ಬರೋಬ್ಬರಿ 8 ಸಾವಿರ ಕೋಟಿಗೂ ಅಧಿಕ ಹಣ ಸುರಿದು ನಿರ್ಮಾಣವಾದ ಮೈಸೂರು ಎಕ್ಸ್‌ಪ್ರೆಸ್ ವೇ (Mysuru Expressway) ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಭಾರೀ ಫೇಮಸ್ ಆಗಿತ್ತು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿದೆ ಎನ್ನಲಾದ ಈ ಎಕ್ಸ್ ಪ್ರೆಸ್ ವೇ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದಿನಂಪ್ರತಿ ಲಕ್ಷಗಟ್ಟಲೆ ಜನ ಪ್ರಯಾಣಿಸುತ್ತಾರೆ. ಅದರಲ್ಲೂ ರಾತ್ರಿ ವೇಳೆ ಈ ರಸ್ತೆಯಲ್ಲಿ ಗಾಡಿಗಳ ರಾಶಿಯೇ ಇರುತ್ತದೆ. ಆದರೆ ಅಂಥಹ ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ (Bengaluru to Mysuru Expressway) ದರೋಡೆಕೋರರ ಆವಾಸಸ್ಥಾನವಾಗಿಬಿಟ್ಟಿದೆ. ರಾತ್ರಿ ವೇಳೆ ಸಂಚಾರ ಮಾಡೋ ಗಾಡಿಗಳೇ ಇವರ ಟಾರ್ಗೆಟ್.

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸುವವರಿಗೆ ಈ ದಶಪಥ ಹೆದ್ದಾರಿ ಭಾರೀ ಸಹಕಾರಿಯಾದರೂ, ಇದೀಗ ಪ್ರಯಾಣಿಕರಿಗೆ ಈ ರಸ್ತೆಯಲ್ಲಿ ಸಂಚರಿಸೋಕೆ ಭಯ ಆವರಿಸಿದೆ. ದಿನಕ್ಕೊಂದರಂತೆ ಈ ರಸ್ತೆಯಲ್ಲಿ ಅಪಘಾತಗಳ ಸುದ್ದಿಗಳು ಕೇಳಿಬರುತ್ತಿತ್ತು. ಆದ್ರೆ ಸದ್ಯ ಈ ಎಕ್ಸ್‌ಪ್ರೆಸ್‌ವೇ ಖತರ್ನಾಕ್ ಕಳ್ಳರ ಅಡ್ಡೆಯಾಗಿಬಿಟ್ಟಿದೆ. ಪ್ರಯಾಣಿಕರಿಗೆ ರಕ್ಷಣೆಯೇ ಇಲ್ವಾ ಎಂಬ ಪ್ರಶ್ನೆ ಮೂಡಿದೆ.
ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಖತರ್ನಾಕ್ ಕಳ್ಳರು!
2023 ರಲ್ಲಿ ಪ್ರಧಾನಿ ಮೋದಿಯವರು ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್‌ವೇಗೆ ಚಾಲನೆ ಕೊಟ್ಟಿದ್ದರು. ಪ್ರಯಾಣಿಕರ ನೆಚ್ಚಿನ ರಸ್ತೆಯಾಗಿದ್ದ ಮೈಸೂರು ಎಕ್ಸ್‌ಪ್ರೆಸ್ ವೇ ಸದ್ಯ ದರೋಡೆಕೋರರ ಅಡ್ಡೆಯಾಗಿಬಿಟ್ಟಿದೆ. ರಾತ್ರಿಯಾದ್ರೆ ಸಾಕು ಖತರ್ನಾಕ್ ಕಳ್ಳ್ರ ಗುಂಪೊಂದು ಈ ಮಾರ್ಗಕ್ಕೆ ಎಂಟ್ರಿಕೊಡುತ್ತೆ. ವಿಶ್ರಾಂತಿಗಾಗಿ ಗಾಡಿ ನಿಲ್ಲಿಸಿರುವ ಪ್ರಯಾಣಿಕರನ್ನು ಗುರಿಯಾಗಿಸಿ, ದರೋಡೆ ಮಾಡುತ್ತಾರೆ ಎನ್ನಲಾಗಿದೆ.
ಒಂದು ವರ್ಷ, 27 ದರೋಡೆ!
ಬೆಂಗಳೂರು ಟು ಮೈಸೂರು ರಸ್ತೆಯಲ್ಲಿ ಜನರ ಓಡಾಟ ಪ್ರಾರಂಭವಾದಾಗಿನಿಂದ ಇದುವರೆಗೆ ಒಟ್ಟು 27 ದರೋಡೆ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ. ಅದರಲ್ಲೂ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲೇ 15 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ 12 ಪ್ರಕರಣಗಳು ದಾಖಲಾಗಿವೆ. ಆದರೆ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗೆ ಚಳ್ಳೆಹಣ್ಣು ತಿನ್ನಿಸಿದ ಖದೀಮರು!
ಬೆಂಗಳೂರು ಟು ಮೈಸೂರು ರಸ್ತೆಯಲ್ಲಿ ಇತ್ತೀಚೆಗೆ ಪೊಲೀಸ್ ಅಧಿಕಾರಿಯನ್ನೂ ದರೋಡೆಕೋರರು ಬಿಟ್ಟಿರಲಿಲ್ಲ. ತಮಿಳುನಾಡು ಮೂಲದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ (PSI) ಅಕ್ಟೋಬರ್ 7ರಂದು ಮುಂಜಾನೆ 2 ಗಂಟೆ ಸುಮಾರಿಗೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯ ಬಳಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮೂವರು ಖದೀಮರು ಪಿಎಸ್‌ಐ ಮೇಲೆ ದಾಳಿ ಮಾಡಿ ಅವರಲ್ಲಿದ್ದ ಚಿನ್ನ, ನಗದು ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದರು. ಅಲ್ಲದೇ ಅದೇ ಸ್ಥಳದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬೆಳಕಿಗೆ ಬಂದಿತ್ತು.
ಕಳ್ಳರ ಆಟಕ್ಕೆ ಕಾರಣವೇನು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತನ್ನ ಯೋಜನೆಯಂತೆ ಕೇವಲ ರಸ್ತೆಯನ್ನು ಮಾತ್ರ ನಿರ್ಮಿಸಿದೆ ಹೊರತು, ಅದಕ್ಕೆ ಬೇಕಾದ ಮೂಲಸೌಲಭ್ಯಗಳನ್ನು ನಿರ್ಮಾಣ ಮಾಡದೆ ಇರುವುದೇ ಈ ಘಟನೆಗಳಿಗೆ ಮುಖ್ಯ ಕಾರಣ. 119 ಕಿ.ಮೀ. ಉದ್ದದ ಈ ಎಕ್ಸ್‌ಪ್ರೆಸ್ ವೇನಲ್ಲಿ ಅಧಿಕೃತವಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಒಂದೇ ಒಂದು ಶೌಚಾಲಯ, ವಿಶ್ರಾಂತಿ ಸ್ಥಳ, ಹೋಟೆಲ್‌ಗಳಿಲ್ಲ. ಈ ಪರಿಣಾಮ ವಾಹನ ಸವಾರರು ರಸ್ತೆ ಬದಿಯಲ್ಲೇ ನಿಂತು ವಿಶ್ರಾಂತಿ ಪಡೆಯುವಂತಾಗಿದೆ. ಇದನ್ನೇ ಲಾಭವಾಗಿಟ್ಟುಕೊಂಡು ಕಳ್ಳಖದೀಮರು, ಅಮಾಯಕ ಜನರನ್ನು ಗುರಿಯಾಗಿಸಿ ಹಣ, ಚಿನ್ನ ಲೂಟಿ ಮಾಡುತ್ತಿದ್ದಾರೆ.


Click it and Unblock the Notifications