ನೀವು ಇಲ್ಲಿಯ ವರೆಗೆ ಬಡತನದ ಬೇಗೆಯಿಂದ ಹೊರಬಂದು ಉದ್ಯಮಿಪತಿಗಳಾದ ಹಲವರ ನಿದರ್ಶನಗಳ ಕುರಿತು ಓದಿರುತ್ತೀರಿ ಅಥವಾ ನೋಡಿರುತ್ತೀರಿ. ತಿಂಗಳ ವೇತನ ಪಡೆಯುತ್ತಿದ್ದವರು ಕೂಡ ಉದ್ಯಮ ಸ್ಥಾಪಿಸಿ ಧನಿಕರಾದ ಬಗ್ಗೆ ನಮಗೆ ತಿಳಿದಿದೆ. ಸದ್ಯ ನಾವು ಭಿಕ್ಷುಕನ ಬಗ್ಗೆ ಹೊರಟಿದ್ದೇವೆ. ಇನ್ನು ಭಿಕ್ಷುಕ ಎಂಬ ಪದದ ಬಗ್ಗೆ ನಾವು ಯೋಚಿಸಿದಾಗ ನಾವು ಸಾಮಾನ್ಯವಾಗಿ ಬಡತನದಲ್ಲಿ ಬದುಕುತ್ತಿರುವ ವ್ಯಕ್ತಿಯ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ನಾವು ಹೇಳಹೊರಟಿರುವುದು ವಿಶ್ವದ ಶ್ರೀಮಂತ ಭಿಕ್ಷುಕನ ಬಗ್ಗೆ. ಭಿಕ್ಷೆ ಬೇಡಿ ಕೂಡ ಕೋಟ್ಯಧಿಪತಿಗಳಾಗಬಹುದು ಎಂಬ ಸಂಗತಿಯನ್ನು ಇವರು ತೋರಿಸಿಕೊಟ್ಟಿದ್ದಾರೆ. ಭಿಕ್ಷಾಟನೆಯನ್ನು ಅತ್ಯಂತ ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವರದಿಯೊಂದರ ಪ್ರಕಾರ ಮುಂಬೈನಲ್ಲಿ ನೆಲೆಸಿರುವ ಭರತ್ ಜೈನ್ ಅವರು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಎಂಬ ಹೆಗ್ಗಲಿಕೆಗೆ ಪಾತ್ರವಾಗಿದ್ದಾರೆ.
ಹೇಗಿತ್ತು ಬಾಲ್ಯದ ಜೀವನ?
ಸಾಮಾನ್ಯವಾಗಿ ಭಿಕ್ಷುಕರ ಕುಟುಂಬದಲ್ಲೇ ಜನಿಸಿದ ಭರತ್ ಜೈನ್ ಅವರಿಗೆ ಆರಂಭದಲ್ಲೇ ಆರ್ಥಿಕ ತೊಂದರೆ ಎದುರಾಗಿದ್ದ ಹಿನ್ನೆಲೆಯಲ್ಲಿ ಸೂಕ್ತ ರೀತಿಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ. ಬಾಲ್ಯವನ್ನು ಇದೇ ರೀತಿ ಕಳೆದ ಅವರು ವಿವಾಹ ಜೀವನ ಪ್ರವೇಶಿಸಿ, ಇಬ್ಬರು ಗಂಡು ಮಕ್ಕಳನ್ನು ಪಡೆದುಕೊಂಡರು. ಭರತ್ ಅವರು ತಾನು ಶಿಕ್ಷಣ ವಂಚಿತರಾಗಿದ್ದರೂ ಮಕ್ಕಳನ್ನು ಈ ರೀತಿ ಬೆಳೆಸಲಿಲ್ಲ. ಕಠಿಣ ಪರಿಶ್ರಮ ಪಟ್ಟು ಅವರು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಇದರ ನಡುವೆಯೂ ಅವರು ಭಿಕ್ಷಾಟನೆ ಮುಂದುವರೆಸಿದರು. ಮುಂಬೈ ಮಹಾನಗರದಲ್ಲಿ ಭಿಕ್ಷೆ ಹಾಕುವ ವ್ಯಕ್ತಿಗಳಿಗೆ ಬರ ಬರಲಿಲ್ಲ. ಪರಿಣಾಮ ದಿನಂಪ್ರತಿ ಎಂಬಂತೆ ಭರತ್ ಅವರು ಹೆಚ್ಚು ಹೆಚ್ಚು ಆದಾಯ ಗಳಿಸುತ್ತಲೇ ಹೋದರು. ಮೂಲಗಳ ಪ್ರಕಾರ ಭರತ್ ಅವರು ಮಾಸಿಕವಾಗಿ 75,000 ರೂ. ವರೆಗೆ ಆದಾಯ ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ. ಈ ಮೂಲಕ ವೃತ್ತಿಪರರು ಪಡೆಯುವ ಸಂಬಳಕ್ಕಿಂತ ಹೆಚ್ಚು ಭರತ್ ಅವರು ಭಿಕ್ಷಾಟನೆ ಮೂಲಕ ದುಡಿದುಕೊಳ್ಳುತ್ತಾರೆ. ಇನ್ನು ಇದೇ ರೀತಿ ಹಲವು ದಶಕಗಳ ಕಾಲ ಭಿಕ್ಷಾಟನೆ ಮಾಡಿರುವ ಭರತ್ ಸದ್ಯ ಒಟ್ಟಾರೆಯಾಗಿ 7.5 ಕೋಟಿ ರೂ. ನಿವ್ವಳ ಸಂಪತ್ತನ್ನು ಹೊಂದಿದ್ದಾರೆ ಎನ್ನಲಾಗಿದೆ.

ಸ್ಮಾರ್ಟ್ ಹೂಡಿಕೆ ಮಾಡುತ್ತಿರುವ ಭರತ್!
ಸಾಮಾನ್ಯವಾಗಿ ಭಿಕ್ಷಕರು ಹಾಗೂ ಸ್ಮಾರ್ಟ್ ಹೂಡಿಕೆಗೆ ಅಜಗಜಾಂತರ ಸಂಬಂಧ ಎಂದು ನೀವು ಹೇಳಬಹುದು. ಆದರೆ ಎಲ್ಲರ ನಡುವೆ ಭರತ್ ಜೈನ್ ಅವರು ಕೊಂಚ ಭಿನ್ನ ಎಂದು ಹೇಳಿದರೆ ತಪ್ಪಾಗಲಾರದು. ಭರತ್ ಜೈನ್ ಅವರು ತಾವು ಮಾಸಿಕವಾಗಿ ದುಡಿದ ಮೊತ್ತವನ್ನು ಸ್ಮಾರ್ಟ್ ರೀತಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಭರತ್ ಅವರು ಮುಂಬೈನಲ್ಲಿ 1.4 ಕೋಟಿ ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಅದೂ ಅಲ್ಲದೆ ಅವರು ಥಾಣೆಯಲ್ಲಿ ಎರಡು ಅಂಗಡಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಥಾಣೆಯಲ್ಲಿ ಎರಡು ಅಂಗಡಿಗಳಿಂದ ಭರತ್ ಅವರು ಮಾಸಿಕ 30,000 ರೂ ಬಾಡಿಗೆ ಆದಾಯವನ್ನು ಗಳಿಸುತ್ತಿದ್ದಾರೆ. ಈ ಮೂಲಕ ಭಿಕ್ಷಾಟನೆ ಹೊರತಾಗಿಯೂ ಬಾಡಿಗೆ ರೂಪದಲ್ಲಿ ಭರತ್ ಅವರು ಸ್ಥಿರವಾದ ಆದಾಯವನ್ನು ಪಡೆಯುತ್ತಿದ್ದಾರೆ.
ಭಿಕ್ಷಾಟನೆ ಮುಂದುವರೆಸಿದ ಭರತ್
ಇನ್ನು ಇಷ್ಟೆಲ್ಲಾ ಅವರ ಸಂಪತ್ತಿನ ಬಗ್ಗೆ ತಿಳಿಸಿದ ಬಗ್ಗೆ ಭರತ್ ಅವರು ಸದ್ಯ ಭಿಕ್ಷಾಟನೆ ನಿಲ್ಲಿಸಿರಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪಾಗಿದೆ. ಭರತ್ ಅವರು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಂತಹ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ಈಗಲೂ ಮುಂದುವರೆಸಿದ್ದಾರೆ. ಸದ್ಯ ಪರೇಲ್ ಪ್ರದೇಶದಲ್ಲಿ ವಾಸಿಸುತ್ತಿರುವ ಅವರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭರತ್ ಜೈನ್ ಅವರ ಕುಟುಂಬದ ಇತರ ಸದಸ್ಯರು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಇದು ಕೂಡ ಕುಟುಂಬಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತಿದೆ.
ಕೋಟ್ಯಾಧಿಪತಿ ಭಿಕ್ಷುಕ!
ಭಿಕ್ಷುಕ ಎಂದು ಹೇಳುವಾಗ ಎಲ್ಲರಲ್ಲೂ ಯಾವ ಚಿತ್ರಣ ಕಾಣಸಿಗುತ್ತದೆ ಎಂದು ಈಗಾಗಲೇ ನಿಮಗೆ ತಿಳಿದಿದೆ. ಆದರೆ ಸದ್ಯ ಭರತ್ ಅವರು ಅದನ್ನೇ ದೈನಂದಿನ ಉದ್ಯೋಗವನ್ನಾಗಿ ಪರಿವರ್ತಿಸಿ ಕೋಟ್ಯಾಧಿಪತಿ ಆಗಿದ್ದಾರೆ. ಅದೂ ಅಲ್ಲದೆ ತಾನು ದಿನಂಪ್ರತಿ ಗಳಿಸಿದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿ, ಅಂದರೆ ಫ್ಲ್ಯಾಟ್‌ಗಳನ್ನು ಖರೀದಿಸಿ ಬಾಡಿಗೆ ನೀಡಿದ್ದಾರೆ. ಈ ಮೂಲಕ ಆರ್ಥಿಕ ಯಶಸ್ಸು ಸಾಧಿಸಿದ್ದಾರೆ.


Click it and Unblock the Notifications