ಭಾರತದಾದ್ಯಂತ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸರಬರಾಜು ಕೊರತೆ, ಹವಾಮಾನ ವೈಪರೀತ್ಯದಿಂದಾಗಿ ಟೊಮೆಟೊ ಲಭ್ಯತೆ ಕಡಿಮೆಯಾಗಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ತಿಂಗಳು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವಿದ್ದು, ಅದು ಕೂಡಾ ಟೊಮೆಟೊ ಬೆಳೆಯ ಮೇಲೆ ಪ್ರಭಾವ ಉಂಟು ಮಾಡಿದೆ.
ಈ ಎಲ್ಲ ಬೆಳವಣಿಗೆಯಿಂದಾಗಿ ಟೊಮೆಟೊ ದರವು ಒಂದು ತಿಂಗಳ ಅವಧಿಯಲ್ಲಿ ಭಾರತದಾದ್ಯಂತ ಐದು ಪಟ್ಟು ಅಧಿಕವಾಗಿದೆ. ಕೆಲವು ಪ್ರದೇಶಗಳಲ್ಲಿ ಪ್ರತಿ ಕೆಜಿ ಟೊಮೆಟೊ ದರವು 100ರ ಆಸುಪಾಸಿನಲ್ಲಿದ್ದರೆ, ಕೆಲವೆಡೆ 150 ರೂಪಾಯಿಯ ಆಸುಪಾಸಿನಲ್ಲಿದೆ. ಇನ್ನು ಕೆಲವೆಡೆ 250 ರೂಪಾಯಿಗೂ ತಲುಪಿದೆ. ಈ ಎಲ್ಲ ಬೆಳವಣಿಗೆ ನಡುವೆ ಬರ್ಗರ್ ಮೊದಲಾದ ಆಹಾರ ಉತ್ಪನ್ನಗಳನ್ನು ತಯಾರಿ ಮಾಡುವ ಮೆಕ್‌ಡೊನಾಲ್ಡ್ಸ್ ಮೆನ್ಯೂವಿನಿಂದ ಟೊಮೆಟೊ ಕಣ್ಮರೆಯಾಗಿದೆ!

ಮೆನ್ಯೂವಿನಿಂದ ಟೊಮೆಟೊವನ್ನು ಕೈಬಿಡುವ ನಿರ್ಧಾರ
ಜೂನ್ ಹಾಗೂ ಜುಲೈ ತಿಂಗಳಲ್ಲಿ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಈ ವರ್ಷ ಪೂರ್ತಿ ದರವು ಅಧಿಕವಾಗಿಯೇ ಇರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ದರ ಹೆಚ್ಚಳವಾಗುತ್ತಿರುವ ನಡುವೆ ಮೆಕ್‌ಡೊನಾಲ್ಡ್ಸ್ ಇಂಡಿಯಾ ತಮ್ಮ ಮೆನ್ಯೂವಿನಿಂದ ಟೊಮೆಟೊವನ್ನು ಕೈಬಿಡುವ ನಿರ್ಧಾರವನ್ನು ಮಾಡಿದೆ. ಸರಬರಾಜು ಕೊರತೆ ಹಾಗೂ ಗುಣಮಟ್ಟದ ಕಾರಣದಿಂದಾಗಿ ವ್ರಾಪ್ಸ್ ಹಾಗೂ ಬರ್ಗರ್‌ಗಳಿಗೆ ಮೆಕ್‌ಡೊನಾಲ್ಡ್ಸ್ ಟೊಮೆಟೊ ಬಳಕೆಯನ್ನು ನಿಲ್ಲಿಸಿದೆ.
ಈ ಬಗ್ಗೆ ದೆಹಲಿಯ ಎರಡು ಮೆಕ್‌ಡೊನಾಲ್ಡ್ಸ್ ಸ್ಟೋರ್‌ಗಳಲ್ಲಿ ನೋಟಿಸ್ ಅನ್ನು ಅಂಟಿಸಲಾಗಿದೆ. "ನಮ್ಮ ಅಧಿಕ ಪ್ರಯತ್ನದ ಹೊರತಾಗಿಯೂ ಗುಣಮಟ್ಟ ಪರಿಶೀಲನೆ ಮಾಡಿದ ಬಳಿಕ ನಾವು ಅಗತ್ಯವಿರುವಷ್ಟು ಟೊಮೆಟೊ ಸರಬರಾಜನ್ನು ಪಡೆಯಲು ಸಾಧ್ಯವಾಗುತ್ತಿಲ್ಲ," ಎಂದು ಉಲ್ಲೇಖ ಮಾಡಲಾಗಿದೆ. ಹಾಗೆಯೇ "ತಾತ್ಕಾಲಿಕವಾಗಿ ಟೊಮೆಟೊ ಲಭ್ಯವಿಲ್ಲ" ಎಂದು ಕೂಡಾ ತಿಳಿಸಲಾಗಿದೆ.
"ಟೊಮೆಟೊ ಸರಬರಾಜು ಕೊರತೆ ಇರುವ ಕಾರಣದಿಂದಾಗಿ ನಾವು ಟೊಮೆಟೊ ಇಲ್ಲದೆಯೇ ನಮ್ಮ ಆಹಾರ ಉತ್ಪನ್ನವನ್ನು ಸರ್ವ್ ಮಾಡಬೇಕಾಗುತ್ತದೆ. ನಾವು ಟೊಮೆಟೊ ಸರಬರಾಜು ಮತ್ತೆ ಪಡೆಯಲು ಪ್ರಯತ್ನ ಮಾಡುತ್ತಿದ್ದೇವೆ ಎಂಬ ಭರವಸೆ ನೀಡುತ್ತೇವೆ," ಎಂದು ಮೆಕ್‌ಡೊನಾಲ್ಡ್ಸ್ ನೋಟಿಸ್‌ನಲ್ಲಿ ಹೇಳಲಾಗಿದೆ. ಈ ನಡುವೆ ಟೊಮೆಟೊ ಬಗ್ಗೆ ಸಾಕಷ್ಟು ಟ್ರೋಲ್ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಟೊಮೆಟೊ ಟ್ರೋಲ್
ಸೆಬಿ ರಿಜಿಸ್ಟಾರ್ ಆದ ಹೂಡಿಕೆ ಸಲಹೆಗಾರ ಆದಿತ್ಯ ಶಾ ಟ್ವೀಟ್ ಒಂದನ್ನು ಮಾಡಿದ್ದಾರೆ. "ಈ ನಡುವೆ ವೆಸ್ಟ್‌ಲೈಫ್ ಫುಡ್‌ವರ್ಲ್ಡ್, ಭಾರತದ ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳ ಮೆಕ್‌ಡೊನಾಲ್ಡ್ಸ್ ಫ್ರಾಂಚೈಸಿ, 357 ರೆಸ್ಟೋರೆಂಟ್‌ಗಳೊಂದಿಗೆ, "ಯಾವುದೇ ಗಂಭೀರವಾದ ಟೊಮೆಟೊ ಸಂಬಂಧಿತ ಸಮಸ್ಯೆಗಳಿಲ್ಲ" ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಬಿಗ್‌ಬಾಸ್ಕೆಟ್‌ನಲ್ಲಿ ಶಾಪಿಂಗ್ ಮಾಡುವಾಗ "ಟೊಮೆಟೊ ದರವು ಹೆಚ್ಚಳವಾಗುತ್ತಿದ್ದೆಯೇ? ಟೊಮೆಟೊ ಪ್ಯೂರಿ ಬಳಸಿ ಅಡುಗೆ ಮಾಡಿ" ಎಂದು ಜಾಹೀರಾತು ತೋರಿಸಲಾಗುತ್ತಿದೆ ಎಂದು ವರದಿಯಾಗಿದೆ. ಇನ್ನು ಸಿದ್ಧಾರ್ಥ್ ಅರೋರಾ ಎಂಬವರು ಟ್ವೀಟ್ ಮಾಡಿದ್ದು, ಮೆಕ್‌ಡೊನಾಲ್ಡ್ಸ್‌ಗೆ ಟೊಮೆಟೊ ನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈರುಳ್ಳಿ ಬೆಲೆಯು ಕೂಡಾ ಅಧಿಕವಾದರೆ ಬರ್ಗರ್‌ನಲ್ಲಿ ನಮಗೆ ಏನು ಇರದು ಎಂದು ಹೇಳಿಕೊಳ್ಳುವವರು ಕೂಡಾ ಇದ್ದಾರೆ.
ಟೊಮೆಟೊ ದರವು ಈಗಾಗಲೇ ಗಗನಕ್ಕೆ ಏರಿದೆ. ಈ ನಡುವೆ ಟೊಮೆಟೊ ಮಾತ್ರವಲ್ಲದೆ ಹಲವಾರು ತರಕಾರಿಗಳ ದರವು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಮುಖ್ಯವಾಗಿ ಶುಂಠಿ ಹಾಗೂ ಮೆಣಸಿನಕಾಯಿ ದರವು ಹೆಚ್ಚಳವಾಗಿದೆ. ಟೊಮೆಟೊ ಈಗ ಟ್ರೋಲ್ ಆಗುತ್ತಿರುವಾಗ ದೇಶದಲ್ಲಿ ಹೂಕೋಸು, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ದರವು ಗ್ರಾಹಕರ ಬಜೆಟ್ ಮೇಲೆ ಪ್ರಭಾವ ಉಂಟು ಮಾಡಿದೆ.


Click it and Unblock the Notifications