ಟೈಮ್ ಮ್ಯಾಗಜೀನ್ ಮತ್ತು ಆನ್‌ಲೈನ್ ಡೇಟಾ ಪ್ಲಾಟ್‌ಫಾರ್ಮ್ ಸ್ಟ್ಯಾಟಿಸ್ಟಾ ಸಂಗ್ರಹಿಸಿದ 2023 ರ ವಿಶ್ವದ ಅತ್ಯುತ್ತಮ ಕಂಪನಿಗಳ ಟಾಪ್ 100 ಪಟ್ಟಿಯಲ್ಲಿ ಕೇವಲ ಒಂದೇ ಒಂದು ಭಾರತೀಯ ಕಂಪನಿ ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಯನ್ನು ಐಟಿ ದೈತ್ಯ ಇನ್ಫೋಸಿಸ್ ಲಿಮಿಟೆಡ್ ಪಡೆದುಕೊಂಡಿದೆ.
ಮೈಕ್ರೋಸಾಫ್ಟ್, ಆಪಲ್, ಆಲ್ಫಾಬೆಟ್ (ಗೂಗಲ್ ಅನ್ನು ಹೊಂದಿರುವ ಕಂಪನಿ) ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳಂತಹ (ಹಿಂದೆ ಫೇಸ್‌ಬುಕ್) ಟೆಕ್ ಕಂಪನಿಗಳು ಅಗ್ರಸ್ಥಾನದಲ್ಲಿರುವ ಪಟ್ಟಿಯಲ್ಲಿ ಇನ್ಫೋಸಿಸ್ 64 ನೇ ಸ್ಥಾನದಲ್ಲಿದೆ. ಟೈಮ್ ಮ್ಯಾಗಜೀನ್ ಮತ್ತು ಸ್ಟ್ಯಾಟಿಸ್ಟಾ ವಿಶ್ವದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ ಒಟ್ಟು 750 ಕಂಪನಿಗಳನ್ನು ಪಟ್ಟಿ ಮಾಡಿದೆ.

ಆದಾಯದ ಬೆಳವಣಿಗೆ, ಉದ್ಯೋಗಿಗಳ ತೃಪ್ತಿ ಸಮೀಕ್ಷೆಗಳು ಮತ್ತು ಉದ್ಯೋಗ ಪರಿಸರ, ಸಾಮಾಜಿಕ ಮತ್ತು ಕಾರ್ಪೊರೇಟ್ ಆಡಳಿತ ಮೊದಲಾದವುಗಳನ್ನು ಪರಿಶೀಲನೆ ಮಾಡಿಕೊಂಡು ಈ ಪಟ್ಟಿಯನ್ನು ತಯಾರಿ ಮಾಡಲಾಗಿದೆ. ಟೆಕ್ ಮತ್ತು ವ್ಯಾಪಾರ ಸೇವೆಗಳ ಕಂಪನಿಗಳು ವೇಗವಾಗಿ ಬೆಳೆಯುತ್ತಿದೆ. ಆದರೆ ಉತ್ಪಾದನ ಮತ್ತು ಗ್ರಾಹಕ ಸರಕುಗಳ ಕಂಪನಿಗಳು ಮಾತ್ರ ಈ ಪಟ್ಟಿಯಲ್ಲಿ ಈ ಹಿಂದೆ ಇದ್ದ ಸ್ಥಾನದಿಂದ ಕೆಳಕ್ಕೆ ಇಳಿದಿರುವುದು ಕಂಡು ಬಂದಿದೆ.
"ಟೆಕ್ ಕಂಪನಿಗಳು ಉತ್ತಮವಾಗಿ ಬೆಳವಣಿಗೆಯನ್ನು ಕಾಣುತ್ತಾ ಬಂದಿದೆ. ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು ಅಥವಾ ದೊಡ್ಡ ಉತ್ಪಾದಕ ಸಂಸ್ಥೆಗಳಿಂದ ಪರಿಸರಕ್ಕೆ ಇಂಗಾಲ ಹರಡುವುದು ಅಧಿಕ. ಆದರೆ ಟೆಕ್ ಕಂಪನಿಗಳಿಂದ ಈ ಸಮಸ್ಯೆ ಅತೀ ಕಡಿಮೆ," ಎಂದು ಟೈಮ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
"ಆದರೆ ಉತ್ಪಾದನಾ ಸಂಸ್ಥೆಗಳ ಉದ್ಯೋಗಿಗಳು ಹೆಚ್ಚಾಗಿ ಸಂತೋಷವಾಗಿರುವ ಕಾರಣ ಈ ಸಂಸ್ಥೆಗಳು ಉತ್ತಮ ಶ್ರೇಣಿಯನ್ನು ಹೊಂದಿದೆ. ಟಾಪ್ 4 ಸಂಸ್ಥೆಗಳು ಉದ್ಯೋಗಿ ಶ್ರೇಯಾಂಕಗಳಲ್ಲಿ ಉತ್ತಮ ಶ್ರೇಣಿಯನ್ನು ಪಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ಸಂಸ್ಥೆಗಳು ಅಗಾಧ ಆರ್ಥಿಕ ಲಾಭಗಳನ್ನು ಕಂಡಿದೆ. ಹಾಗೆಯೇ ಪರಿಸರ ಮಾಲಿನ್ಯ ಕಡಿಮೆ ಮಾಡುವುದು ಮತ್ತು ಮಹಿಳೆಯರನ್ನು ನೇಮಕ ಮಾಡುವ ವಿಚಾರದಲ್ಲಿ ಉತ್ತಮ ಪಾತ್ರ ವಹಿಸುತ್ತಿದೆ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
ಟಾಪ್ 750 ಕಂಪನಿಗಳಲ್ಲಿ ಭಾರತದ ಕಂಪನಿಗಳೆಷ್ಟು?
ಇನ್ಫೋಸಿಸ್ ಜೊತೆಗೆ ಟೈಮ್‌ನ ಟಾಪ್ 750 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಏಳು ಇತರ ಭಾರತೀಯ ಕಂಪನಿಗಳು ಕೂಡಾ ಇದೆ. ವಿಪ್ರೋ ಲಿಮಿಟೆಡ್ 174 ನೇ ಸ್ಥಾನದಲ್ಲಿದೆ. ಮಹೀಂದ್ರಾ ಗ್ರೂಪ್ 210 ನೇ ಸ್ಥಾನದಲ್ಲಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 248 ನೇ ಸ್ಥಾನದಲ್ಲಿದೆ. ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ 262 ನೇ ಸ್ಥಾನದಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್ 418 ನೇ ಸ್ಥಾನದಲ್ಲಿದೆ.
ಇನ್ನು ಡಬ್ಲ್ಯುಎನ್‌ಎಸ್ ಗ್ಲೋಬಲ್ ಸರ್ವಿಸಸ್ 596 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, ಐಟಿಸಿ ಲಿಮಿಟೆಡ್ 672 ನೇ ಸ್ಥಾನದಲ್ಲಿದೆ. ಆದರೆ ಟಾಪ್ 100 ಪಟ್ಟಿಯಲ್ಲಿ ಭಾರತದ ಏಕೈಕ ಸಂಸ್ಥೆ ಇನ್ಫೋಸಿಸ್ ಮಾತ್ರ ಕಾಣಿಸಿಕೊಂಡಿದೆ. ಟಾಪ್ 50 ಯಲ್ಲಿರುವ ಸಂಸ್ಥೆಗಳಲ್ಲಿ ನಾವು ನೋಡಿದಾಗ ಯಾವುದೇ ಭಾರತೀಯ ಸಂಸ್ಥೆ ಇಲ್ಲ. ಇನ್ಪೋಸಿಸ್ 64 ನೇ ಸ್ಥಾನದಲ್ಲಿದೆ.


Click it and Unblock the Notifications