ಇತ್ತೀಚಿಗಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವವರ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಇಳಿಕೆಯಾಗುತ್ತಿದ್ದು, ಎಲ್ಲರೂ ತಮ್ಮ ತಮ್ಮ ಸ್ವಂತ ವಾಹನವನ್ನೇ ದೈನಂದಿನ ಸಾಗಾಟಕ್ಕೆ ಬಳಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಜನರಲ್ಲಿ ಸದ್ಯ ವಾಹನ ಹೊಂದಬೇಕೆಂಬ ಇಚ್ಛೆ ಕೂಡ ಇದಕ್ಕೆ ಪೂರಕವಾಗಿ ಮಾಡುತ್ತಿದೆ.
ಇದೊಂದು ಉತ್ತಮ ಬೆಳವಣಿಗೆಯಾದರೂ ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇನ್ನು ಮುಂದಿನ ವರ್ಷ ವಾಹನ ಅದರಲ್ಲೂ ಕಾರು ಖರೀದಿದಾರರಿಗೆ ಈಗಲೇ ದೊಡ್ಡ ಆಘಾತ ಎದುರಾಗಿದ್ದು, ಜನವರಿ ಬಳಿಕ ಹ್ಯಾಚ್‌ಬ್ಯಾಕ್ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳವರೆಗಿನ ವಿಭಾಗಗಳ ವಾಹನ ತಯಾರಕರು ಜನವರಿಯಿಂದ ಬೆಲೆ ಏರಿಕೆಯನ್ನು ಘೋಷಿಸಿದ್ದು, ವಾಹನ ಖರೀದಿ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ. ಪರಿಣಾಮ ಹೊಸ ವರ್ಷದಲ್ಲಿ ವಾಹನ ಖರೀದಿಸಿ ತಮ್ಮ ಕನಸನ್ನು ನನಸಾಗಿಸಬೇಕೆಂಬ ಇಚ್ಛೆ ಹೊಂದಿದವರಿಗೆ ಸಹಜವಾಗಿಯೇ ಕಂಪೆನಿಗಳ ಈ ನಡೆಯಿಂದ ನಿರಾಶೆ ಉಂಟಾಗಿದೆ.

ಬೆಲೆ ಹೆಚ್ಚಳ ಕಾರ್ಯತಂತ್ರದ ಭಾಗ?
ಇನ್ನು ವರ್ಷದ ಅಂತ್ಯದಲ್ಲಿ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ಕಂಪೆನಿಗಳ ನಿರ್ಧಾರವು ಕಾರ್ಯತಂತ್ರದ ಭಾಗವಾಗಿದೆ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ರಜತ್ ಮಹಾಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರ್ಷಾಂತ್ಯದ ಮಾರಾಟದ ಗುರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಜನವರಿಯಿಂದ ಕಾರುಗಳ ಮಾರಾಟ ಬೆಲೆಯನ್ನು ಹೆಚ್ಚಿಸಿದರೆ ಪ್ರಸಕ್ತ ವರ್ಷದ ಉಳಿದ ದಿನಗಳಲ್ಲೇ ಎಲ್ಲರೂ ಕಾರುಗಳನ್ನು ಖರೀದಿಸಲು ಮುಗಿಬೀಳುವ ಮೂಲಕ ವರ್ಷಾಂತ್ಯದ ಮಾರಾಟದ ಗುರಿಯನ್ನು ಈಡೇರಿಸಲು ಸಹಾಯಕವಾಗುತ್ತದೆ ಎನ್ನಲಾಗಿದೆ. ಪ್ರಸಕ್ತ ವರ್ಷದಲ್ಲಿ ವಾಹನ ತಯಾರಕರು ಅಷ್ಟಾಗಿ ಹೇಳಿಕೊಳ್ಳುವಂಥ ಲಾಭ ಪಡೆದಿಲ್ಲ. ಅಲ್ಲದೆ ಹಬ್ಬದ ಸಮಯದ ಹಿನ್ನೆಲೆಯಲ್ಲಿ ಕಾರುಗಳ ಬೆಲೆಯನ್ನು ಕೂಡ ಹೆಚ್ಚಿಸಲು ಕಾರು ತಯಾರಕರು ಮುಂದಾಗಿಲ್ಲ.
ಹಾಗಾಗಿ ಆರ್ಥಿಕ ವರ್ಷದ ನಾಲ್ಕನೇ ಅವಧಿಯಲ್ಲಿ ಕಾರುಗಳ ಬೆಲೆ ಹೆಚ್ಚಳ ತಯಾರಕರಿಗೆ ಅನಿವಾರ್ಯವಾಗಿತ್ತು. ಹಣದುಬ್ಬರ, ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು, ಮುಂದುವರಿದ ಗ್ರಾಹಕ ಆದ್ಯತೆಗಳು ಮುಂತಾದ ಹಲವು ಸಂಗತಿಗಳು ಕೂಡ ಕಾರುಗಳ ಬೆಲೆ ಹೆಚ್ಚಳ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಮಹಾಜನ್ ಅವರು ತಿಳಿಸಿದ್ದಾರೆ.
ಯಾವೆಲ್ಲಾ ಕಂಪೆನಿಗಳ ಬೆಲೆ ಹೆಚ್ಚಳ?
ಇನ್ನು ಹಲವು ಕಾರು ತಯಾರಿಕಾ ಕಂಪೆನಿಗಳು ಮುಂದಿನ ವರ್ಷದಿಂದ ತಮ್ಮ ಉತ್ಪನ್ನಗಳ ಬೆಲೆ ಏರಿಕೆಯನ್ನು ಈಗಾಗಲೇ ಬಹಿರಂಗಪಡಿಸಿದೆ. ಅವುಗಳ ಪೈಕಿ ಮಾರುತಿ ಸುಜುಕಿ ಇಂಡಿಯಾವು ತನ್ನ ಬೆಲೆಯನ್ನು 4 ಪ್ರತಿಶತದಷ್ಟು ಹೆಚ್ಚಿಸಿಕೊಂಡಿದೆ. ಇದರ ಪರಿಣಾಮ ಆಲ್ಟೊ K10 ನಿಂದ Invicto ವರೆಗಿನ ಮಾದರಿಗಳ ಮೇಲಿನ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಇನ್ ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚದ ಒತ್ತಡದಿಂದಾಗಿ ಕಂಪನಿಯು ತಮ್ಮ ಉತ್ಪನ್ನಗಳ ಬೆಲೆಯನ್ನು ಏರಿಸಲು ನಿರ್ಧರಿಸಿದೆ.
ಇನ್ನು ಹುಂಡೈ ಮೋಟಾರ ಇಂಡಿಯಾದ ವೆರ್ನಾ ಮತ್ತು ಕ್ರೆಟಾದಂತಹ ಮಾದರಿಯ ಕಾರುಗಳ ಮೇಲಿನ ಬೆಲೆಗಳು ಸುಮಾರು 25000 ಸಾವಿರ ರೂ.ನಷ್ಟು ಹೆಚ್ಚಳವಾಗಲಿದೆ. ಅದರಂತೆ ಮಹೀಂದ್ರಾ & ಮಹೀಂದ್ರಾದ SUV ಮತ್ತು ವಾಣಿಜ್ಯ ವಾಹನಗಳ ಬೆಲೆಗಳು ಕೂಡ 3 ಪ್ರತಿಶತದಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ. ಇನ್ನು MG ಮೋಟಾರ್ ಇಂಡಿಯಾ ಕೂಡ ಎಲ್ಲಾ ಪ್ರಮುಖ ಕಂಪೆನಿಗಳಂತೆ ತನ್ನ ಇನ್‌ಪುಟ್ ವೆಚ್ಚಗಳನ್ನು ಕೂಡ ಉಲ್ಲೇಖಿಸಿ ಸುಮಾರು 3 ಪ್ರತಿಶತದಷ್ಟು ಹೆಚ್ಚಳವನ್ನು ಘೋಷಿಸಿದೆ.
ಇದರಿಂದ MG ಮೋಟಾರ್ ಇಂಡಿಯಾ ಬಹುತೇಕ ಎಲ್ಲಾ ಕಾರುಗಳ ಮೇಲಿನ ಬೆಲೆಗಳು ಕೂಡ ಮುಂದಿನ ವರ್ಷದಿಂದ ಹೆಚ್ಚಳವಾಗಲಿದೆ. ಇನ್ನು ದುಬಾರಿ ಕಾರುಗಳೆಂದೇ ಗುರುತಿಸಿಕೊಂಡಿರುವ ಮರ್ಸಿಡಿಸ್ ಬೆನ್ಝ್ ಇಂಡಿಯಾವು GLC ಗೆ ₹2 ಲಕ್ಷದಿಂದ ಮೇಬ್ಯಾಕ್ S 680 ಗೆ ₹9 ಲಕ್ಷದವರೆಗಿನ ಏರಿಳಿತದೊಂದಿಗೆ ಮೂರು ಪ್ರತಿಶತದಷ್ಟು ಏರಿಕೆಯನ್ನು ಮಾಡಲು ನಿರ್ಧರಿಸಿದೆ. ಉಳಿದಂತೆ ಆಡಿ ಹಾಗೂ BMW ಇಂಡಿಯಾ ಕೂಡ ತಮ್ಮ ಮಾದರಿ ಶ್ರೇಣಿಗಳ ಕಾರುಗಳ ಬೆಲೆಯನ್ನು 3 ಪ್ರತಿಶತದಷ್ಟು ಏರಿಕೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಮುಂದಿನ ವರ್ಷದಿಂದ ಭಾರತದ ಬಹುತೇಕ ಎಲ್ಲಾ ಕಾರು ತಯಾರಿಕಾ ಕಂಪೆನಿಗಳ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ಗ್ರಾಹಕರಲ್ಲಿ ನಿರಾಶೆ ಮೂಡಿರುವುದಂತೂ ನಿಜ.


Click it and Unblock the Notifications