ಬೆಂಗಳೂರು: ಭಾರತದ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Kempegowda Airport) ಕೂಡಾ ಒಂದು. ಭಾರತದ ಮೂರನೇ ಅತಿ ದಟ್ಟಣೆಯ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟರ್ಮಿನಲ್‌ಗಳ ನಡುವೆ ಸಂಚರಿಸುವುದು ಇನ್ಮೇಲೆ ಮತ್ತಷ್ಟು ಸರಳವಾಗಲಿದೆ. ಸ್ವಯಂಚಾಲಿತ ಪೀಪಲ್ ಮೂವರ್ (APM) ವ್ಯವಸ್ಥೆ ಬರಲಿದ್ದು, ವಿಮಾನ ನಿಲ್ದಾಣ ನಿರ್ವಾಹಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಗಮ ನಿಯಮಿತ (BIAL) ಈಗಾಗಲೇ ಬಿಡ್‌ಗಳನ್ನು ಆಹ್ವಾನಿಸಿದೆ.

ಏನಿದು ಏಪಿಎಂ ವ್ಯವಸ್ಥೆ?
ಏಪಿಎಂ ಎಂದರೆ ಆಟೋಮೇಟೆಡ್ ಪೀಪಲ್ ಮೂವರ್ (Automated People Mover). ಇದು ಒಂದು ಆಧುನಿಕ, ಡ್ರೈವರ್‌ಲೆಸ್ ರೈಲು ಅಥವಾ ಶಟಲ್ ವ್ಯವಸ್ಥೆಯಾಗಿದೆ. ವಿಮಾನ ನಿಲ್ದಾಣಗಳು, ದೊಡ್ಡ ಕ್ಯಾಂಪಸ್‌ಗಳಲ್ಲಿ ಅಥವಾ ನಗರಗಳಲ್ಲಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಇದು ಸಹಕಾರಿಯಾಗಲಿದೆ. ಇದೀಗ ಇದೇ ವ್ಯವಸ್ಥೆಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪರಿಚಯಿಸಲು ಸಜ್ಜಾಗಿದೆ. ಈ ಮೂಲಕ ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ನಡುವೆ ಸಂಪರ್ಕ ಕಲ್ಪಿಸಲಿದೆ.
ಏನಿದರ ವಿಶೇಷತೆ?
ಎಪಿಎಂಗಳು ಚಾಲಕರಹಿತ, ರೈಲು ಆಧಾರಿತ ಸಾರಿಗೆ ವ್ಯವಸ್ಥೆಗಳಾಗಿವೆ. ದೂರದ ಸ್ಥಳ ಮತು ಕಡಿಮೆ ಸಮಯಕ್ಕಾಗಿ ಇದು ಸಹಕಾರಿಯಾಗಲಿದೆ. ವಿಮಾನ ನಿಲ್ದಾಣ, ಥೀಮ್ ಪಾರ್ಕ್ ಅಥವಾ ದೊಡ್ಡ ದೊಡ್ಡ ಕ್ಯಾಂಪಸ್‌ಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿವೆ. ಮೊನೊರೈಲ್ ಅಥವಾ ರಬ್ಬರ್ ಟೈರ್‌ಗಳ ತಂತ್ರಜ್ಞಾನದಿಂದ ಟರ್ಮಿನಲ್‌ಗಳ ನಡುವೆ ಪ್ರಯಾಣಿಕರನ್ನು ಇದು ಸಾಗಿಸುತ್ತದೆ. ಅಮೆರಿಕ, ಚೀನಾ, ಮಲೇಷ್ಯಾ, ಸಿಂಗಾಪುರದ ಹಲವೆಡೆ ಇಂತಹ ಚಾಲಕರಹಿತ ವ್ಯವಸ್ಥೆ ಜಾರಿಯಲ್ಲಿದೆ.
ದೇಶದ ಮೊದಲ ವಿಮಾನ ನಿಲ್ದಾಣ!
ಕೆಐಎನಲ್ಲಿ ಎಪಿಎಂ ಅಳವಡಿಕೆಯ ಯೋಜನೆಗಳನ್ನು 2023ರ ಡಿಸೆಂಬರ್‌ನಲ್ಲಿ ಒಮ್ಮೆ ಘೋಷಣೆ ಮಾಡಲಾಗಿತ್ತು. ಇದೀಗ ಈ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಒಂದು ವೇಳೆ ಇದು ಕಾರ್ಯಾರಂಭ ಮಾಡಿದರೆ, ಸ್ವಯಂಚಾಲಿತ ಇಂಟರ್-ಟರ್ಮಿನಲ್ ಸಾರಿಗೆ ವ್ಯವಸ್ಥೆ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಬೆಂಗಳೂರು ಏರ್‌ಪೋರ್ಟ್ ಆಗಲಿದೆ.
ಪ್ರಸ್ತುತ, ಟರ್ಮಿನಲ್‌ಗಳ ನಡುವೆ ಪ್ರಯಾಣಿಕರನ್ನು ಸಾಗಿಸಲು ಎಲೆಕ್ಟ್ರಿಕ್ ಶಟಲ್ ಬಸ್‌ಗಳನ್ನು ಬಳಸಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಈ ಎಪಿಎಂ ವ್ಯವಸ್ಥೆ ಜಾರಿಗೆ ತರಲು ವಿಮಾನ ನಿಲ್ದಾಣ ಸಜ್ಜಾಗಿದೆ.
ಒಂದು ಯೋಜನೆ, ಹಲವು ಅನುಕೂಲ!
ಯೋಜನೆಯ ಹೆಸರು: ಇಂಟರ್‌ಟರ್ಮಿನಲ್ ಟ್ರಾನ್ಸಿಟ್ ಸಿಸ್ಟಮ್ (ITTS)
ದೂರ: ಸುಮಾರು 2.4 ಕಿ.ಮೀ (T1, T2 ನಡುವೆ)
ತಂತ್ರಜ್ಞಾನ: ಡ್ರೈವರ್‌ಲೆಸ್ ಎಲೆಕ್ಟ್ರಿಕ್ ಟ್ರೈನ್‌ಗಳು (ಬ್ಯಾಟರಿ ಅಥವಾ ಎಲೆಕ್ಟ್ರಿಕ್ ಪವರ್)
ಸಾಮರ್ಥ್ಯ: ಪ್ರತೀ ಗಂಟೆಗೆ ಸುಮಾರು 4,000-6000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.
ಇನ್ನು ಈ ಸೇವೆಯಿಂದ ಪ್ರಯಾಣಿಕರಿಗೆ ಸುಲಭ ಸಂಪರ್ಕ, ಬಸ್ ಅಥವಾ ಕ್ಯಾಬ್ ಬಳಸಬೇಕಿಲ್ಲ. ಇನ್ನು ಸಮಯವೂ ಉಳಿತಾಯವಾಗಲಿದೆ.
ಇನ್ನು ಈ ಯೋಜನೆಯನ್ನು 2023 ರಲ್ಲಿ ಘೋಷಣೆ ಮಾಡಲಾಗಿದ್ದು, ಕಾಮಗಾರಿ 2025 ರಲ್ಲಿ ಆರಂಭವಾಗಿದೆ. ಇನ್ನು ಇದರ ಪ್ರಥಮ ಹಂತದ ಕಾಮಗಾರಿ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಇನ್ನು ದ್ವಿತೀಯ ಹಂತದ ಕಾಮಗಾರಿ, ಭವಿಷ್ಯದಲ್ಲಿ ಟರ್ಮಿನಲ್ 3ಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ.


Click it and Unblock the Notifications