ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಇಸ್ರೇಲ್ ಹಾಗೂ ಅಮೆರಿಕದ ಕರಿನೆರಳು ಇರಾನ್‌ನನ್ನು ಕಿತ್ತು ತಿನ್ನುತ್ತಿದೆ. ಹಳೆಯ ವೈಷಮ್ಯ ಈಗ ಸಂಘರ್ಷದ ರೂಪದಲ್ಲಿ ತಾಂಡವವಾಡುತ್ತಿದೆ. ಜಾಗತಿಕ ವಲಯದಲ್ಲಿ ಈ ಬೆಳವಣಿಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ. ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಹೌದು, ಸದ್ಯಕ್ಕೆ ಇರಾನ್ ಮೇಲೆ ನಡೆಯುತ್ತಿರುವ ದಾಳಿ ನಿಲ್ಲೋದಿಲ್ಲ. ಅಗತ್ಯ ಇರೋವರೆಗೂ ಯುದ್ಧ ಮುಂದುವರಿಯುತ್ತೆ ಎಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇತ್ತ ದೇಶದ ಸರ್ವೋಚ್ಚ ನಾಯಕನ ಹತ್ಯೆ ಇರಾನಿಯರಿಗೆ ಹೊಸ ಆಡಳಿತ ವ್ಯವಸ್ಥೆ ರೂಪಿಸಲು ಒಂದು ಅವಕಾಶವಾಗಬಹುದು ಎಂಬ ಮಾತನ್ನೂ ಅವರು ಹೇಳಿದ್ದಾರೆ. ಈ ಹೇಳಿಕೆಗಳು ವಿಶ್ವದ ಗಮನ ಸೆಳೆದಿವೆ.
ಇನ್ನು ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ಪ್ರದೇಶದ ಕೆಲವು ತೈಲ ಸಮೃದ್ಧ ರಾಷ್ಟ್ರಗಳ ಮೇಲೆ ಪ್ರತಿದಾಳಿಗಳನ್ನು ಆರಂಭಿಸಿದೆ ಎಂಬ ವರದಿಗಳು ಹೊರಬಂದಿವೆ. ಹಲವು ವರ್ಷಗಳಿಂದ ಸ್ಥಿರವಾಗಿದ್ದ ಈ ಪ್ರದೇಶದಲ್ಲಿ ಈಗ ಭದ್ರತಾ ಆತಂಕ ಹೆಚ್ಚಾಗಿದೆ. ದುಬೈನ ಪಾಮ್ ಜುಮೇರಾ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದ ಬಳಿಕ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ-ಇರಾನ್ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಒಮಾನ್ ಹೊರತುಪಡಿಸಿ, ಇತರ ಗಲ್ಫ್ ರಾಷ್ಟ್ರಗಳ ಮೇಲೂ ದಾಳಿಗಳು ನಡೆದಿರುವ ಸಾಧ್ಯತೆ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಈ ಬೆಳವಣಿಗೆಗಳಿಂದ ಪ್ರದೇಶದ ರಾಜಕೀಯ ಹಾಗೂ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀಳುವ ಭೀತಿ ಉಂಟಾಗಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಉನ್ನತ ಸೈನಿಕ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿವೆ. ಈ ಸುದ್ದಿ ಇರಾನ್ ಸೈನಿಕ ವ್ಯವಸ್ಥೆಗೆ ದೊಡ್ಡ ಹೊಡೆತವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ನಿರೀಕ್ಷೆ ಮುಂದುವರಿದಿದೆ.
ಇರಾನ್‌ನ ಕ್ರಾಂತಿಕಾರಿ ಪಡೆ ಇಸ್ರೇಲ್ ಕಡೆಗೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ ಎಂದು ಹೇಳಲಾಗಿದೆ. ಇಸ್ರೇಲ್ ದೇಶವ್ಯಾಪಿ ಎಚ್ಚರಿಕೆ ಘೋಷಿಸಿ, ಒಳಬರುವ ದಾಳಿಗಳನ್ನು ತಡೆಯಲು ಕ್ರಮ ಕೈಗೊಂಡಿದೆ. ಬಹ್ರೇನ್, ಕುವೈತ್, ಕತಾರ್, ಇರಾಕ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಎಚ್ಚರಿಕೆ ಸೈರನ್‌ಗಳು ಮೊಳಗಿವೆ. ಕೆಲವು ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವೆ.
ಯುಎಇ ರಾಜಧಾನಿಯಲ್ಲಿ ದಾಳಿಯ ಅವಶೇಷಗಳು ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ವರದಿ ಬಂದಿದೆ. ಈ ಘಟನೆಯಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಒಟ್ಟಾರೆ, ಅಮೆರಿಕ-ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮಧ್ಯಪ್ರಾಚ್ಯದಲ್ಲಿ ಅಶಾಂತಿಯನ್ನು ಹೆಚ್ಚಿಸಿದ್ದು, ಜಾಗತಿಕ ಸಮುದಾಯ ಶಾಂತಿಯತ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚುತ್ತಿದೆ.


Click it and Unblock the Notifications