಉದ್ಯೋಗಿಗಳಿಗೆ 50 ಕಾರುಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ," ಎಂದು ಘೋಷಿಸಿದ್ದಾರೆ. ಈ ಸಂದರ್ಭದಲ್ಲೇ ಕಂಪನಿಯ ಮುಖ್ಯಸ್ಥರು ತಮ್ಮ ಉದ್ಯೋಗಿಗಳಿಗೆ ಕೃತಜ್ಞತೆ ರೂಪದಲ್ಲಿ ಕಳೆದ ವರ್ಷ 100 ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ಕಾರು ನೀಡಿದ ಇತರೆ ಸಂಸ್ಥೆಗಳಿವು!
ಕಳೆದ ವರ್ಷ ಫೆಬ್ರವರಿಯಲ್ಲಿ, ಅಹಮದಾಬಾದ್ ಮೂಲದ ಐಟಿ ಸಂಸ್ಥೆಯು 13 ಉದ್ಯೋಗಿಗಳಿಗೆ ಅವರ ಕಠಿಣ ಪರಿಶ್ರಮ ಮತ್ತು ವರ್ಷಗಳಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ಕಾರುಗಳನ್ನು ಉಡುಗೊರೆಯಾಗಿ ನೀಡಿತು. ಈ ಉದ್ಯೋಗಿಗಳು ಸಂಸ್ಥೆಯ ಪ್ರಾರಂಭದಿಂದಲೂ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ಸಂಸ್ಥೆ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ದೇಶಕ ರಮೇಶ ಮರಂದ್, "ಉದ್ಯೋಗಿಗಳನ್ನು ಗುರುತಿಸುವ ಕಾರ್ಯಕ್ರಮದ ಅಂಗವಾಗಿ ನಾವು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ನಾವು ಸೃಷ್ಟಿಸಿದ ಸಂಪತ್ತನ್ನು ನಮ್ಮ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ಮುಖ್ಯ ಎಂದು ನಾನು ಬಲವಾಗಿ ನಂಬುತ್ತೇನೆ," ಎಂದು ತಿಳಿಸಿದ್ದರು.
ಉದ್ಯೋಗಿಗಳಿಗೆ ದೀಪಾವಳಿ ಧಮಾಕ
2022ರಲ್ಲಿ ಚೆನ್ನೈನಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕರೊಬ್ಬರು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಬೈಕ್, ಕಾರುಗಳನ್ನು ನೀಡಿದ್ದಾರೆ. ಚಲಾನಿ ಜ್ಯುವೆಲ್ಲರಿಯ ಮಾರುಕಟ್ಟೆಯನ್ನು ನಿರ್ವಹಣೆ ಮಾಡುವ ಎಸ್ ಬಾಲಾಜಿ, "ಮೊದಲ ಬಾರಿಗೆ ಒಬ್ಬ ಮಾಲೀಕ ತನ್ನ ಉದ್ಯೋಗಿಗಳಿಗೆ ಬೈಕ್ ಹಾಗೂ ಕಾರುಗಳನ್ನು ಉಡಗೊರೆಯಾಗಿ ನೀಡುತ್ತಿರುವುದು. ಎಂಟು ಉದ್ಯೋಗಿಗಳಿಗೆ ಕಾರು ನೀಡಿದ್ದರೆ, 18 ಉದ್ಯೋಗಿಗಳಿಗೆ ಬೈಕ್ ನೀಡಲಾಗಿದೆ," ಎಂದು ಹೇಳಿದ್ದಾರೆ.
ಅಕ್ಟೋಬರ್ 2018 ರಲ್ಲಿ, ಗುಜರಾತ್ ವಜ್ರ ವ್ಯಾಪಾರಿ ಸಾವ್ಜಿಭಾಯಿ ಧೋಲಾಕಿಯಾ ಅವರು ಸಾವಿರಾರು ಉದ್ಯೋಗಿಗಳಿಗೆ ಬೃಹತ್ ದೀಪಾವಳಿ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದರು. ಅವರು ತಮ್ಮ ಸಂಸ್ಥೆಯಾದ ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್‌ನಲ್ಲಿ ಕೆಲಸ ಮಾಡುವ 1,700 "ವಜ್ರ ಕಲಾವಿದರು ಮತ್ತು ಎಂಜಿನಿಯರ್‌ಗಳಿಗೆ" 600 ಕಾರುಗಳು, ಎಫ್‌ಡಿ ಮತ್ತು ವಿಮಾ ಪಾಲಿಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೂ ಮುನ್ನ 400 ಪ್ಲ್ಯಾಟ್‌ಗಳು ಮತ್ತು 1,260 ಕಾರುಗಳನ್ನು ತಮ್ಮ ಉದ್ಯೋಗಿಗಳಿಗೆ ಗಿಫ್ಟ್ ಆಗಿ ನೀಡಿದ್ದರು.


Click it and Unblock the Notifications