ತುಮಕೂರಿಗೆ ಮೆಟ್ರೋ ಬರುತ್ತಾ ಎಂಬ ಅನುಮಾನಕ್ಕೆ ಇನ್ನೇನು ಸದ್ಯದಲ್ಲೇ ತೆರೆ ಬೀಳಲಿದೆ. ಈಗಾಗಲೇ ಈ ಎತ್ತರದ ಕನಸಿನತ್ತ ಹೆಜ್ಜೆ ಇಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಮಗ (BMRCL) ಮಾರ್ಗವನ್ನು ಮಾದಾವರಿಂದ ತುಮಕೂರಿನವರೆಗೆ ವಿಸ್ತರಿಸುವ ಪ್ರಸ್ತಾಪ ಮುಂದಿಟ್ಟಿದೆ. ಯೋಜನೆಗೆ ಅನುಮೋದನೆ ಸಿಕ್ಕರೆ, ಇದು ಕರ್ನಾಟಕದ ಮೊದಲ ಅಂತರನಗರ ಮೆಟ್ರೋ ಯೋಜನೆಯಾಗಲಿದೆ. ಈ ಯೋಜನೆಯ ರೋಡ್‌ಮ್ಯಾಪ್ ಹೇಗಿದೆ ಎಂದು ತಿಳಿಯಿರಿ.

ಯೋಜನೆಯ ಮಾರ್ಗರೇಖೆ (Roadmap):
ಪ್ರಸ್ತಾವಿತ ಮಾರ್ಗವು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದ ಹತ್ತಿರದ ಮಾದಾವರ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಇಲ್ಲಿ ನಿಲ್ದಾಣವೊಂದನ್ನು ಹೊಂದಿ, ನೆಲಮಂಗಲ ತಾಲ್ಲೂಕಿನ ಪ್ರಮುಖ ನಗರ ಪ್ರದೇಶಗಳ ಮೂಲಕ ಸಾಗುತ್ತಾ ದಾಬಸ್ಪೇಟೆ ಕಡೆಗೆ ಸಾಗುತ್ತದೆ. ದಾಬಸ್ಪೇಟೆ ಬಳಿಕ ತುಮಕೂರು ಕಡೆಗೆ ಸಾಗುವ ಈ ಮಾರ್ಗವು, ತುಮಕೂರಿನ ನಾಗಣ್ಣಪಾಳ್ಯದಲ್ಲಿ ಕೊನೆಗೊಳ್ಳುತ್ತದೆ. ಇದು ಬೆಂಗಳೂರು ಮತ್ತು ತುಮಕೂರು ನಡುವಿನ ದೀರ್ಘ 2 ಗಂಟೆಗಳ ರಸ್ತೆ ಪ್ರಯಾಣವನ್ನು ಮೆಟ್ರೋ ಮೂಲಕ ಬಹುಮಟ್ಟಿಗೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಪಿಪಿಪಿ ಅಥವಾ ಎಸ್‌ಪಿವಿ ಮಾದರಿ?
ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಎರಡು ಹಣಕಾಸು ಮಾದರಿಗಳನ್ನು ಪರಿಗಣಿಸಲಾಗುತ್ತಿದೆ. ಮೊದಲನೆಯದಾಗಿ, ಪಿಪಿಪಿ (ಸಾರ್ವಜನಿಕ-ಖಾಸಗಿ ಪಾಲುದಾರಿಕೆ) ಮಾದರಿಯಲ್ಲಿ ₹20,650 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಬಹುದೆಂಬ ಪ್ರಸ್ತಾಪವಿದೆ. ಇನ್ನೊಂದೆಡೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ವಿಶೇಷ ಉದ್ದೇಶದ ವಾಹನ (SPV) ಮಾದರಿಯ ಮೂಲಕ ₹18,670 ಕೋಟಿಯ ಯೋಜನೆ ರೂಪಿಸಲಾಗುತ್ತಿದೆ.
15,000 ಪ್ರಯಾಣಿಕರು:
ಈ ಕಾರಿಡಾರ್‌ನಲ್ಲಿ ಒಂದು ಘಂಟೆಗೆ ಸುಮಾರು 15,000 ಜನ ಪ್ರಯಾಣಿಕರು ಚಲಿಸಬಹುದೆಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಮೂರು ಡಬ್ಬೆಗಳ ರೈಲುಗಳು ನಾಲ್ಕರಿಂದ ಐದು ನಿಮಿಷಗಳ ಗ್ಯಾಪ್‌ನಲ್ಲಿ ಕಾರ್ಯಾಚರಿಸುವ ಪ್ರಸ್ತಾಪವಿದೆ. ನೆಲಮಂಗಲ ಮತ್ತು ತುಮಕೂರಿನಲ್ಲಿ ತಲಾ ಒಂದು ಮೆಟ್ರೋ ಡಿಪೋಗಳನ್ನು ನಿರ್ಮಿಸುವ ಯೋಜನೆಯೂ ಇದೆ.
2032ರ ಹೊತ್ತಿಗೆ ದೈನಂದಿನ ಪ್ರಯಾಣಿಕರ ಸಂಖ್ಯೆ 2.8 ಲಕ್ಷ?
ಈ ಯೋಜನೆಯ ಕಾರ್ಯಸಾಧ್ಯತೆ ಬಲವಾಗಿ ದೃಢಗೊಂಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. 2032ರ ಹೊತ್ತಿಗೆ ಈ ಮಾರ್ಗದಲ್ಲಿ ಪ್ರತಿದಿನ ಸುಮಾರು 2.8 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ. 2061ರ ವೇಳೆಗೆ ಈ ಸಂಖ್ಯೆ 5 ಲಕ್ಷದಷ್ಟು ಆಗಬಹುದು ಎನ್ನಲಾಗಿದೆ.
ರಿಯಲ್ ಎಸ್ಟೇಟ್ ಅಭಿವೃದ್ಧಿಯೊಂದಿಗೆ ಹೂಡಿಕೆ ಆಕರ್ಷಣೆ:
ಯೋಜನೆಯು ಪಿಪಿಪಿ ಮಾದರಿಯಲ್ಲಿ ಅನುಮೋದನೆ ಪಡೆಯುತ್ತಿದ್ದರೆ, ಪ್ರತಿ ನಿಲ್ದಾಣದ ಸುತ್ತಲೂ 250 ಎಕರೆ ಭೂಮಿಯಲ್ಲಿ ವಾಣಿಜ್ಯ ಮತ್ತು ವಸತಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲು ಸಲಹೆ ನೀಡಲಾಗಿದೆ. ಇದರಿಂದ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಯೋಜನೆಯಿಗಾಗಿ ಒಟ್ಟು 470 ಎಕರೆ ಭೂಮಿ ಅಗತ್ಯವಿದೆ ಎಂದು ವರದಿಯು ತಿಳಿಸಿದೆ.
ರಾಜ್ಯದ ಮೊದಲ ಅಂತರ್ನಗರ ಮೆಟ್ರೋ ಕನಸು ಸಾಧ್ಯವೇ?
ಈ ಯೋಜನೆಯ ಅನುಮೋದನೆಯೊಂದಿಗೆ ಕರ್ನಾಟಕ ತನ್ನ ಮೊದಲ ಅಂತರ್ನಗರ ಮೆಟ್ರೋ ಯೋಜನೆಗೆ ಹೆಜ್ಜೆ ಇಡುವ ಸಾಧ್ಯತೆಯಿದೆ. ಇದು ಕೇವಲ ಬಿಎಂಟಿಸಿ ಅಥವಾ ಪ್ರಾದೇಶಿಕ ರೈಲ್ವೆಗಳಿಗೆ ಪರ್ಯಾಯವಲ್ಲ, ಬದಲಿಗೆ ಕೈಗಾರಿಕಾ ನಗರಗಳ ನಡುವೆ ನೇರ ಸಂಪರ್ಕ ನೀಡುವ ನೂತನ ಯುಗದ ಆರಂಭವೂ ಆಗಬಹುದು.
ಮೆಟ್ರೋ ಯೋಜನೆಯ ಮುಂದಿನ ಹೆಜ್ಜೆಗಳು ಮತ್ತು ನಿರೀಕ್ಷೆಗಳು:
ತುಮಕೂರು ಮೆಟ್ರೋ ಯೋಜನೆಯ ಅನುಮೋದನೆ ಬಳಿಕ, ಯೋಜನೆಯ ಕಾರ್ಯಾನ್ವಯಣೆಗೆ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಸೇರಿ ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ. ಈ ಯೋಜನೆಯ ಮೂಲಕ ಬೆಂಗಳೂರು ಮತ್ತು ತುಮಕೂರು ನಡುವೆ ಸಂಚಾರದ ಸಮಯ ಕಡಿಮೆಯಾಗುವುದರಿಂದ ವ್ಯಾಪಾರ, ಉದ್ಯಮ ಹಾಗೂ ಸಾಮಾನ್ಯ ಜನರ ಜೀವನದಲ್ಲಿ ಬೃಹತ್ ಸದುಪಯೋಗ ಆಗಲಿದೆ. ಹೊಸ ಮೆಟ್ರೋ ಮಾರ್ಗದಿಂದ ಮಾದವರ, ನೆಲಮಂಗಲ, ದಾಬಸ್ಪೇಟೆ ಸೇರಿದಂತೆ ಪ್ರಮುಖ ಪ್ರದೇಶಗಳ ಅಭಿವೃದ್ಧಿ ಮತ್ತು ನಗರೀಕರಣಕ್ಕೂ ಉತ್ತೇಜನ ದೊರೆಯಲಿದೆ. 2032 ರೊಳಗೆ ದೈನಂದಿನ ಪ್ರಯಾಣಿಕರ ಸಂಖ್ಯೆ ಲಕ್ಷಾಂತರಕ್ಕೇರಬೇಕೆಂಬ ಗುರಿಯನ್ನು ಹೊಂದಿರುವ ಈ ಯೋಜನೆ, ಕರ್ನಾಟಕದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ.
ಇದರಿಂದ ಪ್ರವಾಸಿಗರು, ಉದ್ಯೋಗಿಗಳೂ ಸೇರಿದಂತೆ ಪ್ರತಿಯೊಬ್ಬರೂ ವೇಗದ, ಸುಲಭ ಮತ್ತು ಆರಾಮದಾಯಕ ಪ್ರಯಾಣವನ್ನು ಅನುಭವಿಸಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications