ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ವರ್ಷ ಹಲವಾರು ಬಾರಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದರಲ್ಲೂ ಕೆಲವೊಮ್ಮೆ ತಿಂಗಳು ಪೂರ್ತಿ ಅಲ್ಲಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು. ಇದೀಗ ಹೊಸ ವರ್ಷದ ಆರಂಭದಲ್ಲೂ ಬೆಂಗಳೂರಿನ ಕೆಲವೆಡೆ ಪವರ್ ಕಟ್ ಆಗಲಿದೆ ಎಂದು ಘೋಷಣೆಯಾಗಿತ್ತು. ಆದ್ರೆ ಇದಕ್ಕೆ ಮುಖ್ಯ ಕಾರಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಡೆಸುತ್ತಿರುವ ನಿರ್ವಹಣಾ ಕಾಮಗಾರಿಯಾಗಿದೆ.

ರಾಜಧಾನಿಯ ಹಲವೆಡೆ ಕಳೆದ ವರ್ಷ ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ಅದೇ ರೀತಿ ಇದೀಗ ಇಂದೂ (ಜನವರಿ 2) ಕೂಡಾ ಬೆಂಗಳೂರಿನಲ್ಲಿ ವಿದ್ಯುತ್ ಕಡಿತದ ವರದಿಯಾಗಿದೆ. ಇದೀಗ ಈ ಬಗ್ಗೆ ಸ್ಪಷ್ಟ ಕಾರಣ ಏನು ಎಂಬುದು ಬಹಿರಂಗವಾಗಿದೆ.
"ವಿದ್ಯುತ್ ಸೋರಿಕೆ, ಪ್ರಸರಣ ಹಾಗೂ ವಿತರಣಾ (T&D) ನಷ್ಟಗಳಂತಹ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು, ವಿದ್ಯುತ್ ಸ್ಥಗಿತಗೊಳಿಸಿ ಸರಿಪಡಿಸುವುದು ಅಗತ್ಯ" ಎಂದು ಹಿರಿಯ ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಉಪಕರಣಗಳ ಬೆಲೆಯೇರಿಕೆಯಿಂದ ರಾಜ್ಯಕ್ಕೆ ವೆಚ್ಚ ನಿಭಾಯಿಸುವುದು ಕಷ್ಟ. ಹೀಗಾಗಿ, ಲಭ್ಯವಿರುವುದರಲ್ಲೇ ನಿರ್ವಹಣೆಗೆ ನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ" ಎಂದು ಪವರ್ ಕಟ್ ಹಿಂದಿನ ಗೊಂದಲದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರಸರಣಾ ಮತ್ತು ವಿತರಣಾ ನಷ್ಟಗಳು ವಾರ್ಷಿಕ ಸುಮಾರು 2.9% ಆಗಿದೆ. ಇದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ನಿಗದಿಪಡಿಸಿದ ಗರಿಷ್ಠ ಮಿತಿಯಾಗಿದೆ.
ಕೆಪಿಟಿಸಿಎಲ್ ಅಧಿಕಾರಿಯೊಬ್ಬರ ಪ್ರಕಾರ, "ನಾವು ಈಗಾಗಲೇ ನಷ್ಟದ ಗರಿಷ್ಠ ಮಿತಿ ತಲುಪಿದ್ದು, ನಷ್ಟ ತಗ್ಗಿಸಲು ನಿಧಿಯ ಅಗತ್ಯವಿದೆ. ಅಲ್ಲದೇ ಜನವರಿಯಿಂದ ತಾಪಮಾನ ಹೆಚ್ಚಾಗಲಿದ್ದು, ವಿದ್ಯುತ್ ಬೇಡಿಕೆಯೂ ಹೆಚ್ಚಾಗುತ್ತದೆ. ಆದ್ದರಿಂದ ಹೈ ವೋಲ್ಟೇಜ್ ಕೆಪಾಸಿಟರ್‌ಗಳು ಮತ್ತು ತಂತಿಗಳ ಹಾನಿ ತಪ್ಪಿಸಲು ಈ ವರ್ಷದ ಆರಂಭದಿಂದಲೇ ನಿರ್ವಹಣಾ ಕಾಮಗಾರಿ ಆರಂಭಿಸಲಾಗಿದೆ." ಆದ್ದರಿಂದ ಪವರ್ ಕಟ್ ಆಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಬೆಸ್ಕಾಂ ಅಧಿಕಾರಿಯೊಬ್ಬರು, "ಪೀಕ್ ಲೋಡ್ ಇದ್ದರೂ ಇಲ್ಲದಿದ್ದರೂ, ಹಳೆಯ ವಿದ್ಯುತ್ ತಂತಿಗಳು, ಟ್ರಾನ್ಸ್‌ಫಾರ್ಮರ್‌ಗಳು ಸಮಸ್ಯೆ ಎದುರಿಸುತ್ತಲೇ ಇರುತ್ತದೆ. ಆದ್ದರಿಂದ ನಿಯಮಿತ ನಿರ್ವಹಣೆ ಅಗತ್ಯ. ಅದೇ ಕಾರಣದಿಂದ ಅವುಗಳನ್ನು ಅಪ್ಡೇಟ್ ಮಾಡುವುದಕ್ಕಾಗಿ ಅಥವಾ ಬದಲಾಯಿಸಲು ಹೆಚ್ಚು ಹಣದ ಅಗತ್ಯವಿದೆ" ಎಂದು ಹೇಳಿದ್ದಾರೆ. ಅಲ್ಲದೇ ಈಗಾಗಲೇ ದುಬಾರಿ ಹಣ ವ್ಯಯ ಮಾಡುವ ಬದಲಿಗೆ, ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಅದೇ ಕಾರಣದಿಂದ ಕೆಲವು ಸ್ಥಳಗಳಲ್ಲಿ ವಿದ್ಯುತ್ ಸೇವೆಯನ್ನು ಕಡಿತಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.


Click it and Unblock the Notifications