ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಬಂಪರ್ ಘೋಷಣೆ ಮಾಡಲಾಗಿದೆ. ವಿವಿಧ ವಲಯಗಳಿಗೆ ಬಜೆಟ್‌ನಲ್ಲಿ ಅನುದಾನ ನೀಡಿದಂತೆ ಪ್ರವಾಸೋದ್ಯಮಕ್ಕೆ ಈ ಬಾರಿ ಬಂಪರ್ ಉಡುಗೊರೆ ನೀಡಿದ್ದಾರೆ.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮತ್ತಷ್ಟು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಮಾಡಲು, ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಸಾಹಸ ಪ್ರವಾಸೋದ್ಯವನ್ನು ಉತ್ತೇಜಿಸಲು ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್/ ರೋಪ್ ವೇ ಸೌಲಭ್ಯ ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.
ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯವನ್ನು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ನಾಗಾವಿಯಲ್ಲಿ ಸ್ಥಾಪಿಸಲಾಗಿತ್ತು ಎಂಬುದು ಸ್ಥಳೀಯರ ನಂಬಿಕೆ. ಅಲ್ಲಿನ ಪ್ರಾಚ್ಯಾವೇಶಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ನೆರವು ನೀಡಲು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡಲಾಗುವುದು ಎಂದಿದ್ದಾರೆ.

ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು. ಬೀದರ್ ಹಾಗೂ ವಿಜಯಪುರದಲ್ಲಿ ಕರೇಜ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ 15 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಬಜೆಟ್ ವೇಳೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆ.ಎಲ್.ಆರ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲಾಗುವುದು. ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಸಿಎಂ ಸಿದ್ದರಾಯಮಯ್ಯ ಹೇಳಿದ್ದಾರೆ.


Click it and Unblock the Notifications