ಭಾರತದಲ್ಲಿನ ಒಂದು ಮಿಲಿಯನ್ ಗಿಂತಲೂ ಹೆಚ್ಚು ಉಬರ್ ಚಾಲಕರ ಕೆಲಸದ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಕಂಪನಿಯು ಹೊಸ ವೈಶಿಷ್ಟ್ಯಗಳ ಸರಣಿಯನ್ನೇ ಪರಿಚಯಿಸಿದೆ. ಈ ಪೈಕಿ ಪ್ರಮುಖವಾಗಿ ಮಹಿಳಾ ಚಾಲಕಿಯರು ಮಹಿಳಾ ಸವಾರರಿಂದ ಮಾತ್ರ ಟ್ರಿಪ್ ರಿಕ್ವೆಸ್ಟ್ ಗಳನ್ನು ಸ್ವೀಕರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಲ್ಲದೇ ಅನೇಕ ಹೊಸ ಫೀಚರ್ ಗಳನ್ನು ಪರಿಚಯಿಸಿರುವುದರಿಂದ ಲಕ್ಷಾಂತರ ಉಬರ್ ಚಾಲಕರಿಗೆ ಅನುಕೂಲವಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಉಬರ್ ಈ ಹೊಸ ಫೀಚರ್ ಗಳನ್ನು ಸುರಕ್ಷತೆ, ಅನುಕೂಲತೆ ಮತ್ತು ಪಾರದರ್ಶಕತೆಯ ಮೇಲೆ ಕೇಂದ್ರೀಕರಿಸಿ ಹೊರತಂದಿದೆ ಎನ್ನಲಾಗಿದೆ.
ನವೆಂಬರ್ 14 ರಂದು ಘೋಷಿಸಲಾದ ಈ ಕ್ರಮವು ಚಾಲಕರಿಗೆ ಸುರಕ್ಷಿತ ಸಂಚಾರ, ಸುಲಭ ಪಾವತಿಗಳು ಮತ್ತು ಉತ್ತಮ ಪ್ರಕ್ರಿಯೆಗಳನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ಹಲವು ಯೋಜನೆಗಳನ್ನು ಒಳಗೊಂಡಿದೆ. ಉಬರ್ ತನ್ನ ಚಾಲಕರ ಕಲ್ಯಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಗಿಗ್ ಮತ್ತು ಅಸಂಘಟಿತ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ಡೇಟಾಬೇಸ್ ಅನ್ನು ನಿರ್ಮಿಸುವ ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಚಾಲಕರನ್ನು ಪ್ರೋತ್ಸಾಹಿಸುತ್ತಿದೆ. ಈ ಯೋಜನೆಯಡಿ, ಪೋರ್ಟಲ್‌ನಲ್ಲಿ ಮೊದಲ 10,000 ಚಾಲಕರು ನೋಂದಾಯಿಸಿಕೊಂಡರೆ, ಅವರಿಗೆ ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ನಗದು ಬಹುಮಾನವನ್ನು ನೀಡಲಾಗುತ್ತಿದೆ.

ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಈ ಬಗ್ಗೆ ಮಾತನಾಡಿ" ಉಬರ್ ಭಾರತದಲ್ಲಿ ಒಂದು ಮಿಲಿಯನ್ಗಿಂತ ಹೆಚ್ಚು ಚಾಲಕರಿಗೆ ಕೆಲಸದ ಅವಕಾಶಗಳನ್ನು ಒದಗಿಸುತ್ತಿದೆ. ನಮ್ಮ ಗುರಿ, ಚಾಲಕರಿಗೆ ಹೊಂದಿಕೊಳ್ಳುವ ಕೆಲಸದ ಅತ್ಯುತ್ತಮ ವೇದಿಕೆಯನ್ನು ಒದಗಿಸುವುದು. ಈಗ ನಾವು ಚಾಲಕರ ಸುರಕ್ಷತೆ ಹೆಚ್ಚಿಸಿ, ಅವರ ಕೆಲಸವನ್ನು ಸುಲಭಗೊಳಿಸಿ ಮತ್ತು ಅವರಿಗೆ ಹೆಚ್ಚು ಪಾರದರ್ಶಕತೆಯನ್ನು ನೀಡುವ ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದೇವೆ" ಎಂದು ಹೇಳಿದ್ದಾರೆ.
ಮಹಿಳಾ ಗ್ರಾಹಕರರಿಗೆ ಚಾಲಕಿಯರಿಂದ ಸೇವೆ:
ಉಬರ್ ಪರಿಚಯಿಸಿದ ಹೊಸ ಫೀಚರ್ ನಿಂದ ಮಹಿಳಾ ಸವಾರರನ್ನು ಮಾತ್ರ ಗ್ರಾಹಕರನ್ನಾಗಿ ಪಡೆಯಲು ಇನ್ಮುಂದೆ ಉಬರ್ ಚಾಲಕಿಯರಿಗೆ ಸಾಧ್ಯವಾಗಲಿದೆ. ಚಾಲಕರ ಪ್ರತಿಕ್ರಿಯೆಯ ಆಧಾರದ ಮೇಲೆ ಪರಿಚಯಿಸಲಾದ ಈ ಐಚ್ಛಿಕ ವೈಶಿಷ್ಟ್ಯವು ಈಗಾಗಲೇ 21,000 ಟ್ರಿಪ್‌ಗಳನ್ನು ಯಶಸ್ವಿಯಾಗಿ ಕೈಗೊಂಡೆ. ಇದು ಮಹಿಳಾ ಚಾಲಕರು ತಮ್ಮ ಸುರಕ್ಷತೆಗೆ ಆದ್ಯತೆ ನೀಡಲು ಮತ್ತು ಕೆಲಸದ ಸಮಯವನ್ನು ಇನ್ನಷ್ಟು ಹೆಚ್ಚಿನ ಗಂಟೆಗಳ ಕಾಲ ವಿಸ್ತರಿಸಲು ಸಹಾಯ ಮಾಡುತ್ತದೆ.
ಹೆಲ್ಮೆಟ್ ಸೆಲ್ಫಿ:
ಹೊಸ ವೈಶಿಷ್ಟ್ಯಗಳ ಪೈಕಿ "ಹೆಲ್ಮೆಟ್ ಸೆಲ್ಫಿ" ಉಬರ್ ದ್ವಿಚಕ್ರ ವಾಹನ ಚಾಲಕರು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ತಮ್ಮ ಹೆಲ್ಮೆಟ್‌ನೊಂದಿಗೆ ತ್ವರಿತವಾಗಿ ಸೆಲ್ಫಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಅವರು ರಕ್ಷಣೆ ವಿಚಾರವಾಗಿ ರಾಜಿ ಮಾಡಿಕೊಳ್ಳದೇ ಇರುವುದನ್ನು ಖಾತ್ರಿಪಡಿಸುತ್ತದೆ. ಸುಧಾರಿತ,ರಿಯಲ್ ಟೈಮ್ ಪರಿಶೀಲನಾ ತಂತ್ರಜ್ಞಾನವನ್ನು ಬಳಸಿಕೊಂಡು, ಈ ವೈಶಿಷ್ಟ್ಯವು ಚಾಲಕರು ಹೆಲ್ಮೆಟ್ ಇಲ್ಲದೆ ಲಾಗ್ ಇನ್ ಮಾಡುವುದನ್ನು ತಡೆಯುತ್ತದೆ. ಪ್ರಸ್ತುತ ಅಂತಿಮ ಪರೀಕ್ಷೆಯ ಹಂತದಲ್ಲಿ, 'ಹೆಲ್ಮೆಟ್ ಪರಿಶೀಲನೆ' ಮುಂದಿನ ವರ್ಷದ ಆರಂಭದಲ್ಲಿ ರಾಷ್ಟ್ರವ್ಯಾಪಿ ಹೊರತರಲಿದೆ.
ಆಡಿಯೋ ರೆಕಾರ್ಡಿಂಗ್:
ಉಬರ್ ತನ್ನ ಚಾಲಕರ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ಆಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಚಾಲಕರು ತಾವು ಅನಾನುಕೂಲ ಸ್ಥಿತಿಯಲ್ಲಿರುವಾಗ ಪ್ರಯಾಣದ ಸಮಯದಲ್ಲಿ ಆಡಿಯೋ ರೆಕಾರ್ಡ್ ಮಾಡಬಹುದು. ಈ ರೆಕಾರ್ಡಿಂಗ್‌ಗಳು ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಆಗಿರುತ್ತವೆ ಮತ್ತು ಚಾಲಕರು ಸುರಕ್ಷತಾ ವರದಿಯನ್ನು ಸಲ್ಲಿಸಿದಾಗ ಮಾತ್ರ ಇವುಗಳನ್ನು ಪ್ರವೇಶಿಸಬಹುದು. ಇದು ಭಾರತದ ಏಕಪಕ್ಷೀಯ ಸಮ್ಮತಿಯ ಕಾನೂನಿಗೆ ಅನುಸಾರವಾಗಿರುತ್ತದೆ.
ಮುಂಗಡ ಟಿಪ್ಪಿಂಗ್:
ಈ ವೈಶಿಷ್ಟ್ಯದ ಮೂಲಕ ಗ್ರಾಹಕರು ಪ್ರಯಾಣ ಆರಂಭವಾಗುವ ಮೊದಲೇ ಚಾಲಕರಿಗೆ ಟಿಪ್ ನೀಡಬಹುದು. ಇದರಿಂದ ಚಾಲಕರು ತಮ್ಮ ಆದಾಯದ ಬಗ್ಗೆ ಖಚಿತವಾಗಿರುತ್ತಾರೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಪ್ರೇರಿತರಾಗುತ್ತಾರೆ.
ತತ್‌ಕ್ಷಣ ಪಾವತಿಗಳು:
ಉಬರ್ ತನ್ನ ಪಾವತಿ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಚಾಲಕರು ತಮ್ಮ ಗಳಿಕೆಯನ್ನು ದಿನಕ್ಕೆ ನಾಲ್ಕು ಬಾರಿ ಹಿಂಪಡೆಯಲು ಅನುವು ಮಾಡಿಕೊಟ್ಟಿದೆ. ಇದರಿಂದ ಚಾಲಕರು ತಮ್ಮ ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ಮೆಂಟರ್‌ಶಿಪ್ ಪ್ರೋಗ್ರಾಂ:
ಹೊಸ ಚಾಲಕರಿಗೆ ಅನುಭವಿ ಚಾಲಕರ ಮಾರ್ಗದರ್ಶನ ಸಿಗುವಂತೆ ಮಾಡುವ ಮೂಲಕ, ಉಬರ್ ಚಾಲಕರ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಪ್ರೋತ್ಸಾಹಿಸುತ್ತಿದೆ.


Click it and Unblock the Notifications