ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ (Pakistan-Afghanistan) ನಡುವೆ ಅಕ್ಟೋಬರ್ ಆರಂಭದಲ್ಲೇ ಭಾರೀ ಘರ್ಷಣೆ ಉಂಟಾಗಿತ್ತು. ನೆರೆಯ ರಾಷ್ಟ್ರಗಳೊಂದಿಗೆ ಕಾಲು ಕೆರೆದುಕೊಂಡು ಜಗಳ ಸೃಷ್ಟಿಸುತ್ತಿದ್ದ ಪಾಕಿಸ್ತಾನಕ್ಕೆ ಕೆಲ ತಿಂಗಳ ಹಿಂದಷ್ಟೇ ಭಾರತ ತಕ್ಕ ಶಾಸ್ತಿ ಮಾಡಿತ್ತು. ಇದೀಗ ಅಫ್ಘಾನಿಸ್ತಾನದ ಜೊತೆಗೆ ಸಮರಕ್ಕೆ ಇಳಿದಿದ್ದ ಪಾಕ್‌ಗೆ ತಾಲಿಬಾನ್ ಸರ್ಕಾರ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದೀಗ ಅಫ್ಘಾನಿಸ್ತಾನ ಮತ್ತು ಪಾಕ್ ನಡುವೆ ಗಡಿ ಮುಚ್ಚಲಾಗಿದೆ. ಈ ಪರಿಣಾಮ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟಿಗಳು ಸ್ಥಗಿತವಾಗಿದೆ.

ಪಾಕಿಸ್ತಾನ ಮತ್ತು ಅಫ್ಘಾನ್ ಗಡಿ ಬಂದ್ ಆಗಿರುವುದರ ಪರಿಣಾಮ, ಎರಡೂ ದೇಶಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ವಿಶೇಷವಾಗಿ ಟೊಮೆಟೊ ಬೆಲೆ ಏರಿಕೆ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರ ಜಗಳದಿಂದಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದ್ದು, ಕೆಲವು ಮಾರುಕಟ್ಟೆಗಳಲ್ಲಿ ಒಂದು ಕಿಲೋ ಟೊಮೆಟೊ ಬೆಲೆಯೇ 550 ರಿಂದ 600 ಪಾಕಿಸ್ತಾನಿ ರೂಪಾಯಿಗಳಿಗೆ (PKR) ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ. ಅಂದರೆ ಸಾಮಾನ್ಯ ಬೆಲೆಗೆ ಹೋಲಿಸಿದ್ರೆ ಪಾಕ್‌ನಲ್ಲಿ ಸದ್ಯ ಸುಮಾರು ಶೇ. 400% ಹೆಚ್ಚಾಗಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು:
ಗಡಿ ಬಂದ್, ಆಮದು ಸ್ಥಗಿತ: ಅಕ್ಟೋಬರ್ ಆರಂಭದಲ್ಲಿ ಎರಡು ದೇಶಗಳ ನಡುವೆ ಶುರುವಾದ ಘರ್ಷಣೆ ಇದೀಗ ವ್ಯಾಪಾರಕ್ಕೂ ತಟ್ಟಿದೆ. ಅಫ್ಘಾನಿಸ್ತಾನದಿಂದ ಬರುತ್ತಿದ್ದ ವಸ್ತುಗಳಿಗೆ ಪಾಕ್ ಆಮದು ನಿಲ್ಲಿಸಿದ್ದು ಮತ್ತು ಸ್ಥಳೀಯ ಬೆಳೆಗಳಿಗೆ ಹಾನಿಯಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಅಕ್ಟೋಬರ್ 11 ರಂದು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ನಂತರ, ಟೋರ್ಖಮ್ ಮತ್ತು ಚಮನ್‌ನಂತಹ ಪ್ರಮುಖ ವ್ಯಾಪಾರ ಮಾರ್ಗಗಳನ್ನು ತಕ್ಷಣ ಮುಚ್ಚುವಂತೆ ಕ್ರಮ ತೆಗೆದುಕೊಳ್ಳಲಾಯಿತು. ಇಸ್ಲಾಮಾಬಾದ್ ಕಾಬೂಲ್ ಮೇಲೆ ನಡೆಸಿದ ದಾಳಿಯನ್ನು ಭಯೋತ್ಪಾದಕ ದಾಳಿಯೆಂದು ಆರೋಪ ಮಾಡಿದ ನಂತರ, ಎರಡೂ ದೇಶಗಳ ನಡುವಿನ ವ್ಯಾಪಾರ ಕೂಡಾ ಸ್ಥಗಿತಗೊಳಿಸಲಾಯಿತು.
ಇದೀಗ ಎರಡೂ ರಾಷ್ಟ್ರಗಳ ನಡುವಿನ ಗಡಿ ಬಂದ್ ಆಗಿರುವುದರಿಂದ ಅಫ್ಘಾನಿಸ್ತಾನದಿಂದ ಟೊಮೆಟೊ ಆಮದು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಸುಮಾರು 5,000 ಕಂಟೇನರ್‌ಗಳು ಗಡಿಯಲ್ಲೇ ಸಿಲುಕಿಕೊಂಡಿದ್ದು, ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್‌ನಲ್ಲಿ ಯಾವುದೇ ರೀತಿಯಲ್ಲಿ ಹಂಚಿಕೆಯಾಗುತ್ತಿಲ್ಲ.
ಸ್ಥಳೀಯ ಬೆಳೆಗಳಿಗೆ ಹಾನಿ:
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ, ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಪ್ರವಾಹ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಸ್ಥಳೀಯ ಬೆಳೆಗಳಿಗೆ ಇತ್ತೀಚೆಗೆ ಭಾರೀ ಹಾನಿಯಾಗಿತ್ತು. ಅಷ್ಟೇ ಅಲ್ಲದೇ ಹಿಂದೆ ಲಾಹೋರ್‌ನ ಬಾದಾಮಿ ಬಾಗ್ ಮಂಡಿಗೆ ಪ್ರತಿದಿನ 30 ಕ್ಕೂ ಅಧಿಕ ಟ್ರಕ್‌ಗಳಷ್ಟು ಟೊಮ್ಯಾಟೋ ಆಮದು ಆಗುತ್ತಿತ್ತು. ಆದ್ರೆ ಈಗ ಕೇವಲ 15 ರಿಂದ 20 ಟ್ರಕ್‌ಗಳು ಮಾತ್ರ ಬರುತ್ತಿವೆ.
ಇರಾನ್‌ನಿಂದ ಪೂರೈಕೆಯಲ್ಲಿ ಇಳಿಕೆ: ಅಷ್ಟೇ ಅಲ್ಲದೇ ಬಲೂಚಿಸ್ತಾನದ ಬೆಳೆಗಳ ಕೊಯ್ಲು ಕೂಡಾ ಅಂತ್ಯಗೊಂಡಿದೆ. ಈಕಡೆ ಇರಾನ್‌ನಿಂದ ಪೂರೈಕೆಯೂ ನಿಧಾನಗೊಂಡಿದೆ. ಇದರಿಂದ ಪಾಕಿಸ್ತಾನದಲ್ಲಿ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣದಿಂದ ಸದ್ಯ ಲಾಭ ಪಡೆಯುವ ಉದ್ದೇಶದಿಂದ, ಸಗಟು ವ್ಯಾಪಾರಿಗಳು ಬೆಲೆಗಳನ್ನು ಹೆಚ್ಚಿಸಿದ್ದಾರೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ.
ಟೊಮೆಟೊ ಮಾತ್ರವಲ್ಲದೆ, ಇತರೆ ತರಕಾರಿಗಳ ಬೆಲೆಗಳೂ ಭಾರೀ ಏರಿಕೆಯಾಗಿದೆ. ಬೆಳ್ಳುಳ್ಳಿ 400, ಸೌತೆಕಾಯಿ 150, ಶುಂಠಿ 750, ಈರುಳ್ಳಿ 120, ಬೆಂಡೆಕಾಯಿ 300, ಬಟಾಣಿ 500, ನಿಂಬೆ 300, ಒಂದು ಕಟ್ಟು ಕೊತ್ತಂಬರಿ ಸೊಪ್ಪು 50, ಕೆಂಪು ಕ್ಯಾರೆಟ್ 200 ಮತ್ತು ಕ್ಯಾಪ್ಸಿಕಂ 300 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಬೆಲೆ ಏರಿಕೆ ಇದೇ ಮೊದಲಲ್ಲ!
ಟೊಮೆಟೊ ಬೆಲೆಗಳ ಏರಿಕೆ ಇದೇ ಮೊದಲಲ್ಲ, ಈ ಹಿಂದೆಯೂ ಬೆಲೆಯಲ್ಲ ಏರಿಳಿತಗಳಾಗಿತ್ತು. 2011 ರಲ್ಲೊಮ್ಮೆ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಾಗ, ಆ ಸಂದರ್ಭದಲ್ಲಿ ಭಾರತದಿಂದ ಟೊಮೆಟೊ ಪೂರೈಕೆ ಮಾಡಲಾಗಿತ್ತು. ಈ ಬೆಲೆ ಏರಿಕೆ ಬಿಸಿ ಭಾರತಕ್ಕೂ ತಟ್ಟಿತ್ತು.


Click it and Unblock the Notifications