ಕಳೆದ ವರ್ಷವಿಡೀ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಘೋಷಣೆಯಲ್ಲೇ ಬ್ಯುಸಿಯಾಗಿದ್ದರು. ಆದರೆ ಟ್ರಂಪ್ ಜಾರಿಗೆ ತಂದ ಸುಂಕ ನೀತಿಗಳು ಇದೀಗ ಭಾರೀ ತಿರುವು ಪಡೆದುಕೊಂಡಿದೆ. ಅಮೆರಿಕದ ಸುಪ್ರೀಂ ಕೋರ್ಟ್ (America Supreme Court) ಫೆಬ್ರವರಿ 20 ರಂದು ಟ್ರಂಪ್ ಅವರು IEEPA ಅಡಿಯಲ್ಲಿ ಘೋಷಣೆ ಮಾಡಿದ್ದ ಜಾಗತಿಕ ಸುಂಕಗಳನ್ನು ರದ್ದು ಪಡಿಸಿ, ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಈ ರೀತಿಯ ಸುಂಕ ವಿಧಿಸಿಲು ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನೂ ಲೆಕ್ಕಿಸದೆ, ಟ್ರಂಪ್ ಅವರು ಹೊಸದಾಗಿ 15% ಜಾಗತಿಕ ಟ್ಯಾರಿಫ್ (Tariffs) ವಿಧಿಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆಗಳು ಜಾಗತಿಕವಾಗಿ ವ್ಯಾಪಾರದ ಮೇಲೆ ಭಾರೀ ಪ್ರಭಾವ ಬೀರುತ್ತಿದ್ದು, ಭಾರತದ ಆರ್ಥಿಕತೆಯ ಮೇಲೂ ಭಾರೀ ಪರಿಣಮಾ ಬೀರಲಿದೆ ಎನ್ನಲಾಗುತ್ತಿದೆ.

ಇದೀಗ ಟ್ರಂಪ್ ಸುಂಕ ಹೇರಿಕೆ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಇಂದು (ಫೆ.23) ಮಾತನಾಡಿದ್ದು, ಭಾರತದ ಆರ್ಥಿಕತೆ ಮೇಲೆ ಬೀರುವ ಪರಿಣಾಮದ ಬಗ್ಗೆ "ಈಗ ಹೇಳೋದು ಬಹಳ ಬೇಗವಾಗಿದೆ" ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಅಮೆರಿಕಾದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ "ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕ ಭಾರತದ ಆರ್ಥಿಕತೆಯ ಮೇಲೆ ಇದರ ಪರಿಣಾಮದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದು ಸ್ವಲ್ಪ ಬೇಗವಾಗಿದೆ ಎಂದು ಹೇಳಿದರು. ದ್ವಿಪಕ್ಷೀಯ ಒಪ್ಪಂದದ ವಿಷಯದಲ್ಲಿ ವಾಣಿಜ್ಯ ಸಚಿವಾಲಯ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು. ಸದ್ಯ ಭಾರತದಿಂದ ಅಮೆರಿಕಕ್ಕೆ ಹೋಗಬೇಕಿದ್ದ ನಿಯೋಗದ ಭೇಟಿಯನ್ನು ನಿಲ್ಲಿಸಲಾಗಿದೆ. ಮುಂದಿನ ಮಾತುಕತೆಗಳಿಗೆ ಯಾವಾಗ ಹೋಗಬೇಕೆಂದು ನಿರ್ಧರಿಸಲು ವಾಣಿಜ್ಯ ಸಚಿವಾಲಯವೇ ನಿರ್ಧರಿಸುತ್ತದೆ ಎಂದು ಹೇಳಿದರು. ಅಲ್ಲದೇ ಬಹಳ ತುರ್ತಾಗಿ ನಡೆದಿರುವ ಬೆಳವಣಿಗೆ ಆಗಿರುವುದರಿಂದ, ಸಂಪೂರ್ಣ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಸೂಚಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಸುಂಕದ ಸಮರ!
ಅಮೆರಿಕದ ಸುಪ್ರೀಂ ಕೋರ್ಟ್ ಫೆಬ್ರವರಿ 20 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ತೀರ್ಪು ನೀಡಿದ್ದಾರೆ. ಈ ತೀರ್ಪಿನ ಬೆನ್ನಲ್ಲೇ ಡೊನಾಲ್ಟ್ ಟ್ರಂಪ್ ಜಾಗತಿಕವಾಗಿ 10% ಸುಂಕ ವಿಧಿಸಿದ್ದರು. ಆದರೆ ಶನಿವಾರ ಬರುತ್ತಿದ್ದಂತೆ ಮನಸ್ಸು ಬದಲಾಯಿಸಿದ ಟ್ರಂಪ್ ಮತ್ತೆ 5% ಏರಿಕೆ ಮಾಡಿ, ಸುಂಕವನ್ನು 15% ಏರಿಕೆ ಮಾಡಿದರು. ಇನ್ನು ಫೆಬ್ರವರಿ 24 ರಿಂದ ಎಲ್ಲಾ ದೇಶಗಳಿಂದ ಆಮದುಗಳ ಮೇಲೆ 15% ಸುಂಕದ ಪರಿಣಾಮ ಬೀರಲಿದೆ. ಇದು ಭಾರತ ಸೇರಿದಂತೆ ಹಲವು ದೇಶಗಳ ರಫ್ತುಗಳ ಮೇಲೆ ಪ್ರಭಾವ ಬೀಡಲಿದೆ.
ಈಗಾಗಲೇ ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿತ್ತು. ಅಲ್ಲದೇ ಭಾರತದ ವಿರುದ್ಧ ಅಮೆರಿಕ ವಿಧಿಸಿದ್ದ 50% ಸುಂಕವನ್ನು 18% ಇಳಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದ್ರೆ ಇದೀಗ ಮತ್ತೆ ಟ್ರಂಪ್ ಸುಂಕದ ಸಮರಕ್ಕೆ ಮುಂದಾಗಿದ್ದು, ಮತ್ತೆ ಮಾತುಕತೆಗಳು ಸ್ಥಗಿತಗೊಂಡಿದೆ ಎನ್ನಲಾಗಿದೆ.


Click it and Unblock the Notifications