ನವದೆಹಲಿ, ಮೇ 23: ಭಾರತದ ಪ್ರಮುಖ ಐಟಿ ಕಂಪನಿ ವಿಪ್ರೋದ ಮಾಜಿ ಸಿಇಒ ಥಿಯೆರಿ ಡೆಲಾಪೋರ್ಟೆ ಅವರು ಆರ್ಥಿಕ ವರ್ಷ2024ರಲ್ಲಿ ಭಾರತದ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರು 20 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 166 ಕೋಟಿ ರೂ. ಗಳಿಸಿ ಸತತ ಎರಡನೇ ವರ್ಷ ಐಟಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸತತ ಎರಡನೇ ವರ್ಷ ಈ ಹೆಗ್ಗಳಿಗೆ ಪಾತ್ರರಾಗಿರುವುದು ವಿಶೇಷ. ವಿಪ್ರೋ ಸಿಇಒ ಆಗಿರುವ ಮೊದಲು, ಕ್ಯಾಪ್ಜೆಮಿನಿಯಲ್ಲಿ ಸಿಒಒ ಹುದ್ದೆಯನ್ನು ಹೊಂದಿದ್ದರು. ಅಲ್ಲಿ ಬರೋಬ್ಬರಿ 25 ವರ್ಷಗಳ ಕಾಲ ವಿವಿಧ ಹುದ್ದೆಯನ್ನು ನಿರ್ವಹಿಸಿದ್ದರು

ಫ್ರೆಂಚ್ ಪ್ರಜೆಯಾದ ಡೆಲಾಪೋರ್ಟೆ ಅವರು ಸೈನ್ಸಸ್‌ಪೋ ಪ್ಯಾರಿಸ್‌ನಿಂದ ಎಕಾನಿಮಿಕ್ಸ್ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ನಂತರ ಸೊರ್ಬೊನ್ನೆ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿಯನ್ನು ಪಡೆದರು.
ಡೆಲಾಪೋರ್ಟೆ ಅವರು ಐಟಿ ಸಾಫ್ಟ್‌ವೇರ್ ದಿಗ್ಗಜ ವಿಪ್ರೋದಲ್ಲಿದ್ದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಬಳಿಕ ಶ್ರೀನಿವಾಸ್ ಪಲ್ಲಿಯಾ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ತಕ್ಷಣವೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿತ್ತು. ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್(SEC) ಗೆ ವಿಪ್ರೊ ಸಲ್ಲಿಸಿರುವ 20 ಎಫ್ ಫೈಲಿಂಗ್‌ಗಳ ಪ್ರಕಾರ ಡೆಲಾಪೋರ್ಟೆ 3.9 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಸಂಬಳ ಮತ್ತು ಭತ್ಯೆ, 5 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಕಮಿಷನ್/ ವೇರಿಯಬಲ್ ಪೇ, ಸುಮಾರು 7 ಮಿಲಿಯನ್ ಡಾಲರ್ ಇತರ ಮತ್ತು 4 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ದೀರ್ಘಾವಧಿಯ ಪರಿಹಾರವನ್ನು ಗಳಿಸಿದ್ದಾರೆ.
ಈ ನಡುವೆ ಅವರ ನಂತರ ಆ ಸ್ಥಾನಕ್ಕೆ ಬಂದ ಪಾಲ್ಲಿಯಾ ಅವರು ಸುಮಾರು 50 ಕೋಟಿ ರೂಪಾಯಿಗಳ ವಾರ್ಷಿಕ ವೇತನ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದು, ಇದರಿಂದ ಅವರು ಆರ್ಥಿಕ ವರ್ಷ 2025ರಲ್ಲಿ ಭಾರತದ ಐಟಿ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಸಿಇಒ ಆಗಿದ್ದಾರೆ.
ಆರ್ಥಿಕ ವರ್ಷ 2024ರ ವರ್ಷದಲ್ಲಿ ವಿಪ್ರೋ ಆದಾಯವು ವರ್ಷಕ್ಕೆ 90,486 ಕೋಟಿಗಳಿಂದ 89,760 ಕೋಟಿಗೆ ಇಳಿದಿದೆ. ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ ಮಾರ್ಚ್ 31 ಕ್ಕೆ ಕೊನೆಗೊಂಡಂತೆ ಕಳೆದ ಮೂರು ತಿಂಗಳಲ್ಲಿ ಕಂಪನಿಯ ಆದಾಯವು 4.2 ರಷ್ಟು ಕುಸಿದು 22,208.3 ಕೋಟಿ ರೂಪಾಯಿಗಳಿಗೆ ತಲುಪಿದೆ.
ವಿಪ್ರೋ ಸಂಸ್ಥೆಯನ್ನು 1945 ರಲ್ಲಿ ಮೊಹಮ್ಮದ್ ಪ್ರೇಮ್ಜಿ ಸ್ಥಾಪಿಸಿದರು. ಸಂಸ್ಥಾಪಕರ ಅಕಾಲಿಕ ಮರಣದ ನಂತರ, ಕಂಪನಿಯ ನಿಯಂತ್ರಣವನ್ನು ಬಿಲಿಯನೇರ್ ಅಜೀಂ ಪ್ರೇಮ್‌ಜಿ ವಹಿಸಿಕೊಂಡರು, ಅವರು ಇಲ್ಲಿಯವರೆಗೆ ಮಂಡಳಿಯ ಕಾರ್ಯನಿರ್ವಾಹಕೇತರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


Click it and Unblock the Notifications