ಸರ್ಕಾರದ ವಿರುದ್ಧ ಸಾರಿಗೆ ನೌಕರರ ಸಮರ ಇನ್ನೂ ನಿಂತಿಲ್ಲ. ಸಂಬಳ ಹೆಚ್ಚಳ, ಬಾಕಿ ಸಂಬಳ, 2024 ರಲ್ಲಾದ ವೇತನ ಪರಿಷ್ಕರಣೆಯನ್ನು ಜಾರಿಗೊಳಿಸುವಂತೆ ಸಾರಿಗೆ ನೌಕರರು (Transport Workers) ಬೇಡಿಕೆ ಇಡುತ್ತಲೇ ಇದ್ದಾರೆ. ಅಲ್ಲದೇ 2025ರ ಆಗಸ್ಟ್‌ನಲ್ಲೊಮ್ಮೆ ಇದೇ ವಿಷಯ ಸಂಬಂಧಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದ್ರೆ ಹೈಕೋರ್ಟ್ ಆದೇಶದ ಬೆನ್ನಲ್ಲೇ ಮುಷ್ಕರ ಹಿಂಪಡೆಯಲಾಯಿತು. ಇನ್ನು ಇದೀಗ ಸಾರಿಗೆ ಮುಷ್ಕರಕ್ಕೆ (Strike) ಮತ್ತೆ ನಾಲ್ಕು ನಿಗಮಗಳು (BMTC, KSRTC, NWKRTC, KKRTC) ಮುಂದಾಗಿದ್ದು, ಈ ಬಾರಿ ಸೈಲೆಂಟ್ ಆಗಿಯೇ ಎದ್ದು ನಿಂತಿದೆ.

ಮತ್ತೆ ತಲೆ ಎತ್ತಿದ ಸಾರಿಗೆ ಮುಷ್ಕರ!
ಆಗಸ್ಟ್ 5 ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದಾಗ ಸರ್ಕಾರ ಸಾಲು ಸಾಲು ಸಂಧಾನ ಸಭೆ ನಡೆಸಿ, ಮುಷ್ಕರ ನಡೆಸದಂತೆ ಮನವೊಲಿಸಿತ್ತು. ಅಲ್ಲದೇ ಹೈಕೋರ್ಟ್ ಕೂಡಾ ಆದೇಶ ನೀಡಿತ್ತು. ಆದ್ರೆ 2 ವರ್ಷವಾದರೂ ಸಾರಿಗೆ ನೌಕರರ ಬೇಡಿಕೆಗೆ ಪ್ರತಿಫಲ ಸಿಕ್ಕಿಲ್ಲ. ಇದೀಗ ವೇತನ ಹೆಚ್ಚಳವಾಗದೆ, ಬಾಕಿ ಸಂಬಳ ಇನ್ನೂ ನೀಡದೆ ಸರ್ಕಾರ ಸಾರಿಗೆ ನೌಕರರನ್ನು ಸತಾಯಿಸುತ್ತಿರುವುದರಿಂದ ಸಾರಿಗೆ ಮುಷ್ಕರಕ್ಕೆ ಮುಂದಾಗಿದೆ. ಇದೀಗ ಕೊನೆಗೂ ಬಿಸಿ ಮುಟ್ಟಿಸಲು ಸಾರಿಗೆ ನೌಕರರು ಮುಂದಾಗಿದ್ದು, ಪ್ರತಿಭಟನೆಗೆ ಸಕಲ ತಯಾರಿ ನಡೆಸಿದೆ ಎನ್ನಲಾಗಿದೆ. ಈ ಪರಿಣಾಂ ಕೆಲವೇ ದಿನಗಳಲ್ಲಿ ಬಸ್ ಓಡಾಟ ಸ್ತಬ್ಧವಾಗಲಿದೆ ಎಂದು ಹೇಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಕೂಡಾ ತೀವ್ರ ಸಮಸ್ಯೆ ಎದುರಾಗಲಿದೆ.
ಸಂಧಾನ ಸಭೆಯಲ್ಲೂ ಸಿಗದ ರೆಸ್ಪಾನ್ಸ್!
ಕಳೆದ ಶನಿವಾರವಷ್ಟೇ ಸಾರಿಗೆ ಸಚಿವರ ಜೊತೆ, ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ ಬೇಡಿಕೆಗಳಿ ತಕ್ಕಂತೆ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆ, ಸಾರಿಗೆ ನೌಕರರು ಮತ್ತೆ ರೊಚ್ಚಿಗೆದ್ದಿದ್ದಾರೆ. ಅದೇ ಕಾರಣದಿಂದ ನೌಕರರ ವೇತನ ಹೆಚ್ಚಳ, ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ದಿನಾಂಕ ನಿಗದಿ ಮಾಡದೆಯೇ ಮುಷ್ಕರಕ್ಕೆ ಮುಂದು!
ಈ ಹಿಂದೆಲ್ಲಾ ಪ್ರತಿಭಟನೆಗೂ ಮುನ್ನ ಸೂಚನೆ, ಎಚ್ಚರಿಕೆ ದೃಷ್ಟಿಯಲ್ಲಿ ಮೊದಲೇ ದಿನಾಂಕ ನಿಗದಿ ಮಾಡಿ ಘೋಷಣೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಸಾರಿಗೆ ಮುಷ್ಕರ ದಿನ ನಿಗದಿ ಪಡಿಸದೆಯೇ ಹಠಾತ್ ಕೈಗೊಳ್ಳಲಿದೆ ಎಂದು ವರದಿಯಾಗಿದೆ. ಯಾವುದೇ ನೋಟಿಸ್ ನೀಡದೆಯೇ ಏಕಾಏಕಿ ಸಾರಿಗೆ ಮುಷ್ಕರ ನಡೆಸಲು ಈಗಾಗಲೇ ನಿಗಮಗಳು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಸಾರಿಗೆ ನೌಕರರ ಬೇಡಿಕೆಯೇನು?
- 38 ತಿಂಗಳ ಬಾಕಿ ವೇತನವನ್ನು ನೀಡುವುದು.
- 01-01-2024 ರಿಂದ ಹೆಚ್ಚಳವಾಗಬೇಕಿದ್ದ ವೇತನವನ್ನು ಜಾರಿಗೊಳಿಸುವುದು.
- ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನವಾಗಿ ವೇತನ ನೀಡುವುದು.
- ಕಾರ್ಮಿಕರ ಕಿರುಕುಳಕ್ಕೆ ಬ್ರೇಕ್
- ವೇತನ ಹೆಚ್ಚಳ ಮಾಡುವುದು
ಸದ್ಯ ಸಾರಿಗೆ ಮುಷ್ಕರ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆಯಾದರೂ, ಯಾವಾಗಿನಿಂದ ಎಂಬ ಮಾಹಿತಿ ಇನ್ನೂ ಘೋಷಣೆಯಾಗಿಲ್ಲ. ಆದ್ರೆ ಸರ್ಕಾರ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಿದೆ. ಏಕೆಂದರೆ ಈಗಾಗಲೇ ಸಿಎಂ, ಸಾರಿಗೆ ಸಚಿವರ ಜೊತೆ ನೌಕರರು ಹಲವರು ಬಾರಿ ಚರ್ಚೆ ಮಾಡಿದ್ದಾರೆ.


Click it and Unblock the Notifications