ದುಬಾರಿ ದುನಿಯಾದಲ್ಲಿ, ಎಲ್ಲವೂ ಇಂದು ದುಬಾರಿಯಾಗಿಬಿಟ್ಟಿದೆ. ಅದರಲ್ಲೂ ಇದೀಗ ತರಕಾರಿ ಬೆಲೆಯೂ ಗಗನಕ್ಕೇರಿದ್ದು, ಜನರಿಗೆ ಹುಳಿಯಿಂದ ಸ್ವಲ್ಪ ಖಾರವಾದಂತಾಗಿದೆ. ಹೌದು, ಕಳೆದ 10-15 ದಿನಗಳಲ್ಲಿ ಟೊಮೆಟೊ ಬೆಲೆಯಲ್ಲಿ ಸುಮಾರು 50% ಏರಿಕೆಯಾಗಿದೆ ಎಂದು ವರದಿಯಾಗಿದೆ. ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಕೂಡಾ ಭಾರೀ ನಷ್ಟ ಅನುಭವಿಸಿದ್ದಾರೆ. ಈ ಮಧ್ಯೆ ಪೂರೈಕೆ ಪ್ರಮಾಣವೂ ಕಡಿಮೆಯಾಗಿದ್ದರಿಂದ ಈ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಸರ್ಕಾರಿ ಮಾಹಿತಿಗಳ ಪ್ರಕಾರ, ಟೊಮೆಟೊಗಳ (Tomato Price Hike) ಚಿಲ್ಲರೆ ಬೆಲೆಗಳು ವಿವಿಧ ರಾಜ್ಯಗಳಲ್ಲಿ ತಿಂಗಳಲ್ಲಿ 25% ರಿಂದ 100% ವರೆಗೆ ಹೆಚ್ಚಾಗಿವೆ ಎಂದು ವರದಿಯಾಗಿದೆ.

ಗಗನಕ್ಕೇರಿದ ಟೊಮೆಟೋ ಬೆಲೆ!
ಟೊಮೆಟೋ ಬೆಲೆಯಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡ ರಾಜ್ಯವಾದ ಮಹಾರಾಷ್ಟ್ರದಲ್ಲಿ ಸಗಟು ಬೆಲೆಗಳು 45% ಏರಿಕೆಯಾದರೆ, ಉತ್ತರ ಭಾರತದ ಅತಿದೊಡ್ಡ ವಿತರಣಾ ಕೇಂದ್ರವಾಗಿ ಗುರುತಿಸಿಕೊಂಡಿರುವ ದೆಹಲಿಯಲ್ಲಿ 26% ಜಿಗಿದಿವೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ವರದಿಯಂತೆ, ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಅಕ್ಟೋಬರ್ 19 ರಿಂದ ನವೆಂಬರ್ 19 ರವರೆಗೆ 27% ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದು ಪ್ರತಿ ಕೆ.ಜಿ.ಗೆ ₹36 ರಿಂದ ₹46 ಕ್ಕೆ ತಲುಪಿದೆ.
ಚಂಡೀಗಢದಲ್ಲಿ ಅತ್ಯಧಿಕ 112% ಏರಿಕೆ ದಾಖಲಾಗಿದ್ದರೆ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಮಾಸಿಕ 40% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಅದರಲ್ಲೂ ಹಲವು ಸ್ಥಳಗಳಲ್ಲಿ, ಉತ್ತಮ ಗುಣಮಟ್ಟದ ಟೊಮೆಟೊಗಳು ಈಗ ಪ್ರತಿ ಕೆ.ಜಿ.ಗೆ ಸುಮಾರು ₹80 ಕ್ಕೆ ಮಾರಾಟವಾಗುತ್ತಿವೆ.
ಬೆಲೆ ಏರಿಕೆಗೆ ಕಾರಣವೇನು?
ಈಗಾಗಲೇ ಮದುವೆ ಸೀಸನ್ ಆರಂಭವಾಗಿದೆ. ಹಲವು ಕಡೆಗಳಲ್ಲಿ ವಿವಾಹ ಸಮಾರಂಭಗಳು ಮತ್ತು ವರ್ಷಾಂತ್ಯದ ಹಬ್ಬಗಳು ಸಹ ಬರುತ್ತಿದೆ. ಇದೇ ಕಾರಣದಿಂದ ಟೊಮೆಟೊಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಬೆಲೆ ಕೂಡಾ ಏರಿಕೆಯಾಗಲು ಕಾರಣವಾಗಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಾ ತೀವ್ರ ಕುಸಿತದಿಂದಾಗಿ, ಚಿಲ್ಲರೆ ಹಣದುಬ್ಬರವು 0.25% ಕ್ಕೆ ಇಳಿದಿತ್ತು. ಇದು 2013 ರ ನಂತರ ಬಂದ ಕನಿಷ್ಠ ಕುಸಿತವಾಗಿದೆ. ಅಕ್ಟೋಬರ್‌ನಲ್ಲಿ ಟೊಮೆಟೊ ಹಣದುಬ್ಬರ -42.9% ರಷ್ಟಿದ್ದರೆ, ಈರುಳ್ಳಿ ಮತ್ತು ಆಲೂಗಡ್ಡೆಗಳ ಹಣದುಬ್ಬರ ಕ್ರಮವಾಗಿ -54.3% ಮತ್ತು -36.6% ರಷ್ಟಿತ್ತು. ಆದರೆ ಇದೀಗ ಕಡಿಮೆ ಪೂರೈಕೆಯಿಂದಾಗಿ ಮತ್ತೆ ಏರಿಕೆಯ ಹಾದಿ ಹಿಡಿದಿದೆ.
"ಕಳೆದ ವಾರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಆಜಾದ್‌ಪುರ್ ಮಾರುಕಟ್ಟೆಗೆ ಪೂರೈಕೆಯ ಟ್ರಕ್‌ಗಳು ಅರ್ಧಕ್ಕಿಂತಲೂ ಕಡಿಮೆಯಾಗಿತ್ತು ಎಂದು ವರದಿಯಾಗಿದೆ. ಅಲ್ಲದೇ ಅತಿಯಾದ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಬೆಳೆಗಳು ಹಾಳಾಗಿವೆ. ಇದೇ ಕಾರಣದಿಂದ ಪೂರೈಕೆಯಲ್ಲಿ ಕೊರತಡೆ ಉಂಟಾಗಿದೆ" ಎಂದು ಆಜಾದ್‌ಪುರ್ ಟೊಮೆಟೊ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ್ ಕೌಶಿಕ್ ತಿಳಿಸಿದ್ದಾರೆ.


Click it and Unblock the Notifications