ಇಸ್ರೇಲ್-ಹಮಾಸ್ ಭೀಕರ ಯುದ್ಧದಿಂದಾಗಿ (Israel-Hamas War) ಗಾಜಾ ಪಟ್ಟಿ ಅಕ್ಷರಶಃ ನಲುಗಿ ಹೋಗಿದೆ. 2023 ರಲ್ಲಿ ಆರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಭಯಾನಕ ಸಂಘರ್ಷ, ಕೊನೆಗೂ ಕದನ ವಿರಾಮಕ್ಕೆ ಸಾಕ್ಷಿಯಾಯಿತು. ಇದೀಗ ಗಾಜಾ (Gaza) ಯುದ್ಧ ನಂತರದ ಶಾಂತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೌದು, ಇದೀಗ ಟ್ರಂಪ್ ಅಂತರಾಷ್ಟ್ರೀಯ "ಶಾಂತಿ ಮಂಡಳಿ" (Board Of Peace) ಸ್ಥಾಪನೆ ಮಾಡಿದ್ದಾರೆ. ಇದೀಗ ಈ ಬೋರ್ಡ್ ಆಫ್ ಫೀಸ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ( ಆಹ್ವಾನಿಸಿದ್ದು, ಶಾಂತಿ ಮಂಡಳಿ ಬಗ್ಗೆ ಭಾರೀ ಚರ್ಚೆಗಳು ಹುಟ್ಟಿಕೊಂಡಿದೆ.

"ಬೋರ್ಡ್ ಆಫ್ ಪೀಸ್" ಎಂದರೇನು?
ಬೋರ್ಡ್ ಆಫ್ ಪೀಸ್ ಎಂದರೆ, ಟ್ರಂಪ್ ಆಡಳಿತದಿಂದ ರಚಿಸಲಾದ ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದ ನಲುಗಿ ಹೋಗಿರುವ ಗಾಜಾ ಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಹಮಾಸ್ ನಿಯಂತ್ರಣ, ಪುನರ್ ನಿರ್ಮಾಣ ಮತ್ತು ತಾತ್ಕಾಲಿಕವಾಗಿ ಅಮೆರಿಕಾ ಆಡಳಿತ ವಹಿಸುವ ಉದ್ದೇಶವನ್ನು ಹೊಂದಿದೆ. ಇದು ಟ್ರಂಪ್ ಅವರ "20 ಪಾಯಿಟ್ ಕಾಂಪ್ರಿಹೆನ್ಸಿವ್ ಪ್ಲಾನ್ ಟು ಎಂಡ್ ದಿ ಗಾಜಾ ಕಾನ್ಫ್ಲಿಕ್ಟ್"ನ ಭಾಗವಾಗಿದೆ. ಯುನ್ ಸೆಕ್ಯೂರಿಟಿ ಕೌನ್ಸಿಲ್ ರೆಸಲ್ಯೂಷನ್ 2803ರ ಅಡಿಯಲ್ಲಿ ಬೆಂಬಲ ಪಡೆದ ಈ ಬೋರ್ಡ್, ಭವಿಷ್ಯದಲ್ಲಿ ಜಾಗತಿಕವಾಗಿ ಸಂಘರ್ಷಗಳನ್ನು ನಿರ್ವಹಿಸುವ, ಮೇಲ್ವಿಚಾರಣೆ ಮಾಡುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.
ಟ್ರಂಪ್ ಭಾರತವನ್ನು ಆಹ್ವಾನಿಸಿದ್ದೇಕೆ?
ಜನವರಿ 16, 2026 ರಂದು ಟ್ರಂಪ್ ವಿವಿಧ ದೇಶಗಳ ನಾಯಕರಿಗೆ ಆಹ್ವಾನ ಪತ್ರಗಳನ್ನು ಕಳುಹಿಸಿದ್ದಾರೆ. ಇದರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದರ ಮೋದಿಯವರಿಗೂ ಆಹ್ವಾನ ಬಂದಿತ್ತು. ಇನ್ನು ಈ ಬಗ್ಗೆ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಂಪ್ ಕಳುಹಿಸಿದ ಆಹ್ವಾನ ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಅವರು, "ಗಾಜಾಗೆ ಶಾಶ್ವತ ಶಾಂತಿಯನ್ನು ತರುವ ಶಾಂತಿ ಮಂಡಳಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಹ್ವಾನವನ್ನು ತಿಳಿಸಲು ಹೆಮ್ಮೆಯಿದೆ. ಸ್ಥಿರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ಪರಿಣಾಮಕಾರಿ ಆಡಳಿತವನ್ನು ಮಂಡಳಿಯು ಬೆಂಬಲಿಸುತ್ತದೆ!" ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ಅವರಿಗೆ ಬರೆದ ಪತ್ರದಲ್ಲಿ ಟ್ರಂಪ್, "ಭಾರತದ ಪ್ರಧಾನಮಂತ್ರಿಯಾಗಿ, ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಭದ್ರಪಡಿಸುವ ಈ ಐತಿಹಾಸಿಕ ಮತ್ತು ಭವ್ಯ ಪ್ರಯತ್ನದಲ್ಲಿ ನನ್ನೊಂದಿಗೆ ಸೇರಲು ಮತ್ತು ಅದೇ ಸಮಯದಲ್ಲಿ, ಜಾಗತಿಕ ಸಂಘರ್ಷವನ್ನು ಪರಿಹರಿಸಲು ಹೊಸ ವಿಧಾನವನ್ನು ಅನುಸರಿಸಲು ನಾನು ನಿಮಗೆ ಆಹ್ವಾನ ನೀಡುತ್ತಿರುವುದು ನನ್ನ ಗೌರವವಾಗಿದೆ!" ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ಸದ್ಯ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಭಾರತದಂತಹ ದೇಶಗಳನ್ನು ಆಹ್ವಾನಿಸಲು ಮುಖ್ಯ ಕಾರಣವೇ ಭಾರತದ ಆರ್ಥಿಕ ಶಕ್ತಿ. ಅಲ್ಲದೇ ಭಾರತ ಮಧ್ಯಪ್ರಾಚ್ಯದೊಂದಿಗೆ ಹೊಂದಿರುವ ಸಂಬಂಧ. ಇದು ಗಾಜಾ ಪುನರ್ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಶಾಂತಿ ಮಂಡಳಿಯ ಸದಸ್ಯರು!
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಪ್ರಕಾರ, ಶುಕ್ರವಾರ ಅಮೆರಿಕಾ ವೈಟ್‌ಹೌಸ್‌ನಲ್ಲಿ ಟ್ರಂಪ್ ಅವರ 20-ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವನ್ನು ಮೇಲ್ವಿಚಾರಣೆ ಮಾಡಲು "ಶಾಂತಿ ಮಂಡಳಿ"ಗೆ ನೇಮಕಗೊಂಡ ಸದಸ್ಯರ ಪಟ್ಟಿಯನ್ನು ಅನಾವರಣಗೊಳಿಸಿತು. ಶ್ವೇತಭವನದ ಹೇಳಿಕೆಯ ಪ್ರಕಾರ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರ ಹೆಸರುಗಳು ಈ ಪಟ್ಟಿಯಲ್ಲಿವೆ.
ಈ ಪಟ್ಟಿಯಲ್ಲಿ ಅಪೊಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸಿ.ಇ.ಒ. ಮಾರ್ಕ್ ರೋವನ್ ಮತ್ತು ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಗೇಬ್ರಿಯಲ್ ಸಹ ಇದ್ದಾರೆ ಎನ್ನಲಾಗಿದೆ. ಗಾಜಾ ಕಾರ್ಯಾಕಾರಿ ಮಂಡಳಿಯ ಸದಸ್ಯರನ್ನೂ ಘೋಷಿಸಲಾಗಿದ್ದು, ಬ್ಲೇರ್, ಕುಶ್ನರ್ ಮತ್ತು ವಿಟ್ಕಾಫ್ ಅವರೊಂದಿಗೆ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿಡಾನ್, ಕತಾರ್ ರಾಜತಾಂತ್ರಿಕ ಅಲಿ ಅಲ್ ಥಾವಾಡಿ ಸೇರಿದಂತೆ ಇತರರು ಸೇರಿದ್ದಾರೆ.
ಶಾಂತಿ ಮಂಡಳಿಯ ಅಧ್ಯಕ್ಷ ಯಾರು?
"ಶಾಂತಿ ಮಂಡಳಿ"ಯ ಅಧ್ಯಕ್ಷರಾಗಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಕಾರ್ಯನಿರ್ವಹಿಸಲಿದ್ದು, ಗಾಜಾದಲ್ಲಿ ಶಾಂತಿ ಮತ್ತು ದೀರ್ಘಕಾಲೀನ ಯಶಸ್ಸಿಗೆ ನಿರ್ಣಾಯಕವಾದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಾಕಾರಿ ಮಂಡಳಿಯ ಸದಸ್ಯರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಇವುಗಳಲ್ಲಿ ಆಡಳಿತ ಸಾಮರ್ಥ್ಯ ನಿರ್ಮಾಣ, ಪ್ರಾದೇಶಿಕ ಸಂಬಂಧಗಳು, ಪುನರ್‌ನಿರ್ಮಾಣ, ಹೂಡಿಕೆ ಪ್ಲಾನ್, ದೊಡ್ಡ ಪ್ರಮಾಣದ ನಿಧಿ ಸಂಗ್ರಹಣೆ ಮತ್ತು ಬಂಡವಾಳ ಸೇರಿಸುವುದು ಕೂಡಾ ಸೇರಿವೆ.


Click it and Unblock the Notifications